ಬಿಜಾಪುರ

ಅಕ್ಷರ ಜಾತ್ರೆ ನಿರೀಕ್ಷೆಗೂ ಮೀರಿ ಯಶಸ್ಸು

ಬಿಜಾಪುರ: ನಗರದಲ್ಲಿ ನಿಗಿನಿಗಿ ಕೆಂಡದಂತಹ ಬಿಸಿಲು, ಉಸಿರುಗಟ್ಟಿಸುವಂತೆ ಧೂಳಿನ ಮಧ್ಯೆ  ಮೂರು ದಿನಗಳ ಕಾಲ ನಗರದಲ್ಲಿ ನಡೆದ ಅಕ್ಷರ ಜಾತ್ರೆ ನಾನಾ ಟೀಕೆ, ಟಿಪ್ಪಣೆ, ಗೊಂದಲ, ಪ್ರತಿಭಟನೆ ನಡೆವೆಯೂ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ.
ಸಮ್ಮೇಳನ ಆರಂಭಕ್ಕೆ ಇನ್ನೇನು ಒಂದು ವಾರ ಇದೆ ಅನ್ನುವಾಗಲೂ ಸಮ್ಮೇಳನದ ಬಗ್ಗೆ ಸಂಘಟಕರಿಗೆ ಗಂಭೀರತೆ ಇರಲಿಲ್ಲ. ಇದಕ್ಕೆ ಕಾರಣ ರಾಜ್ಯ ಸರ್ಕಾರ ಸಮ್ಮೇಳನದ ಸಲುವಾಗಿ ರು. 1 ಕೋಟಿ ಬಿಡುಗಡೆ ಮಾಡಲು ವಿಳಂಬ ಮಾಡಿರುವುದು. ಇದಲ್ಲದೆ ರಾಜಕೀಯ ಅಸ್ಥಿರತೆ ಕರಿ ಛಾಯೆ ಸಮ್ಮೇಳನ ಸಂಘಟನೆ ಮೇಲೂ ಪ್ರತಿಕೂಲ ಪರಿಣಾಮ ಬೀರಿತ್ತು. ಬಿಜೆಪಿ ಶಾಸಕರು ಸಾಮೂಹಿಕ ರಾಜಿನಾಮೆ ನೀಡಿದ್ದರಿಂದಾಗಿ ಫೆ. 4ರಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಸರ್ಕಾರ ಬಿದ್ದು ಹೋಗುತ್ತದೆ. ಸಮ್ಮೇಳನ ಮುಂದಕ್ಕೆ ಹೋಗುತ್ತದೆ ಎಂದು ಜನರು ಆತಂಕದಲ್ಲಿದ್ದರೂ ಜಗದೀಶ ಶೆಟ್ಟರ್ ಬಜೆಟ್ ಮಂಡಿಸಿದರು. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸಮ್ಮೇಳನದ ಉದ್ಘಾಟನೆಗೂ ಆಗಮಿಸಿದ್ದರು. ಬಿಜಾಪುರ ಜಿಲ್ಲೆಯ ಶಾಸಕರಲ್ಲಿಯೇ ಬಹಳಷ್ಟು ಶಾಸಕರು ಸಮ್ಮೇಳನದ ಸಿದ್ಧತೆ ಕಾರ್ಯದಿಂದ ದೂರ ಉಳಿದಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡರು. ಸಮ್ಮೇಳನದ ಆರಂಭದ ದಿನ ಮುಖ್ಯ ವೇದಿಕೆಯಲ್ಲಿ ಭದ್ರತೆ ಹಿತದೃಷ್ಟಿಯಿಂದ ಕಾರ್ಯಕ್ರಮ ಪಟ್ಟಿಯಲ್ಲಿ ಇಲ್ಲದವರು ವೇದಿಕೆಗೆ ಆಗಮಿಸುವುದನ್ನು ಪೊಲೀಸರು ತಡೆದಿದ್ದರು. ಈ ಸಂದರ್ಭದಲ್ಲಿ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ನಲ್ಲೂರ ಪ್ರಸಾದ ಅವರು ಬ್ಯಾಡ್ಜ್ ಹೊಂದಿಲ್ಲದೆ ವೇದಿಕೆಗೆ ಆಗಮಿಸುವುದನ್ನು ಪೊಲೀಸರು ತಡೆದಿದ್ದರಿಂದಾಗಿ ಎಸ್ಪಿ ಅಜಯ ಹಿಲೋರಿ ಹಾಗೂ ನಲ್ಲೂರ ಪ್ರಸಾದ ಅವರ ಮಧ್ಯೆ ಮಾತಿನ ಜಟಾಪಟಿ ನಡೆಯಿತು. ನಲ್ಲೂರ ಪ್ರಸಾದ ಅವರ ಬೆಂಬಲಿಗರು ಸಮ್ಮೇಳನವನ್ನು ಬಹಿಷ್ಕರಿಸುವ ಮಾತುಗಳನ್ನು ಆಡಿದರು. ಕೊನೆಯಲ್ಲಿ ಈ ಗೊಂದಲದ ಪ್ರಸಂಗವೂ ಸೌಹಾರ್ದಯುತವಾಗಿ ಶಮನಗೊಂಡಿತು.
