ಬಳ್ಳಾರಿ: ಕೇವಲ 5 ದಿನಗಳಲ್ಲಿ ಗ್ರಾಮೀಣ ಬ್ಯಾಂಕೊಂದು ಸಾಲಗಾರರಿಂದ ಸುಮಾರು ರು. 50 ಕೋಟಿ ಸಾಲ ವಸೂಲು ಮಾಡಿದೆ! ಬಳ್ಳಾರಿ ಜಿಲ್ಲೆಯಲ್ಲಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನ್ಯಾಯಾಲಯ ನೆರವಿನೊಂದಿಗೆ ನಡೆಸಿದ 5 ದಿನಗಳ ಲೋಕ ಅದಾಲತ್ನಲ್ಲಿ 4500 ಸಾಲಗಾರರು ಒನ್ ಟೈಂ ಸೆಟ್ಲೆಮೆಂಟ್ ಸೌಲಭ್ಯ ಪಡೆದಿದ್ದಾರೆ. ಇದು ರಾಜ್ಯದ ಗ್ರಾಮೀಣ ಬ್ಯಾಂಕ್ ಇತಿಹಾಸದಲ್ಲಿಯೇ ದೊಡ್ಡ ಲೋಕ ಅದಾಲತ್.
ಸಾಲ ವಸೂಲು ಬ್ಯಾಂಕ್ಗಳಿಗೆ ದೊಡ್ಡ ಸಮಸ್ಯೆ. ಅದಕ್ಕಾಗಿ ಸಾಲಗಾರರ ಮನೆಗಳಿಗೆ ಅಲೆಯಬೇಕು, ನೋಟಿಸ್ ಕಳುಹಿಸಬೇಕು, ನ್ಯಾಯಾಲಯದ ಮೆಟ್ಟಿಲು ಹತ್ತಬೇಕು. ಇಂಥ ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಲು ಬ್ಯಾಂಕ್ಗಳು ಲೋಕ ಅದಾಲತ್ ಮೊರೆ ಹೋಗುತ್ತವೆ. ಆದರೆ, ದೊಡ್ಡ ಪ್ರಮಾಣ 5 ದಿನಗಳ ಅದಾಲತ್ ಅನ್ನು ಯಾವ ಬ್ಯಾಂಕೂ ನಡೆಸಿರಲಿಲ್ಲ.
ಸಾಲ ಪಡೆದು ಮೂರು ವರ್ಷವಾದರೂ ಮರುಪಾವತಿ ಮಾಡದ 9 ಸಾವಿರ ಸಾಲಗಾರರಿಗೆ ನೋಟಿಸ್ ನೀಡಿದ್ದು, ಆಸಕ್ತಿವುಳ್ಳವರು ಲೋಕಾ ಅದಾಲತ್ನಲ್ಲಿ ಭಾಗವಹಿಸಿ, ಸಾಲ ಮರುಪಾವತಿ ಮಾಡಬಹುದು ಎಂದು ತಿಳಿಸಲಾಗಿತ್ತು. ಬಳ್ಳಾರಿ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮಧ್ಯಸ್ಥಿಕೆಯಲ್ಲಿ ನಡೆದ ಸಾಲ ಮರುಪಾವತಿ ಲೋಕ ಅದಾಲತ್ನಲ್ಲಿ 4,500 ಸಾಲಗಾರರು ಪಾಲ್ಗೊಂಡು, ಸುಮಾರು ರು. 50 ಕೋಟಿ ಸಾಲ ಮರುಪಾವತಿಗೆ ಮುಂದಾಗಿದ್ದಾರೆ. ಇದೇ ಕಾರ್ಯವನ್ನು ಬ್ಯಾಂಕುಗಳು ಮಾಡಿದ್ದರೆ, ಮೂರು ವರ್ಷ ಬೇಕಾಗುತ್ತಿತ್ತಂತೆ!
ಇತರ ಜಿಲ್ಲೆಗಳಲ್ಲಿ ಯಶಸ್ವಿ: ರಾಜ್ಯದ 11 ಜಿಲ್ಲೆಗಳಲ್ಲಿ ಶಾಖೆ ಹೊಂದಿರುವ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಬಳ್ಳಾರಿಯಲ್ಲಿ ನಿರೀಕ್ಷೆ ಮೀರಿ ಯಶಸ್ಸು ಸಾಧಿಸಿದೆ. ಹೀಗಾಗಿ ಉಳಿದ ಜಿಲ್ಲೆಗಳಲ್ಲಿಯೂ ಅದಾಲತ್ಗೆ ನಿರ್ಧರಿಸಲಾಗಿದೆ ಎಂದು ಬ್ಯಾಂಕ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
- ಶಶಿಧರ ಮೇಟಿ