ಚಾಮರಾಜನಗರ

ಶಾಲಾ ಶಿಕ್ಷಕರ ಉನ್ನತ ವ್ಯಾಸಂಗಕ್ಕೆ ಅಸ್ತು

  ಬಿ. ಶೇಖರ್ ಗೋಪಿನಾಥಂ
ಮೈಸೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಒಂದು ಸಾವಿರ ಶಿಕ್ಷಕರಿಗೆ ಉನ್ನತ ವ್ಯಾಸಂಗಕ್ಕೆ ಅನುಮತಿ ನೀಡಲು ಮುಂದಾಗಿದೆ. 2013-14ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿಜ್ಞಾನ, ಗಣಿತ, ಇಂಗ್ಲಿಷ್ ಭಾಷಾ ಶಿಕ್ಷಕರ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಬಿಎಸ್‌ಸಿ (ಪಿಸಿಎಂ, ಸಿಬಿಝಡ್) ಹಾಗೂ ಬಿಎ (ಇಂಗ್ಲಿಷ್) ವ್ಯಾಸಂಗಕ್ಕೆ ವೇತನ ಸಹಿತವಾಗಿ 750 ವಿಜ್ಞಾನ ಶಿಕ್ಷಕರು ಹಾಗೂ 250 ಮಂದಿ ಇಂಗ್ಲಿಷ್ ಶಿಕ್ಷಕರನ್ನು ನಿಯೋಜಿಸಲು ಸರ್ಕಾರ ಅನುಮತಿ ನೀಡಿದೆ.
ಬಿಎಸ್‌ಸಿ, ಬಿಎ ವ್ಯಾಸಂಗಕ್ಕೆ ಶಿಕ್ಷಕರನ್ನು ವೇತನ ಸಹಿತವಾಗಿ ನಿಯೋಜಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಶಿಕ್ಷಕರು ಕಾಯಂ ಸೇವಾ ಅವಧಿ ಮುಗಿಸಿರಬೇಕು, ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು. 45 ವರ್ಷ ವಯೋವುತಿ ಮೀರಿರಬಾರದು. ವಿಜ್ಞಾನ ಶಿಕ್ಷಕರು ಬಿಎಸ್‌ಸಿ (ಪಿಸಿಎಂ ಅಥವಾ ಸಿಬಿಝಡ್) ವ್ಯಾಸಂಗಕ್ಕೆ ಪ್ರಸ್ತಾವನೆ ಸಲ್ಲಿಸಬಹುದು. ಈಗಾಗಲೇ ಪದವಿ ಪಡೆದಿರುವವರು ಮತ್ತೊಮ್ಮೆ ಪದವಿ ಪಡೆಯಲು ಅವಕಾಶ ಇಲ್ಲ. ಆದರೆ, ರೆಗ್ಯುಲರ್ ಅಥವಾ ಬಾಹ್ಯವಾಗಿ ಬಿಕಾಂ ಮಾಡಿರುವ ವಿಜ್ಞಾನ ಶಿಕ್ಷಕರು ಪಿಸಿಎಂ, ಸಿಬಿಝಡ್ ವ್ಯಾಸಂಗಕ್ಕೆ ಅರ್ಜಿ ಸಲ್ಲಿಸಬಹುದು. ಇಂಗ್ಲಿಷ್ ಶಿಕ್ಷಕರಾಗಿದ್ದಲ್ಲಿ ಬಿಎ ಇಂಗ್ಲಿಷ್ ವ್ಯಾಸಂಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಬಿಎ ವ್ಯಾಸಂಗ ಮಾಡುವ ಶಿಕ್ಷಕರು ಇಂಗ್ಲಿಷ್ ವಿಷಯವನ್ನು ಒಳಗೊಂಡ ಸಂಯೋಜನೆಯನ್ನು (ಐಚ್ಛಿಕ ವಿಷಯ) ಮಾತ್ರ ತೆಗೆದುಕೊಳ್ಳಬೇಕು. ಇಂಗ್ಲಿಷ್ ಭಾಷೆ ಇಲ್ಲದ ಸಂಯೋಜನೆಗಳಿಗೆ ಅವಕಾಶ ಇಲ್ಲ. ಹಾಲಿ ಕೆಲಸ ನಿರ್ವಹಿಸುತ್ತಿರುವ ಜಿಲ್ಲೆಯೊಳಗಿನ ಯಾವುದಾದರೂ 5 ಕಾಲೇಜುಗಳಲ್ಲಿ ವ್ಯಾಸಂಗ ಮುಂದುವರಿಸುವ ಇಚ್ಛೆಯನ್ನು ಆದ್ಯತೆ ಅನುಸಾರ ಅರ್ಜಿಯಲ್ಲಿ ನಮೂದಿಸಬೇಕು. ಜಿಲ್ಲೆಯೊಳಗೆ ವ್ಯಾಸಂಗಕ್ಕೆ ಅನಾನುಕೂಲತೆ ಇದ್ದಲ್ಲಿ ಅವರಿಗೆ ಸರಿ ಹೊಂದುವ ಪಕ್ಕದ ಜಿಲ್ಲೆಗಳಲ್ಲಿ ವ್ಯಾಸಂಗ ಮಾಡಬಹುದಾಗಿದೆ. ಅದಲ್ಲದೆ ಬೇರೆ ಜಿಲ್ಲೆಗಳಲ್ಲಿ ಅವಕಾಶ ಇರುವುದಿಲ್ಲ.
