ಹೂವಿನಹಡಗಲಿ: ವೃತ್ತಿ ಬದುಕಿನ ಒತ್ತಡಗಳ ನಡುವೆಯೂ ಸವಿತಾ ಸಮಾಜ ಕ್ರಿಕೆಟ್ ಪಂದ್ಯಾವಳಿ ಸಂಘಟಿಸಿ ಯುವಕರಿಗೆ ಕ್ರೀಡೆಗಳ ಆಸಕ್ತಿ ಮೂಡಿಸಿರುವುದು ಶ್ಲಾಘನೀಯ ಎಂದು ಸಿಪಿಐ ಪ್ರಕಾಶ ರಾಠೋಡ್ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸವಿತಾ ಸಮಾಜ ಆಯೋಜಿಸಿದ್ದ ರಾಜ್ಯ ಮಟ್ಟದ ಆಹ್ವಾನಿತ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಇತ್ತೀಚಿಗೆ ಯುವ ಜನಾಂಗ ದುಶ್ಚಟಗಳಿಗೆ ದಾಸರಾಗಿ ತಮ್ಮ ಉತ್ತಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುವಕರು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕ ಸ್ವಾಸ್ಥ್ಯ, ಸದೃಢ ಮನಸ್ಸು ಹೊಂದುವಂತೆ ಕರೆ ನೀಡಿದರು. ಪಿಎಸ್ಐ ಆಂಜನೇಯ ಮಾತನಾಡಿ, ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.