ಬಿಜಾಪುರ

ಪಾಲಕರ ನೆಮ್ಮದಿ ಕಸಿದ ಡೊನೇಶನ್ ಹಾವಳಿ

ಕನ್ನಡಪ್ರಭವಾರ್ತೆ, ಬಿಜಾಪುರ,ಮೇ.13
ಶಾಲೆ, ಕಾಲೇಜುಗಳ ಫಲಿತಾಂಶ ಬಂತು. ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ, ಪಾಸಾದ ಸುದ್ದಿ ತಿಳಿಯುತ್ತಿದ್ದಂತೆಯೇ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಎಲ್ಲಿಲ್ಲದ ಖುಷಿ. ಆದರೆ, ಮುಂದಿನ ಶಿಕ್ಷಣದ ಪ್ರವೇಶ ಪಡೆಯುವ ಸಲುವಾಗಿ ಕಾಲೇಜುಗಳತ್ತ ಹೆಜ್ಜೆ ಹಾಕಿದ ಪೋಷಕರು ಹಾಗೂ ವಿದ್ಯಾರ್ಥಿಗಳ ಖುಷಿಯನ್ನು ಡೊನೇಶನ್ ಹಾವಳಿ ಸಂಪೂರ್ಣವಾಗಿ ಕಿತ್ತುಕೊಂಡು ಮುಂದೇನು ಎಂಬ ಚಿಂತೆಗೀಡು ಮಾಡಿದೆ.
ಜಿಲ್ಲೆಯಲ್ಲಿ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಡೊನೇಶನ್ ಹಾವಳಿ ಇಲ್ಲ. ಇದು ಸಮಾಧಾನಕರ ಸಂಗತಿಯೂ ಹೌದು. ಆದರೆ, ಬಹಳಷ್ಟು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆ, ಕಾಲೇಜುಗಳಿಗೆ ಸೇರಿಸದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಬಾಗಿಲು ಬಡಿಯುವ ಪರಿಪಾಠ ಹಾಕಿಕೊಂಡಿದ್ದಾರೆ. ಹೀಗಾಗಿ ಖಾಸಗಿ ಶಾಲೆ, ಕಾಲೇಜುಗಳಲ್ಲಿ ಕಟ್ಟಡ ಮತ್ತಿತರ ಹೆಸರಿನಲ್ಲಿ ಸಾವಿರಾರು ರು. ಡೊನೇಶನ್ ಪಡೆದು ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಸುಲಿಗೆ ಮಾಡುತ್ತಿವೆ.  
 ಕಡಿಮೆ ಎಂದರೂ ರು. 20,000 ರಿಂದ ರು. 50,000 ವರೆಗೆ ಡೊನೇಶನ್ ಡಿಮಾಂಡ್ ಮಾಡಲಾಗುತ್ತಿದೆ. ಇದು ಕದ್ದು ಮುಚ್ಚಿನ ವ್ಯವಹಾರ. ಡೊನೇಶನ್ ಹಾವಳಿ ವರ್ಷದಿಂದ ವರ್ಷಕ್ಕೆ ತನ್ನ ಕೆನ್ನಾಲಿಗೆ ಚಾಚುತ್ತಲೇ ಇದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದರೆ ಡೊನೇಶನ್ ಹಾವಳಿ ಮತ್ತಷ್ಟು ತಾರಕಕ್ಕೇರಲಿದೆ.
ಸಿಬಿಎಸ್‌ಇ ಸಿಲ್ಯಾಬಸ್, ನ್ಯಾಶನಲ್ ವಸತಿಯುತ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳಲ್ಲಿಯೂ ಡೊನೇಶನ್ ಕಡಿಮೆ ಏನಿಲ್ಲ. ರು. 20,000 ರಿಂದ ರು. 40,000 ವರೆಗೆ ಡಿಮಾಂಡ್ ಮಾಡಲಾಗುತ್ತದೆ. ವಿದ್ಯಾರ್ಥಿಗಳು, ಪೋಷಕರು ಡೊನೇಶನ್ ಹಾವಳಿಯನ್ನು ಮಾತಿನಲ್ಲಿ ವಿರೋಧಿಸುತ್ತಾರೆ. ಆದರೆ, ಮತ್ತೆ ಕದ್ದು ಮುಚ್ಚಿ ಶಿಕ್ಷಣ ಸಂಸ್ಥೆಗಳಿಗೆ ಡೊನೇಶನ್ ನೀಡಿ ಮಕ್ಕಳಿಗೆ ಪ್ರವೇಶ ಪಡೆದುಕೊಳ್ಳುತ್ತಾರೆ.
ಎಲ್ಲರೂ ಆಡುವುದೊಂದು, ಮಾಡುತ್ತಿರುವುದು ಇನ್ನೊಂದು. ಹೀಗಾಗಿ ಡೊನೇಶನ್ ಪಿಡುಗು ಲಂಗು ಲಗಾಮಿಲ್ಲದೆ ಬೆಳೆದು ವಿದ್ಯಾರ್ಥಿಗಳ, ಪೋಷಕರ ಜೀವ ಹಿಂಡುತ್ತಿದೆ.
ಮುಂದಿನ ವ್ಯಾಸಂಗಕ್ಕೆ ಶಾಲೆ, ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕಾದರೆ ಅಂಕಗಳಿಗೆ ಇಲ್ಲಿ ಬೆಲೆ ಇಲ್ಲ. ಡಿಸ್ಟಿಂಕ್ಷನ್, ಪ್ರಥಮ ಸ್ಥಾನ ಬಂದರೂ ಇಲ್ಲಿ ಯಾವುದಕ್ಕೂ ಮನ್ನಣೆ ಇಲ್ಲ. ಹೆಚ್ಚು ಅಂಕ ಗಳಿಸಿ 30 ರಿಂದ 40 ಸಾವಿರವರೆಗೆ ಡೊನೇಶನ್ ನೀಡಿದರೆ ಮಾತ್ರ ಸೀಟು ಗ್ಯಾರಂಟಿ ಎನ್ನುವಂತಾಗಿದೆ. ಅಂಕ ಕಡಮೆ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆ, ಕಾಲೇಜುಗಳೇ ಗತಿ.
ವರ್ಷವಿಡೀ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಬೊಬ್ಬೆ ಹಾಕುವ ವಿವಿಧ ರಾಜಕೀಯ ಪಕ್ಷಗಳ ಅಂಗಗಳಾದ ವಿದ್ಯಾರ್ಥಿ ಘಟಕಗಳು ಲೆಕ್ಕವಿಲ್ಲದಷ್ಟು ಇವೆ. ಅವು ಈ ಸಂದರ್ಭದಲ್ಲಿ ಗಾಢ ಮೌನಕ್ಕೆ ಶರಣಾಗುತ್ತವೆ. ಡೊನೇಶನ್ ಹಾವಳಿ ವಿರುದ್ಧ ಸಂಘಟಿತ ಹೋರಾಟ ಮಾಡುವುದಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಮಾತ್ರ ಕಣ್ಣೀರಿನಲ್ಲಿ ಕೈ ತೊಳೆಯುವುದು ಹಾಗೂ ಪೋಷಕರು ಇದ್ದು ಬಿದ್ದ ಆಸ್ತಿ ಮಾರಾಟ ಇಲ್ಲವೆ ಸಾಲಸೋಲ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ತಪ್ಪಿದ್ದಲ್ಲ.
-ರುದ್ರಪ್ಪ ಆಸಂಗಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್