ಶಿಕ್ಷಕರು ಪದವಿ ಪೂರೈಸಿದ ನಂತರ ಕನಿಷ್ಠ 10 ವರ್ಷ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವುದಾಗಿ 10 ಮೌಲ್ಯದ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರ ನೀಡಬೇಕು. ಉನ್ನತ ವ್ಯಾಸಂಗಕ್ಕೆ ನಿಯೋಜನೆಯು ಒಟ್ಟು ಸೇವಾವಧಿಯಲ್ಲಿ ಒಂದು ಬಾರಿಗೆ ಮಾತ್ರ ಸೀಮಿತ. ನಿಯೋಜಿತ ಅಭ್ಯರ್ಥಿಯು ವ್ಯಾಸಂಗವನ್ನು ಸಕಾಲದಲ್ಲಿ ಪೂರೈಸದಿದ್ದಲ್ಲಿ ವ್ಯಾಸಂಗದ ಅವಧಿಯ ವೇತನ ಭತ್ಯೆಗಳನ್ನು ಸಂಪೂರ್ಣವಾಗಿ ವಸೂಲಿ ಮಾಡಲಾಗುವುದು. ತರಬೇತಿ ಅವಧಿಯಲ್ಲಿ ಆಕಸ್ಮಿಕ ರಜೆ ಮತ್ತು ಬೇಸಿಗೆ ರಜೆ ಹೊರತುಪಡಿಸಿ ಯಾವುದೇ ತೆರನಾದ ರಜೆಗೆ ಅವಕಾಶ ಇರುವುದಿಲ್ಲ. ನಿಗದಿತ ಅವಧಿಯೊಳಗೆ ವ್ಯಾಸಂಗ ಪೂರ್ಣಗೊಳಿಸದಿದ್ದಲ್ಲಿ 1 ವರ್ಷ ವಿಸ್ತರಣಾವಧಿಯನ್ನು ನೌಕರರ ಹಕ್ಕಿನಲ್ಲಿರುವ ರಜೆಯೊಂದಿಗೆ ಪೂರೈಸಲು ಅವಕಾಶ ನೀಡಲಾಗುವುದು. ವ್ಯಾಸಂಗಕ್ಕೆ ತಗಲುವ ನೈಜ ಶುಲ್ಕ ಹಾಗೂ ಪರೀಕ್ಷಾ ಶುಲ್ಕವನ್ನು ಸರ್ಕಾರದಿಂದ ಭರಿಸಲಾಗುವುದು. ಅನುಮತಿ ನೀಡಲಾಗುವ ಶಿಕ್ಷಕರು ಕಡ್ಡಾಯವಾಗಿ ವ್ಯಾಸಂಗಕ್ಕೆ ಹೋಗಬೇಕು. ತಪ್ಪಿದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಈ ಅವಧಿಯಲ್ಲಿ ಹುದ್ದೆ ಅಲ್ಲಿಯೇ ಖಾಲಿ ಇರುವುದಿಲ್ಲ. ಖಾಲಿ ಇದ್ದಲ್ಲಿ ವ್ಯಾಸಂಗದ ನಂತರ ಪುನ- ಅದೇ ಶಾಲೆಗೆ ಹಾಜರಾಗಬೇಕು. ಈ ಹುದ್ದೆಗಳನ್ನು ಭರ್ತಿ ಮಾಡುವಾಗ ವ್ಯಾಸಂಗಕ್ಕೆ ಬಿಡುಗಡೆಯಾದ ಶಿಕ್ಷಕರ ವ್ಯಾಸಂಗ ಮುಗಿಸಿದ ನಂತರ ಕರ್ತವ್ಯಕ್ಕೆ ಹಾಜರಾಗಲು ಸಂಬಂಧಿಸಿದ ತಾಲೂಕಿನೊಳಗೆ ಹುದ್ದೆ ಖಾಲಿ ಉಳಿಸಿಕೊಳ್ಳಬೇಕು.


