ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 20
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಚಿತ್ರನಟ ಶಿವರಾಜ್ಕುಮಾರ್, ಬಾಹ್ಯಾಕಾಶ ಸಂಶೋಧಕ ಡಾ ಯು.ಆರ್ ರಾವ್ ಸೇರಿದಂತೆ 8 ಜನರಿಗೆ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿದೆ ಎಂದು ವಿಶ್ವವಿದ್ಯಾಲಯ ಕುಲಪತಿ ಡಾ ಮಂಜಪ್ಪ ಡಿ. ಹೊಸಮನಿ ತಿಳಿಸಿದ್ದಾರೆ.
ಶುಕ್ರವಾರ ವಿಶ್ವವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರವ ಡಾಕ್ಟರೇಟ್ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದರು. ಬಾಹ್ಯಾಕಾಶ ಸಂಶೋಧಕ ಡಾ ಯು.ಆರ್. ರಾವ್, ಸಾಮಾಜಿಕ ಸೇವೆಯಲ್ಲಿ ಅಣ್ಣಾ ಹಜಾರೆ, ಸಿನಿಮಾ ರಂಗದ ಸಾಧನೆಗೆ ಶಿವರಾಜ್ಕುಮಾರ್, ವಾಣಿಜ್ಯೋದ್ಯಮಿ ಜೇಕಬ್ ಕ್ರಸ್ಟ್, ಶಿಕ್ಷಣ ಮತ್ತು ವಿಜ್ಞಾನ ಕ್ಷೇತ್ರದ ಸಾಧನೆಗೆ ಡಾ ಎಸ್.ಸಿ. ಶರ್ಮಾ, ಸಮಾಜ ಸೇವೆಗೆ ಸಂಗನಬಸವ ಸ್ವಾಮೀಜಿ, ಸಿ.ಆರ್. ನಸೀರ್ ಅಹಮದ್, ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದರು.
ಜೂ. 21ರಂದು ಬಳ್ಳಾರಿಯ ಬಿಡಿಎಎ ಫುಟ್ಬಾಲ್ ಕ್ರೀಡಾಂಗಣದ ಸಭಾಭವನದಲ್ಲಿ ನಡೆಯುವ ವಿಶ್ವವಿದ್ಯಾಲಯದ ದ್ವಿತೀಯ ಘಟಿಕೋತ್ಸವದಲ್ಲಿ ಗೌರವ ಪದವಿ ಪ್ರದಾನ ಮಾಡಲಾಗುತ್ತದೆ. ರಾಜ್ಯಸಭಾ ಸದಸ್ಯ, ಮಾಜಿ ರಾಜ್ಯಪಾಲ ಡಾ ಎಂ. ರಾಮಾಜೋಯಿಸ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ರಾಜ್ಯಪಾಲ ಹಂಸರಾಜ ಭಾರದ್ವಾಜ್ ಹಾಗೂ ಉನ್ನತ ಶಿಕ್ಷಣ ಸಚಿವ ದೇಶಪಾಂಡೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ. ಅನಾರೋಗ್ಯ ನಿಮಿತ್ತ ಅಣ್ಣಾ ಹಜಾರೆ ಆಗಮಿಸುತ್ತಿಲ್ಲ. 15 ದಿನಗಳ ಬಳಿಕ ಬಳ್ಳಾರಿಗೆ ಆಗಮಿಸಿ, ವಿವಿಯ ಗೌರವ ಸ್ವೀಕರಿಸುವುದಾಗಿ ತಿಳಿಸಿದ್ದಾರೆ ಎಂದು ಮಂಜಪ್ಪ ಹೇಳಿದರು.
24 ಜನರಿಗೆ ಸ್ವರ್ಣಪದಕ: ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ 24 ಜನರಿಗೆ ಚಿನ್ನದ ಪದಕ ನೀಡಲಾಗುತ್ತಿದೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ 170 ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದಾರೆ. ಡಿ.ಲಿಟ್ ಮಾಡಿರುವ ಸ್ವಿಟ್ಜರ್ಲ್ಯಾಂಡಿನ ಡಾ ಬರ್ಟ್ ಅವರಿಗೆ ಹಾಗೂ ರಾಸಾಯನಿಕ ಶಾಸ್ತ್ರದಲ್ಲಿ ಪಿ.ಎಚ್ಡಿ. ಮಾಡಿರುವ ಹನುಮನಗೌಡರಿಗೆ ಪಿ.ಎಚ್ಡಿ. ಪದವಿ ಪ್ರದಾನ ಮಾಡಲಾಗುತ್ತದೆ ಎಂದರು.
ಸಿಂಡಿಕೇಟ್ ಸದಸ್ಯರಾದ ಚಿನ್ನಯ್ಯ ಮಾಳಗಿ, ಶ್ರೀನಿವಾಸ ತಿವಾರಿ, ಹೇಮಂತ್ ಮಲ್ಲಪ್ಪ ಪೋತ್ನಾಳ್, ಎಸ್.ಎಸ್. ಪೊಲೀಸ್ ಪಾಟೀಲ್, ಎಂ.ಪಿ. ವಿಶ್ವನಾಥ್, ಎಸ್.ಎಲ್. ಪಾಟೀಲ್, ಬಾಲರಾಜ್, ಕುಲಸಚಿವ ವಿಜಯಕುಮಾರ್, ಮೌಲ್ಯಮಾಪನ ಕುಲಸಚಿವ ಪ್ರೊ. ಎಲ್.ಆರ್. ನಾಯಕ್ ಇದ್ದರು.