ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಾಧನೆಗೆ ಅಡ್ಡಿಯಾಗದ ಮಮತಾ ಅಂಗವೈಕಲ್ಯ

Lingaraj Badiger
Updated On : 15 Mar 2014, 12:39 pm

ಹಗರಿಬೊಮ್ಮನಹಳ್ಳಿ,: ಸಾಧಿಸಿ ತೋರಿಸಬೇಕೆಂಬ ಛಲವೊಂದಿದ್ದರೆ ದೈಹಿಕ ಊನತೆ ಸಾಧನೆಗೆ ಅಡ್ಡಿಯಾಗದು ಎನ್ನುವುದಕ್ಕೆ  ಶುಕ್ರವಾರ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ಗಂಗಾವತಿ ಭೀಮಪ್ಪನವರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ಸಮಾಜಶಾಸ್ತ್ರ ವಿಷಯದಲ್ಲಿ ಪರೀಕ್ಷೆ ಬರೆದ ದೈಹಿಕ ಅಂಗವೈಕಲ್ಯದ ಮಮತಾ ಉತ್ತಮ ಉದಾಹರಣೆಯಾಗಿದ್ದಾರೆ.
ಎರಡು ಕಾಲಿಲ್ಲದ, ಸಂಪೂರ್ಣ ಗೂನುಬೆನ್ನಿನ ಹಾಗೂ ಬಲಗೈ ಸ್ವಾಧೀನವಿಲ್ಲದ ಮಮತಾ ಮಾತ್ರ ತನ್ನ ದೈಹಿಕ ಅಂಗವೈಕಲ್ಯತೆ ಮೀರಿ ಇತರರಂತೆ ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಿ ನಿರ್ಗಳ ಹಾಗೂ ಸಾರಾಗವಾಗಿ ಪರೀಕ್ಷೆ ಬರೆಯುವ ಮೂಲಕ ಸಾಧನೆಗೆ ಛಲವೊಂದಿದ್ದರೆ ಅಂಗವೈಕಲ್ಯತೆ ಅಡ್ಡಿಯಾಗದು ಎಂಬುದನ್ನು ಪರೀಕ್ಷೆ ಬರೆದು ಮಾದರಿಯಾಗಿದ್ದಾಳೆ.
ದೈಹಿಕ ಅಂಗವೈಕಲ್ಯ ತೋರ್ಪಡಿಸಿಕೊಳ್ಳದೆಯೇ ಎಲ್ಲರಂತೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಮಮತಾಳ ಛಲವನ್ನು ವಿದ್ಯಾರ್ಥಿ ಸಮೂಹವೇ ಹೆಮ್ಮೆಪಡುವಂತೆ ಮಾಡಿದೆ. ಎರಡು ಕಾಲಿಲ್ಲದಿದ್ದರೂ, ಬೆನ್ನುಗೂನಿದ್ದರು ನಾನು ಏನಾದರೂ ಸಾಧಿಸಿ ತೋರಿಸಿಯೇ ತೀರಬೇಕೆಂಬ ಹಠಕ್ಕೆ ಬಿದ್ದವಳಂತೆ ಕಾಣುವ ಮಮತಾ ಶುಕ್ರವಾರ ನಡೆದ ಪರೀಕ್ಷೆಯಲ್ಲಿ ಪರೀಕ್ಷಾ ಕೇಂದ್ರದ ಪ್ರಮುಖ ಐಕಾನ್.
ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿನ ಶ್ರೀರೇಣುಕಾ ವಿದ್ಯಾಸಂಸ್ಥೆ ವಿದ್ಯಾರ್ಥಿನಿಯಾಗಿರುವ ಮಮತಾ ತಾಲೂಕಿನ ವಲ್ಲಭಾಪುರ ಗ್ರಾಮದ ವಿದ್ಯಾರ್ಥಿನಿ. ಮನೆಯಿಂದ ಸಹೋದರರ ಸಹಾಯದೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಮಮತಾ ಪರೀಕ್ಷೆ ಸಮಯ ಮುಗಿದ ಮೇಲೆ ಮತ್ತೆ ಸಹೋದರರ ಜತೆಗೆ ಹಿಂತಿರುಗುತ್ತಾಳೆ. ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ ಮಮತಾಳ ಸಾಧನೆ ಕುರಿತಂತೆ ಕನ್ನಡಪ್ರಭದಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಆ ಸಮಯದಲ್ಲಿ ಈ ವಿದ್ಯಾರ್ಥಿನಿ ವ್ಯಾಸಂಗಕ್ಕೆ ಶ್ರೀರೇಣುಕಾ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ ಸಾಕಷ್ಟು ನೆರವು ಕಲ್ಪಿಸಿ ಕೊಟ್ಟಿದ್ದರು. ಅಲ್ಲದೆ ಓದುಗರು ಸಹ ನೆರವು ನೀಡಿದ್ದನ್ನು ಸ್ಮರಿಸಬಹುದು.
ನಿರಂತರ ಓದಿನ ಕಡೆಗೆ ಗಮನ ಕೊಡುತ್ತಿದ್ದೇನೆ. ಹೀಗಾಗಿ ನನಗೆ ಈ ದೈಹಿಕ ಅಂಗವೈಕಲ್ಯ ನೆನಪಿಗೆ ಬರುವುದಿಲ್ಲ. ಕುಟುಂಬದವರ ಸಹಾಯ, ನಿರಂತರ ಬೆಂಬಲ ಹಾಗೂ ಉಪನ್ಯಾಸಕರ ಮಾರ್ಗದರ್ಶನ ಸಹ ವಿದ್ಯಾರ್ಥಿಗಳ ಬೆಂಬಲ ಸದಾ ನನಗಿದೆ. ಹೀಗಾಗಿ ಅಂಗವೈಕಲ್ಯ ಮರೆತು ಎಲ್ಲರಂತೆ ಚೆನ್ನಾಗಿ ಓದಿ ಉನ್ನತ ವಿದ್ಯಾಭ್ಯಾಸ ಮಾಡುವ ಗುರಿ ಇಟ್ಟುಕೊಂಡಿರುವುದಾಗಿ ಪರೀಕ್ಷೆ ನಂತರ ಮಮತಾ ಕನ್ನಡಪ್ರಭಕ್ಕೆ ಭವಿಷ್ಯದ ಓದಿನ ಬಗ್ಗೆ ತಿಳಿಸಿದಳು.
ಪರೀಕ್ಷಾ ಕೇಂದ್ರದ ಮುಖ್ಯ ಅಧಿಕ್ಷಕ ಹಾಗೂ ಗಂಭಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ, ವಿಶೇಷ ಜಾಗೃತ ದಳದ ಮುಖ್ಯಸ್ಥ ಗುರುಬಸವರಾಜ, ಉಪನ್ಯಾಸಕ ಖಾಸೀಂ ಸೇರಿದಂತೆ ಹಲವರು ದೈಹಿಕ ಅಂಗವೈಕಲ್ಯ ಬದಿಗೊತ್ತಿ ಎಲ್ಲರಂತೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಎದುರಿಸುತ್ತಿರುವ ಮಮತಾಳ ಛಲವನ್ನು ಪ್ರಶಂಸಿಸಿ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ರಾಜ್ಯದ ಗಮನ ಸೆಳೆಯುವಂಥ ಫಲಿತಾಂಶ ಪಡೆಯುವಂತೆ ಶುಭ ಹಾರೈಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement