ಮೈಸೂರು: ಕರ್ನಾಟಕದಲ್ಲಿ ಮುಸ್ಲಿಂ ವಿವಿ ಸ್ಥಾಪನೆ ವಿರೋಧಿಸಿ ಮುಸ್ಲಿಂ ವಿಶ್ವವಿದ್ಯಾನಿಲಯ ವಿರೋಧಿ ಹೋರಾಟ ಸಮಿತಿಯವರು ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಮಂಗಳವಾರ ಪ್ರತಿಭಟಿಸಿದರು.
ಟಿಪ್ಪು ಹೆಸರಿನಲ್ಲಿ ವಿವಿ ಸ್ಥಾಪಿಸುವುದಾಗಿ ಕೇಂದ್ರದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಕೆ.ರೆಹಮಾನ್ಖಾನ್ ಹೇಳಿಕೆಗೆ ಕಳೆದ ಮೂರು ತಿಂಗಳಿಂದಲೂ ಕರ್ನಾಟಕದಲ್ಲಿ ಶಿಕ್ಷಣ ತಜ್ಞರು, ನಾಡಿನ ಚಿಂತಕರು, ಕುಲಪತಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕನ್ನಡ ನಾಡಿನ ನೆಲ, ಜಲ ಮತ್ತು ಸಂಸ್ಕೃತಿಯ ವಿರುದ್ಧವಾಗಿರುವ ಮುಸ್ಲಿಂ ವಿವಿ ವಿರೋಧಿಸಿ ವಿದ್ಯಾರ್ಥಿ ಸಮುದಾಯ ಸಹ ಪ್ರತಿಭಟಿಸುತ್ತಿದ್ದಾರೆ. ಹೀಗಾಗಿ, ಕೇಂದ್ರ ಸರ್ಕಾರವು ಪ್ರತ್ಯೇಕ ಮುಸ್ಲಿಂ ವಿವಿ ಸ್ಥಾಪನೆಯ ನಿರ್ಧಾರ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕರ್ನಾಟಕದ 26 ವಿಶ್ವವಿದ್ಯಾನಿಲಯಗಳಲ್ಲಿ ಎಲ್ಲರಿಗೂ ಸಮಾನ ಶಿಕ್ಷಣಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ, ಪ್ರತ್ಯೇಕ ಮುಸ್ಲಿಂ ವಿವಿ ಸ್ಥಾಪಿಸುವುದು ಬೇಡ. ಮತಾಂಧನ ಹೆಸರಿನಲ್ಲಿ ಪ್ರತ್ಯೇಕ ವಿವಿ ಸ್ಥಾಪಿಸುವುದು ಬೇಡ. ಸಂವಿಧಾನದ 29, 30ನೇ ಪರಿಣಾಮ, ಅನ್ವಯ ