ಬಿಜಾಪುರ: ತಡವಾಗಿ ಎಚ್ಚೆತ್ತುಕೊಂಡು ಜ್ಞಾನೋದಯ ಪಡೆದ ಸಂಘಟಕರು ಕೊನೆಗೂ ಸಮಾರೋಪ ದಿನವಾದರೂ ಬಿಜಾಪುರ ನಗರದ ಸೈನಿಕ ಶಾಲೆ ಮೈದಾನದಲ್ಲಿ ನಡೆದಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆ ಇಕ್ಕೆಲಗಳಲ್ಲಿ ನೀರು ಹೊಡೆಸುವ ಮೂಲಕ ಧೂಳು ಏಳದಂತೆ ಕ್ರಮ ಕೈಕೊಂಡು ಕನ್ನಡಾಭಿಮಾನಿಗಳನ್ನು ಧೂಳಿನಿಂದ ಮುಕ್ತಗೊಳಿಸಿದರು.
ಸಮ್ಮೇಳನ ಆವರಣ ಸೈನಿಕ ಶಾಲೆ ಮೈದಾನ ಹಾಳು ಮಣ್ಣಿನಿಂದ ಕೂಡಿದೆ. ಸ್ವಲ್ಪವೇ ಗಾಳಿ ಬಿಟ್ಟರೂ ಧೂಳು ಏಳುವ ವಾತಾವರಣ ಇಲ್ಲಿದೆ. ಶನಿವಾರ ಸಮ್ಮೇಳನ ಉದ್ಘಾಟನೆ ಸಮಯದಲ್ಲಿಯೂ ಸಚಿವ ಗೋವಿಂದ ಕಾರಜೋಳ ಮಾತಾಡುವಾಗ ಏಕಾಏಕಿ ಜೋರಾಗಿ ಗಾಳಿ ಬೀಸಿ ತಗಡುಗಳ ಗಡಗಡ ಸದ್ದು ಮಾಡಿ ಆತಂಕ ಮೂಡಿಸಿದಾಗ ಸಾಕಷ್ಟು ಪ್ರಮಾಣದಲ್ಲಿ ಧೂಳು ಮೇಲೆದ್ದು ಊಟದ ಕೌಂಟರ್ ಸೇರಿದಂತೆ ಹಲವೆಡೆ ನುಗ್ಗಿ ತೊಂದರೆ ಕೊಟ್ಟಿತ್ತು. ಇದಲ್ಲದೆ ಗಾಳಿ ಬಿಟ್ಟಾಗೆಲ್ಲ ಧೂಳು ಎದ್ದು ಸಮ್ಮೇಳನ ಮುಖ್ಯ ವೇದಿಕೆಯೊಳಗೆ ಹಾಕಿದ್ದ ಖುರ್ಚಿಗಳು ಧೂಳಿನಿಂದಾವೃತವಾಗಿದ್ದವು. ಅಂಥದ್ದರಲ್ಲಿಯೇ ಜನರು ಕುಳಿತು ಸಮ್ಮೇಳನದ ಹಲವು ಕಾರ್ಯಕ್ರಮಗಳನ್ನು ವೀಕ್ಷಿಸಿದ್ದರು. ಪುಸ್ತಕ ಮಳಿಗೆಯಲ್ಲಿಯ ಸ್ಥಿತಿಯಂತೂ ಅದ್ವಾನವಾಗಿತ್ತು. ಧೂಳಿನಿಂದ ಎಲ್ಲ ಪುಸ್ತಕಗಳು ಮುಳುಗಿ ಹೋಗಿದ್ದವು. ಕೊಳ್ಳುವವರು ಬಂದಾಗ ಧೂಳು ಹೊಡೆದು ಕೊಡುವ ವ್ಯವಸ್ಥೆಯನ್ನು ಮಳಿಗೆಯಲ್ಲಿ ಅಂಗಡಿ ಹಾಕಿದವರು ಮಾಡುತ್ತಿದ್ದರು. ಪಕ್ಕದಲ್ಲಿಯೇ ಇದ್ದ ಹಲವು ರೀತಿಯ ತಿಂಡಿ ತಿನಿಸುಗಳೂ ಧೂಳಿನಿಂದ ಆವೃತ್ತವಾಗಿದ್ದವು. ಧೂಳಿನ ಕಾರಣಕ್ಕಾಗಿಯೇ ಅನೇಕರು ಅಲರ್ಜಿಯಿಂದ ಪ್ರಥಮ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದರು. ಇವೆಲ್ಲದರಿಂದ ವ್ಯಕ್ತವಾದ ಟೀಕೆಗಳಿಂದ ಬುದ್ಧಿ ಕಲಿತಂತಿದ್ದ ಸಂಘಟಕರು ಸಮ್ಮೇಳನ ಅಂತಿಮ ದಿನ ಮಧ್ಯಾಹ್ನದ ವೇಳೆಗೆ ಟ್ರ್ಯಾಕ್ಟರುಗಳಲ್ಲಿ ನೀರಿನ ಟ್ಯಾಂಕ್ ಇಟ್ಟು ಅದರ ಮೂಲಕ ನೀರು ಹಾಯಿಸುತ್ತಿದ್ದರು.
-ರುದ್ರಪ್ಪ ಆಸಂಗಿ