ಬಿಜಾಪುರ: ನಗರದಲ್ಲಿ ನಡೆದ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭರ್ಜರಿ ಪುಸ್ತಕ ಮಾರಾಟ ನಡೆಯಿತು. ಸುಮಾರು 500 ಪುಸ್ತಕ ಮಳಿಗೆಗಳನ್ನು ಸಮ್ಮೇಳನ ನಡೆಯುವ ಆವರಣದಲ್ಲಿ ನಿರ್ಮಿಸಲಾಗಿತ್ತು. ಕುವೆಂಪು, ಪ್ರತಾಪ ಸಿಂಹ, ತೇಜಸ್ವಿ, ನಾರಾಯಣಚಾರ್ಯ, ಬೀಚಿ ಸೇರಿದಂತೆ ವಿವಿಧ ಸಾಹಿತಿಗಳು ಬರೆದ ಸಾಹಿತ್ಯ, ಶಾಲಾ ಪುಸ್ತಕ, ಕೌಟುಂಬಿಕ ಪುಸ್ತಕ, ಮಕ್ಕಳ ಪುಸ್ತಕಗಳು ಮಾರಾಟ ಜೋರಾಗಿತ್ತು. ಎರಡು ದಿನದಲ್ಲಿ ಸುಮಾರು ರು. 2.50 ಲಕ್ಷಕ್ಕೂ ಹೆಚ್ಚು ಕನ್ನಡ ಪುಸ್ತಕಗಳು ಮಾರಾಟವಾಗಿವೆ.
ಬ್ಯಾನರ್‌ನಲ್ಲಿ 'ಬಸವಣ್ಣ' ಕಡೆಗಣನೆ
ಬಿಜಾಪುರ: ನಗರದಲ್ಲಿ ನಡೆದಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮತ್ತು ಸಮ್ಮೇಳನ ಸರ್ವಾಧ್ಯಕ್ಷರ ಮೆರವಣಿಗೆಗೆ ಸ್ವಾಗತ ಕೋರುವ ಮತ್ತು ಶುಭ ಹಾರೈಸುವ ಯಾವುದೇ ಬ್ಯಾನರ್‌ಗಳಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಬಳಕೆ ಇಲ್ಲದಿರುವುದು ಬಸವಾಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೆಲವು ಬ್ಯಾನರ್‌ಗಳನ್ನು ಹಾಕಿದೆ. ಅದರಲ್ಲಿ ಸಿದ್ಧೇಶ್ವರ ಶ್ರೀಗಳು, ಸಮ್ಮೇಳನಾಧ್ಯಕ್ಷ ಕೋ. ಚೆನ್ನಬಸಪ್ಪ ಮತ್ತು ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಭಾವಚಿತ್ರಗಳ ಜೊತೆಗೆ ಜಿಲ್ಲೆಯ ಸಚಿವ, ಸಂಸದ, ಶಾಸಕರ ಭಾವಚಿತ್ರಗಳನ್ನು ಹಾಕಲಾಗಿತ್ತು. ಆದರೆ ಎಲ್ಲಿಯೂ ಅಣ್ಣ ಬಸವಣ್ಣನ ಸುಳಿವೇ ಇರಲಿಲ್ಲ. ಇತರರು ಬಸವಣ್ಣನನ್ನು ಮರೆತಿರಬಹುದು. ಆದರೆ ಜಿಲ್ಲೆಯ ಸಾಹಿತ್ಯೀಕ ಸಾಂಸ್ಕೃತಿಕ ವೈಭವ ಬಿಂಬಿಸುವ ಪರಿಷತ್ತು ಕೂಡಾ ಬಸವಣ್ಣನ ಭಾವಚಿತ್ರ ಹಾಕದೇ ಇರುವುದು ಎಷ್ಟು ಸರಿ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಅದನ್ನು ಅವರೆಲ್ಲ ಮಾಧ್ಯಮದವರ ಮುಂದೆ ಪ್ರಕಟಪಡಿಸಿದರು.