ನಾಡಿನ ಉದ್ದಗಲದಿಂದ ಹರಿದ ಬಂದ ಜನ:
90 ವರ್ಷಗಳ ನಂತರ ಬಿಜಾಪುರದಲ್ಲಿ ನಡೆದ ಕನ್ನಡಿಗರ ಹಬ್ಬದಲ್ಲಿ ಪಾಲ್ಗೊಂಡ ಜನತೆ. ಹಿಂದಿನ ಯಾವುದೇ ಸಮ್ಮೇಳನಗಳಿಗೂ ಸ್ಪಂದಿಸದಷ್ಟು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಮೊದಲನೇ ದಿನ ಶನಿವಾರ ಊಟಕ್ಕಾಗಿ ಉಂಟಾದ ನೂಕು ನುಗ್ಗಲು ಕೊನೆ ಎರಡು ದಿನಗಳಲ್ಲಿ ಶಾಂತವಾಗಿತ್ತು. ಮೊದಲ ದಿನ ಸಿದ್ಧೇಶ್ವರ ಸ್ವಾಮಿಗಳ ಆಶಯ ನುಡಿ ಕೇಳಲು ಕಾತುರರಾಗಿದ್ದ ಜನತೆ ಶ್ರೀಗಳ ಆಶೀರ್ವಚನ ಮುಗಿಯುತ್ತಿದ್ದಂತೆಯೇ ಸಹಸ್ರಾರು ಸಂಖ್ಯೆಯಲ್ಲಿ ಊಟದ ಮಂಟಪಕ್ಕೆ ನುಗ್ಗಿದ ಪರಿಣಾಮ ಊಟಕ್ಕಾಗಿ ಕಿತ್ತಾಟ ನಡೆಯಿತು. ಇದನ್ನು ನಿರೀಕ್ಷೆ ಮಾಡದ ಸ್ವಯಂ ಸೇವಕರು ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಕೈ ಚೆಲ್ಲಿದರು.
9 ನಿರ್ಣಯಗಳು:  
ಸಮ್ಮೇಳನದಲ್ಲಿ ಕನ್ನಡ ನಾಡು, ನುಡಿ, ಜಲ, ಗಡಿ ಸಂರಕ್ಷಿಸುವ ಕುರಿತು 9 ನಿರ್ಣಯಗಳನ್ನು ಕೈಗೊಳ್ಳಲಾಯಿತು. ಆದರೆ ಸಮ್ಮೇಳನದಲ್ಲಿ ನಡೆದ ಗೋಷ್ಠಿಗಳು ಮಾತ್ರ ನೀರಸವಾಗಿದ್ದವು. ಗೋಷ್ಠಿಗಳಿಗಿಂತ ಸಾಂಸ್ಕೃತಿಕ ಕಾರ್ಯಕ್ರಮಗಳೇ ಜನ ಮೆಚ್ಚುಗೆ ಪಡೆದವು.
ಕಾವೇರಿ ನದಿ ನೀರು ಹಂಚಿಕೆಯಲ್ಲಿ ಉದ್ಭವಿಸಿರುವ ಸಮಸ್ಯೆ ನಿವಾರಣೆಗೆ ಸುಪ್ರೀಂ ಕೋರ್ಟ್ ಮಾನವೀಯ ನೆಲೆಯಲ್ಲಿ ಪ್ರಕರಣವನ್ನು ಪುನರ್ ಪರಿಶೀಲಿಸಬೇಕು, ಎಲ್ಲ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ರಾಷ್ಟ್ರೀಯ ಭಾಷಾ ನೀತಿ ಜಾರಿಗೆ ತರುವ ಮೂಲಕ ಕನ್ನಡ ಭಾಷಾ ಬೆಳವಣಿಗೆಗೆ ಒತ್ತು ನೀಡಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರ್ಕಾರಿ ಮೀಸಲಾತಿ ಕಲ್ಪಿಸಬೇಕು, ಬಿಜಾಪುರ ಮಹಿಳಾ ವಿಶ್ವ ವಿದ್ಯಾಲಯದ ಕಾರ್ಯ ವಾಪ್ತಿಯನ್ನು ವಿಸ್ತರಿಸಿ ರಾಜ್ಯದ ಎಲ್ಲ ಮಹಿಳಾ ಕಾಲೇಜುಗಳು ಸೇರ್ಪಡೆಯಾಗುವಂತೆ ಕ್ರಮ ಕೈಗೊಳ್ಳಬೇಕು ಇವೇ  ಮುಂತಾದ 9 ಮಹತ್ವದ ನಿರ್ಣಯಗಳನ್ನು ಕೈಗೊಂಡು ಸಮ್ಮೇಳನ ಚಾರಿತ್ರಿಕ ದಾಖಲೆ ಮಾಡಿತು. ಆದರೆ ಬಿಜಾಪುರ ನಗರದಲ್ಲಿ ಗೋಳಗುಮ್ಮಟವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ವಿಚಾರವೂ ನಿರ್ಣಯದಲ್ಲಿ ಇರಬೇಕಾಗಿತ್ತು. ಇದು ಜಿಲ್ಲೆಯ ಜನರಿಗೆ ನಿರಾಸೆಯನ್ನುಂಟು ಮಾಡಿತು.
