ಗುಂಡ್ಲುಪೇಟೆ: ಬೆಂಗಳೂರಿನ ಸರ್ಕಾರಿ ದಂತ ವೈದ್ಯ ಕಾಲೇಜು, ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಪಟ್ಟಣದ ಭಾರತೀಯ ವೈದ್ಯ ಸಂಘ ಇವರ ಆಶ್ರಯದಲ್ಲಿ ಶನಿವಾರ
ಪಟ್ಟಣದ ಮದ್ದಾನೇಶ್ವರ ಶಾಲೆಯ ಆವರಣದಲ್ಲಿ ಕೃತಕ ದಂತ ಜೋಡಣ ಶಿಬಿರ ನಡೆಯಿತು.
ತಾಲೂಕು ಭಾರತೀಯ ವೈದ್ಯ ಸಂಘದ ಅಧ್ಯಕ್ಷ ಡಾ.ಚಂದ್ರಚೂಡ ಮಾತನಾಡಿ, ಕೃತಕ ದಂತ ಜೋಡಿಸಬೇಕಾದರೆ ಖಾಸಗಿ ಆಸ್ಪತ್ರೆಯಲ್ಲಿ 10 ರಿಂದ 20 ಸಾವಿರ ರು.ವೆಚ್ಚ ತಗಲುತ್ತದೆ. ಶಿಬಿರದಲ್ಲಿ ತಾಂತ್ರಿಕ ನೈಪುಣ್ಯತೆ ಹೊಂದಿರುವ ವೈದ್ಯರಿದ್ದು, ಒಟ್ಟು 5 ಹಂತಗಳಲ್ಲಿ ತಪಾಸಣೆಗೆ 15 ದಿನ ಬೇಕಾಗುತ್ತದೆ, ಒಬ್ಬ ವ್ಯಕ್ತಿಗೆ ದಂತ ಜೋಡಣೆ ಮಾಡಬೇಕಾದರೆ ಕನಿಷ್ಠ 2 ಗಂಟೆ ತಗಲುತ್ತದೆ. ಹಾಗಾಗಿ, 25 ಮಂದಿಗೆ ವಾರದೊಳಗಾಗಿ ಸ್ಥಳೀಯ ವೈದ್ಯರೇ ಕೃತಕ ದಂತ ಜೋಡಣೆ ಮಾಡಲಿದ್ದಾರೆ ಎಂದರು.
ಕಳೆದ ತಿಂಗಳು ನಡೆದ ಶಿಬಿರದಲ್ಲಿ ಆಯ್ಕೆಯಾಗಿದ್ದ 120 ಮಂದಿಗೆ ಕೃತಕ ದಂತ ಹಾಕಲಾಯಿತು.
ವೈದ್ಯ ಡಾ.ಮುತ್ತುಕೃಷ್ಣ, ಕಾರ್ಯದರ್ಶಿ ಡಾ.ಶಾಸ್ತ್ರಿ, ನಿರ್ದೇಶಕ ಡಾ.ಡಿ.ಆರ್.ಪೃಥ್ವಿರಾಜು, ದಂತ ಪರಿಣಿತ ಜಗದೀಶ್ ಹಳ್ಳಿಕೇರಿ ಸೇರಿದಂತೆ 40ಕ್ಕೂ ಹೆಚ್ಚು ಮಂದಿ ದಂತ ಪರಿಣಿತರು ರಾಜ್ಯದ ವಿವಿಧ ಜಿಲ್ಲೆಗಳಿಂದ ಶಿಬಿರಕ್ಕೆ ಆಗಮಿಸಿದ್ದರು.