ಯುವಕರ ದುಂಡಾ ವರ್ತನೆ
ಬಿಜಾಪುರ: ಇಲ್ಲಿನ ಸೈನಿಕ ಮೈದಾನದಲ್ಲಿ 3 ದಿನಗಳ ಕಾಲ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ಯಾವುದೇ ಗೋಷ್ಠಿಗಳ ಭರಾಟೆ ಇರಲಿಲ್ಲ. ಮುಖ್ಯ ವೇದಿಕೆ ಮತ್ತು ಸಮಾನಾಂತರ ವೇದಿಕೆಯಲ್ಲಿ ಕವಿಗೋಷ್ಠಿಗಳನ್ನು ಮಾತ್ರ ಏರ್ಪಡಿಸಲಾಗಿತ್ತು. ಆದರೆ ಕವಿಗೋಷ್ಠಿ ಸಮಯದಲ್ಲಿ ಕವಿಗಳ ಆಶಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ಸಾರ್ವಜನಿಕರು ನಡೆದುಕೊಂಡು ಕವಿಗೋಷ್ಠಿಯ ಗಂಭೀರತೆ ಹಾಳುಗೆಡವಿದರು. ಕವಿಗಳು ವೇದಿಕೆಯ ಮೇಲೆ ಕವನ ವಾಚಿಸುವಾಗ ಪ್ರೇಕ್ಷಕರಾಗಿದ್ದ ಕೆಲವು ಯುವಜನರು ಸಾಕು ಮುಗಿಸಪ್ಪಾ, ಡಿಸ್ಕೋ ಹಾಡು ಇದ್ದರೆ ಹೇಳು ಎಂದು ಕೂಗುತ್ತಿದ್ದದ್ದು ವೇದಿಕೆಯಲ್ಲಿದ್ದವರಿಗೆ ಕೇಳಿಸದಿದ್ದರೂ, ಅಕ್ಕಪಕ್ಕದ ಸಭಿಕರಿಗೆ ಮುಜುಗರ ಉಂಟು ಮಾಡುತ್ತಿತ್ತು.
ಮಕ್ಕಳನ್ನು ಕಾಣುವ ಕಾತುರ
ಬಿಜಾಪುರ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅನೇಕ ಜನರು ಸೈನಿಕ ಶಾಲೆಯಲ್ಲಿರುವ ತಮ್ಮ ಮಕ್ಕಳನ್ನು ಕಾಣಲು ಶಾಲೆಯತ್ತ ಧಾವಿಸುತ್ತಿದ್ದರು. ಆದರೆ ಪೊಲೀಸರು ಯಾರಿಗೂ ಅವಕಾಶ ಕೊಡಲಿಲ್ಲ. ಹೀಗಾಗಿ ಪಾಲಕರು ನಿರಾಶೆಯಿಂದ ಮರಳಿದರೆ, ಕೆಲವರು ಬೇಲಿ ಹಾರಿ ಮಕ್ಕಳನ್ನು ಭೇಟಿಯಾಗುತ್ತಿದ್ದರು.
ಟಿವಿ, ಧ್ವನಿವರ್ಧಕಗಳ ಅನುಕೂಲ
ಬಿಜಾಪುರ: ಮೂರು ದಿನಗಳ ಕಾಲ ನಡೆದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯ ಅಂತರ ಹೆಚ್ಚಿದ್ದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಭಾರಿ ಗಾತ್ರದ ಲೆಡ್ ಟಿವಿಗಳನ್ನು ಅಳವಡಿಸಿದ್ದು ಕನ್ನಡಾಭಿಮಾನಿಗಳಿಗೆ ಅನುಕೂಲವಾಗಿತ್ತು. ದೂರದಲ್ಲಿ ಕುಳಿತರೂ ಕೂಡ ವೇದಿಕೆಯ ಮುಂಭಾಗದಲ್ಲಿಯೇ ಕುಳಿತ ಅನುಭವಗಳನ್ನು ಈ ಟೀವಿ ಪರದೆಗಳು ನೀಡುತ್ತಿದ್ದವು. ಜೊತೆಗೆ ಧ್ವನಿವರ್ಧಕಗಳೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದು ಸ್ಪಷ್ಟತೆ ಇದ್ದ ಕಾರಣ ಮುಖ್ಯ ವೇದಿಕೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳನ್ನು ನೋಡಲು ತೊಂದರೆ ಆಗಲಿಲ್ಲ.
