ಇಂಡಿ: ಮಕ್ಕಳನ್ನು ಶಾಶ್ವತ ವಿಕಲಾಂಗರನ್ನಾಗಿಸುವ ಭಯಾನಕ ಕಾಯಿಲೆಯಿಂದ ತಪ್ಪಿಸಲು ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ತಪ್ಪದೆ ಪೋಲಿಯೋ ಹನಿ ಹಾಕಿಸಬೇಕು ಎಂದು ಉಪ ವಿಭಾಗಾಧಿಕಾರಿ ಶಿವುಕುಮಾರ ಕೆಬಿ ಹೇಳಿದರು.
ಪಟ್ಟಣದ ಅಂಗನಾಡಿ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದರಿಂದ ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವುದರ ಮೂಲಕ ಆರೋಗ್ಯಕರ ಹಾಗೂ ಪೋಲಿಯೋ ಮುಕ್ತ ದೇಶವನ್ನಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಹೇಳಿದ ಅವರು,ಪೋಲಿಯೋ ಹನಿ ಹಾಕಲು ಆರೋಗ್ಯ ಹಾಗೂ ಅಂಗನವಾಡಿ ಕೇಂದ್ರದ ಸಿಬ್ಬಂದಿ ತಮ್ಮ ಮನೆಗೆ ಭೇಟಿ ನೀಡಿದಾಗ ಪಾಲಕರು ತಮ್ಮ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವುದರ ಮೂಲಕ ಸಿಬ್ಬಂದಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ತಹಸೀಲ್ದಾದಾರ ಡಾ.ಸಿದ್ದು ಹುಲ್ಲೊಳಿ, ಪುರಸಭೆ ಅಧ್ಯಕ್ಷ ದೇವೇಂದ್ರ ಕುಂಬಾರ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ ಕೋಳೆಕರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ಕೆ.ಚವ್ಹಾಣ, ಎಸ್.ಬಿ.ಬುಳ್ಳಾ, ಕೆ.ಎಂ.ಕನ್ನೂರ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.