ಸಮ್ಮೇಳನದ ಹೆಸರಿನಲ್ಲಿ ಬಿಜಾಪುರ ನಗರದ ಎಲ್ಲ ರಸ್ತೆಗಳು ಸುಧಾರಣೆ ಕಾಣುತ್ತವೆ ಎಂದು ನಂಬಿದ್ದ ಜನರಿಗೆ ನಿರಾಸೆಯಾಯಿತು. ಏಕೆಂದರೆ ಸಮ್ಮೇಳನದ ಸಂದರ್ಭದಲ್ಲಿಯೂ ಇನ್ನೂ ರಸ್ತೆ ನಿರ್ಮಾಣ ಕಾಮಗಾರಿ ಮುಂದುವರೆದಿತ್ತು. ಸಮ್ಮೇಳನಕ್ಕೆ ತೆರಳುವ ಪ್ರಮುಖ ರಸ್ತೆಗಳನ್ನು ಮಾತ್ರ ಡಾಂಬರೀಕರಣ ಮಾಡಲಾಯಿತು. ನಗರದ ಎಲ್ಲ ರಸ್ತೆಗಳು ದುರಸ್ತಿ, ಡಾಂಬರೀಕರಣ ಕಾಣದೆ ಧೂಳಿನಿಂದ ಮುಕ್ತಿ ಪಡೆಯಲಿಲ್ಲ. ಬಿಜಾಪುರ ನಗರದಲ್ಲಿ ಸಮ್ಮೇಳನ ಶುಭ ಸಂದರ್ಭದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ 40 ಸಾರಿಗೆಗಳನ್ನು ಓಡಿಸಿತು. ಇದು ಬಿಜಾಪುರದ ನಿವಾಸಿಗಳಿಗೆ ಶಾಶ್ವತ ಕೊಡುಗೆಯಾಯಿತು. 78 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವ್ಯವಸ್ಥಿತವಾಗಿ ಮಾಡದೆ ಇರುವಂತಹ ಮಾಧ್ಯಮ ಕೇಂದ್ರವನ್ನು ಬಿಜಾಪುರದ ಸಮ್ಮೇಳನದಲ್ಲಿ ಮಾಡಲಾಗಿತ್ತು. 60 ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿತ್ತು. ವೈಫೈ ಇಂಟರ್‌ನೆಟ್ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸಿ ಅತ್ಯಾಧುನಿಕ ಮಾಧ್ಯಮ ಕೇಂದ್ರ ನಿರ್ಮಿಸಲಾಗಿತ್ತು. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಸಮ್ಮೇಳನ ಸಂದರ್ಭದಲ್ಲಿ ಊಟ ಇರಬೇಕೆ ಬೇಡವೆ ಎಂಬುವುದರ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಸಮ್ಮೇಳನದಲ್ಲಿ ಎಲ್ಲರಿಗೂ ಊಟ ನೀಡುವ ಬದಲು ಶುಲ್ಕ ನೀಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಪ್ರತಿನಿಧಿಗಳಿಗೆ ಹಾಗೂ ದಾನಿಗಳಿಗೆ ಸಮ್ಮೇಳನದ ಪೂರ್ವದಲ್ಲಿಯೇ ಊಟದ ಕೂಪನ್ ವಿತರಿಸಿ ಊಟದ ಸಂದರ್ಭದಲ್ಲಿ ಆಗುವ ಅವಘಡ ತಪ್ಪಿಸುವ ವಿಚಾರ ಮಾಡಲಾಗುವುದು ಎಂದು ಹೇಳಿದರು. ಕೋ. ಚೆನ್ನಬಸಪ್ಪನವರ ಸರ್ವಾಧ್ಯಕ್ಷತೆಯಲ್ಲಿ ಮೂರು ದಿನಗಳ ಕಾಲದ ನಡೆದ 79ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಖ್ಯಾತ ಕಥೆಗಾರ ನಾ. ಡಿಸೋಜಾ, ಡಾ. ಬರಗೂರ ರಾಮಚಂದ್ರಪ್ಪ,ಡಾ. ಬಸವರಾಜ ಕಲ್ಗುಡಿ, ಕಲಾವಿದೆ ಎಂ.