15ರೊಳಗೆ ಅರ್ಜಿ ಸಲ್ಲಿಸಬೇಕು


ಆಸಕ್ತ ಹಾಗೂ ಅರ್ಹ ಶಿಕ್ಷಕರಿಂದ ಫೆ.15ರೊಳಗೆ ಅರ್ಜಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸ್ವೀಕರಿಸಿ, ಈ ಅರ್ಜಿ ಮಾಹಿತಿಯನ್ನು ಗಣಕೀಕರಸಿ ಕ್ರೋಡೀಕರಿಸಿದ ನಂತರ ಮುಂಬಡ್ತಿ ನೀಡುವಾಗ ಅನುಸರಿಸುವ ನಿಯಮಗಳನ್ವಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಫೆ.20ರೊಳಗೆ ತಾಲೂಕು ವಾರು ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು 5 ದಿನ ಕಾಲಾವಕಾಶ ನೀಡಿ, ಶಿಕ್ಷಕರು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳೊಂದಿಗೆ ಸ್ಪಷ್ಟ ಅಭಿಪ್ರಾಯದ ವರದಿಯನ್ನು ಅಗತ್ಯ ದಾಖಲೆಗಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲಾ ಉಪ ನಿರ್ದೇಶಕರಿಗೆ ಸಲ್ಲಿಸಬೇಕು.
ತಾಲೂಕುವಾರು ಜ್ಯೇಷ್ಠತಾ ಪಟ್ಟಿಯ ಆಧಾರ ಹಾಗೂ ಶಿಕ್ಷಕರು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಜಿಲ್ಲಾ ಹಂತದಲ್ಲಿ ಜ್ಯೇಷ್ಠತಾ ಪಟ್ಟಿಯನ್ನು ಉಪ ನಿರ್ದೇಶಕರು ಮುಂಬಡ್ತಿ ನೀಡುವಾಗ ಅನುಸರಿಸುವ ನಿಯಮಗಳನ್ವಯ ಸಿದ್ಧಪಡಿಸಬೇಕು. ಈ ಜ್ಯೇಷ್ಠತಾ ಪಟ್ಟಿಯನ್ನು ಉಪ ನಿರ್ದೇಶಕರು ದೃಢೀಕರಿಸಿರಬೇಕು. ಈ ಪಟ್ಟಿಯನ್ನು ಅಂತಿಮ ಎಂದು ಭಾವಿಸಿ ಆದ್ಯತೆ ಮೇರೆಗೆ ಉನ್ನತ ವ್ಯಾಸಂಗಕ್ಕೆ ಅನುಮತಿ ನೀಡಲಾಗುತ್ತದೆ. ನಂತರ ಜ್ಯೇಷ್ಠತಾ ಪಟ್ಟಿಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಸಂಬಂಧಿಸಿದ ಉಪ ನಿರ್ದೇಶಕರನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ಎಚ್ಚರಿಸಿದೆ.
ಪ್ರತಿ ತಾಲೂಕಿನಿಂದ ಕನಿಷ್ಠ 10 ಶಿಕ್ಷಕರ ಜ್ಯೇಷ್ಠತಾ ಪಟ್ಟಿ ಇರಬೇಕು. ಜ್ಯೇಷ್ಠತಾನ್ವಯ ಪ್ರತಿ ತಾಲೂಕಿನ 7 ವಿಜ್ಞಾನ, 3 ಇಂಗ್ಲಿಷ್ ಭಾಷಾ ಶಿಕ್ಷಕರ ಪ್ರಸ್ತಾವನೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ನಿಗದಿತ ಚೆಕ್‌ಲಿಸ್ಟ್‌ನಲ್ಲಿ ರಾಜ್ಯದ ಎಲ್ಲಾ ಉಪ ನಿರ್ದೇಶಕರು ಸ್ವೀಕರಿಸಿ, ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರಾಥಮಿಕ ಶಿಕ್ಷಣ ನಿರ್ದೇಶಕರಿಗೆ ಸಲ್ಲಿಸಬೇಕು. 2013-14ನೇ ಶೈಕ್ಷಣಿಕ ಸಾಲಿನ ಪ್ರವೇಶ ಆರಂಭವಾಗುವ ಮೊದಲು ಬಿಎ, ಬಿಎಸ್‌ಸಿ ವ್ಯಾಸಂಗ ಮುಂದುವರಿಸುವ ಶಿಕ್ಷಕರ ಪ್ರಸ್ತಾವನೆಯನ್ನು ಸಲ್ಲಿಸುವಾಗ ಶಾಲಾ ಕಾರ್ಯಕ್ಕೆ ಅಡಚಣೆ ಆಗದಂತೆ ಬದಲಿ ಶಿಕ್ಷಕರನ್ನು ನಿಯೋಜಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಎಸ್.ಆರ್. ಉಮಾಶಂಕರ್ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