ಕನ್ನಡಪ್ರಭ ವಾರ್ತೆ, ಕೊಟ್ಟೂರು, ಜೂ. 8
ರಾಷ್ಟ್ರೀಯ ಹೆದ್ದಾರಿಯಂತಹ ಮಹತ್ವದ ರಸ್ತೆಯನ್ನು ಹೊಂದುವ ಅವಕಾಶಕ್ಕೆ ಧಾರ್ಮಿಕ ಮತ್ತು ಮಾರುಕಟ್ಟೆ ಸುಪ್ರಸಿದ್ಧ ಪಟ್ಟಣದ ಕೊಟ್ಟೂರು ಭಾಜನವಾಗಿದೆ. ಇದರಿಂದ ಪಟ್ಟಣ ಮತ್ತಷ್ಟು ಬಗೆಯಲ್ಲಿ ಅಭಿವೃದ್ಧಿ ದಿಕ್ಕಿನತ್ತ ಸಾಗಲು ಮುನ್ನುಡಿ ಬರೆದಂತಾಗಿದೆ.
ಪಟ್ಟಣದ ಹೃದಯಭಾಗದಲ್ಲಿ ಹಾದುಹೋಗಿರುವ ಇಟ್ಟಿಗೆ-ಕೊಟ್ಟೂರು-ಉಜ್ಜಯಿನಿ-ಜಗಲೂರು ರಸ್ತೆ, ಹಾಲಿ ಅರಭಾವಿ-ಚಳ್ಳಕೆರೆ ಹೆದ್ದಾರಿ ಎನಿಸಿಕೊಂಡಿದ್ದು, ಈ ರಸ್ತೆಯೊಂದಿಗೆ ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿಯನ್ನು ಸೇರ್ಪಡಿಸಿಕೊಂಡು ಜಗಲೂರು ಬಳಿ ಕೂಡಿಕೊಳ್ಳುವ ಹಾಲಿ ಎನ್.ಎಚ್.-13 ರಸ್ತೆಗೆ ಸಂಪರ್ಕಿಸುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸಲು ಕೇಂದ್ರ ಭೂಸಾರಿಗೆ ಸಂಪರ್ಕ ಸಚಿವ ಖಾತೆ ಪರಿಗಣಿಸಿರುವುದಲ್ಲದೆ ಮಾರ್ಚ್ ತಿಂಗಳಿನಿಂದ ಅನ್ವಯವಾಗುವಂತೆ ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಿ ಆದೇಶ ಹೊರಡಿಸಿದೆ. ಈ ನೂತನ ಹೆಸರಿನ ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಿಸುವ ಮೂಲಕ ಅಭಿವೃದ್ಧಿ ಪಡಿಸುವ ನಿಟ್ಟಿನತ್ತ ರಾಷ್ಟ್ರೀಯ ಹೆದ್ದಾರಿ ನಿಗಮ ಈಗಾಗಲೇ ಮುಂದಾಗಿ 2 ಬಾರಿ ಸರ್ವೇ ಕಾರ್ಯ ಕೈಗೊಂಡಿದೆ. ಸರ್ವೇ ಕಾರ್ಯದ ವರದಿಯನ್ನು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಇದರ ಸಾಧಕ ಬಾಧಕಗಳು ಮತ್ತು ಇತರೆ ಆವಶ್ಯಕತೆಗಳ ಅನುಗುಣವಾಗಿ ಈ ರಸ್ತೆಯನ್ನು ಅಭಿವದ್ಧಿಪಡಿಸಲು ಯೋಜನೆ ರೂಪಿಸುವ ಪ್ರಯತ್ನಗಳು ಸಾಗಿವೆ.
ರಾಷ್ಟ್ರೀಯ ಹೆದ್ದಾರಿ ರಚನೆಯ ಗಾತ್ರ ಇನ್ನೂ ಸ್ಪಷ್ಟ ಸ್ವರೂಪ ಪಡೆದುಕೊಳ್ಳದೆ ಇದ್ದರೆ ಹೆದ್ದಾರಿಯನ್ನು ಹೊಂದುವತ್ತ ಈಗಲಾದರೂ ಕೊಟ್ಟೂರು ಮುಂದಾಗಿರುವುದು ಹೆಮ್ಮೆಯ ವಿಷಯ.
ಜಿ. ಸೋಮಶೇಖರ