ಗೋಳಗುಮ್ಮಟ, ಇಬ್ರಾಹಿಂ ರೋಜಾ ವಿಶ್ವಪರಂಪರೆ ಪಟ್ಟಿಗೆ ಸೇರಿಸಿ
ಬಿಜಾಪುರ: 79ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಜಾಪುರದ ಜೈ ಭೀಮಸೇನಾ ಸಂಘಟನೆಯ ಗೌರವಾಧ್ಯಕ್ಷ, ಪ್ರಗತಿಪರ ಹೋರಾಟಗಾರ ಶ್ರೀಕಾಂತ ಅರಕೇರಿ ಅವರು, ಐತಿಹಾಸಿಕ ಗೋಳಗುಮ್ಮಟ, ಇಬ್ರಾಹಿಂ ರೋಜಾಗಳನ್ನು ವಿಶ್ವಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆಗೊಳಬೇಕು ಎಂಬ ಕರಪತ್ರಗಳನ್ನು ಹಂಚುತ್ತಿದ್ದಾರೆ. ಸಮ್ಮೇಳನಕ್ಕೆ ಆಗಮಿಸಿದ ಮುಖ್ಯಮಂತ್ರಿ, ಸಮ್ಮೇಳನಾಧ್ಯಕ್ಷರು ಸೇರಿದಂತೆ ಸಮ್ಮೇಳನದಲ್ಲಿ ಭಾಗವಹಿಸಿದ ಜನತೆಗೆ ಮೂರು ದಿನಗಳ ಕಾಲ ಕರಪತ್ರ ಹಂಚಿ ಗಮನ ಸೆಳೆದರು. ಬಿಜಾಪುರದಲ್ಲಿ ಅನೇಕ ಪ್ರಸಿದ್ಧ ಸ್ಮಾರಕಗಳಿದ್ದು, ಪ್ರತಿಯೊಂದು ಸ್ಮಾರಕಗಳು ತನ್ನದೇ ಕಲಾ ಕುಸುರಿಗಳಿಂದ ವಿಭಿನ್ನ ರೀತಿಯ ವಿನ್ಯಾಸದಿಂದ ಪ್ರವಾಸಿಗರನ್ನು ತಮ್ಮತ್ತ ಆಕರ್ಷಿಸುತ್ತವೆ. ಆದ್ದರಿಂದ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕೆಂದು ಆಗ್ರಹಿಸುತ್ತಿದ್ದರು.
ಜನಾಕರ್ಷಿಸಿದ ರಂಗೋಲಿ
ಬಿಜಾಪುರ: ಇಲ್ಲಿನ ಸೈನಿಕ ಶಾಲೆ ಮೈದಾನದಲ್ಲಿ ನಡೆದಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯ ವ್ರವೇಶ ಧ್ವಾರ ಬಂಧನಾಳ ಶಿವಯೋಗಿಗಳ ಮಹಾದ್ವಾರದ ಮುಂಭಾಗದಲ್ಲಿ ಬಿಎಲ್‌ಡಿಇ ಸಂಸ್ಥೆಯ ಎಸ್.ಬಿ. ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಆಕರ್ಷಕ ರಂಗೋಲಿ ಬಿಡಿಸುವ ಮೂಲಕ ಸಮ್ಮೇಳನದ ಅಂತಿಮ ದಿನವಾದ ಸೋಮವಾರ ಕನ್ನಡಾಭಿಮಾನಿಗಳ ಗಮನ ಸೆಳೆದರು. ರಾಣಿ ಭೋಸಲೆ ಮತ್ತು ರೋಹಿಣಿ ಭೋಸಲೆ ಸಹೋದರಿಯರು ವಿವಿಧ ವರ್ಣಗಳ ರಂಗೋಲಿ ಪುಡಿ ಬಳಸಿ ಆಕರ್ಷಕ ಚಿತ್ತಾರದ ರಂಗೋಲಿ ಬಿಡಿಸುವ ಮೂಲಕ ಜನರನ್ನು ಆಕರ್ಷಿಸಿದರು. ಕೆಲವು ಯುವತಿಯರು ರಂಗೋಲಿ ಬಗ್ಗೆ ಮಾಹಿತಿ ಪಡೆಯುತ್ತಿದ್ದರು.