ಡಿ. ಪಲ್ಲವಿ, ರಂಜಾನ ದರ್ಗಾ, ಸರಜೂ ಕಾಟ್ಕರ್, ಹುಲಿಕಲ್ ನಟರಾಜ ಮುಂತಾದ ಗಣ್ಯರು ಕಾರ್ಯಕ್ರದಲ್ಲಿ ಪಾಲ್ಗೊಂಡು ಸಮ್ಮೇಳನಕ್ಕೆ ಮೆರಗು ತಂದು ಕೊಟ್ಟರು.   ಒಟ್ಟಿನಲ್ಲಿ ಬಿಜಾಪುರದಲ್ಲಿ ನಡೆದ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 3 ದಿನ ಒಟ್ಟು ಸುಮಾರು 4 ಲಕ್ಷ ಜನರು ಸ್ವಯಂ ಪ್ರೇರಣೆಯಿಂದ ಆಗಮಿಸಿದ್ದರು. ಇಷ್ಟೊಂದು ಜನರು ಬೇರೆ ಯಾವುದೇ ಸಮ್ಮೇಳನದಲ್ಲಿಯೂ ಬಂದಿರಲಿಲ್ಲ.
ಒಳ್ಳೆಯ ರೆಸ್ಪಾನ್ಸ್ : ಬಿಜಾಪುರದಲ್ಲಿ ನಡೆದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಳ್ಳೆಯ ರೆಸ್ಪಾನ್ಸ ಸಿಕ್ಕಿದೆ. ಬಿಜಾದವರು ಒಳ್ಳೆಯ ಜನರು. ಸಮ್ಮೇಳನ ಅತ್ಯಂತ ಯಶಸ್ವಿಗೊಳಿಸಿದರು. ಹಿಂದಿನ ಯಾವುದೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನ ಬಂದಿರಲಿಲ್ಲ. ತಮಗೆ ತುಂಬಾ ಖುಷಿಯಾಯಿತು ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಪ್ರತಿಕ್ರಿಯಿಸಿದರು.
-ರುದ್ರಪ್ಪ ಆಸಂಗಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran war: ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ; ರಾಡಾರ್ ಕೇಂದ್ರಗಳ ಮೇಲೆ ಭಾರೀ ದಾಳಿ, ಹಾರ್ಮುಜ್ ಜಲಸಂಧಿ ಬಳಿ ಉದ್ವಿಗ್ನತೆ ಹೆಚ್ಚಳ..!

ಟ್ರಬಲ್ ಶೂಟರ್ ಡಿಕೆ. ಶಿವಕುಮಾರ್ ಸಂಧಾನ ಯಶಸ್ವಿ?: ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್ ಸಾಧ್ಯತೆ..!

ನಾರ್ವೆ ಚೆಸ್ ಟೂರ್ನಿ: ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಗೆದ್ದು ಇತಿಹಾಸ ಬರೆದ ಪ್ರಜ್ಞಾನಂದ!

‘ನೀವು ಇಂಡಿಯಾದವರಾ?’: ಭಾರತೀಯ ಪತ್ರಕರ್ತನಿಗೆ ಟ್ರಂಪ್ ಪ್ರಶ್ನೆ, ಭಾರೀ ವಿವಾದ

ಆರು ವರ್ಷಗಳಲ್ಲಿ ದುಪ್ಪಟ್ಟಾಯ್ತು ಮಲ್ಲಿಕಾರ್ಜುನ ಖರ್ಗೆ ಆಸ್ತಿ: AICC ಅಧ್ಯಕ್ಷ ಎಷ್ಟು ಕೋಟಿಯ ಒಡೆಯ?

SCROLL FOR NEXT