ಗುಂಡ್ಲುಪೇಟೆ: ಮಂಗನ ಕಾಯಿಲೆ ಕಾಣಿಸಿಕೊಂಡಿರುವ ತಾಲೂಕಿನ ಗಡಿ ಭಾಗದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮದ್ದೂರು ಕಾಲೋನಿಗೆ ಶಾಸಕ ಎಚ್.ಎಸ್.ಮಹದೇವಪ್ರಸಾದ್ ಸೇರಿದಂತೆ ಅರಣ್ಯ ಹಾಗೂ ಆರೋಗ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ನಂತರ ಶಾಸಕರು ಮಾತನಾಡಿ, ಮಂಗನ ಕಾಯಿಲೆ ಮನುಷ್ಯರಿಗೆ ಬರುವ ಕಾಯಿಲೆಯಲ್ಲ. ಗ್ರಾಮದಲ್ಲಿ ಈ ಕಾಯಿಲೆ ಕಾಣಿಸಿಕೊಂಡಿರುವುದು ಆತಂಕಕಾರಿ. ಈವರಗೆ ಹದಿನೈದಕ್ಕೂ ಹೆಚ್ಚು ಮಂದಿ ಬಾಧಿತರಾಗಿದ್ದಾರೆ. ಕಾಲೋನಿಯಲ್ಲಿ ಈವರಗೆ 450 ಮಂದಿಗೆ ಲಸಿಕೆ ಹಾಕಲಾಗಿದ್ದು, ಬೆಟ್ಟ ಕುರುಬರಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ. ಜೇನು ಕುರುಬರಿಗೆ ಕಾಣಿಸಿಕೊಂಡಿಲ್ಲ. ಮಂಗನ ಕಾಯಿಲೆ ಮನುಷ್ಯರಿಂದ ಮನುಷ್ಯರಿಗೆ ಬರುವ ಕಾಯಿಲೆಯಲ್ಲ. ಈ ಸಂಬಂಧ 1 ವರ್ಷದ ಅವಧಿಯಲ್ಲಿ 2ನೇ ಹಂತದ ಲಸಿಕೆ ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಲೋನಿಯಲ್ಲಿ ವಾಸಿಸುವ ಎಲ್ಲ ಗಿರಿಜನರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಪ್ರಭಾರ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಹೇಮಂತ್ ಕುಮಾರ್, ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ. ಕಾಂತರಾಜು, ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರಬಾಬು, ಮದ್ದೂರು ಅರಣ್ಯ ವಲಯ ಅರಣ್ಯಾಧಿಕಾರಿ ರತ್ನಪ್ರಭ, ಗ್ರಾಪಂ ಮಾಜಿ ಅಧ್ಯಕ್ಷ ಬೇರಂಬಾಡಿ ರಾಜೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಜಿ.ಕೆ.ಲೋಕೇಶ್ ಇದ್ದರು.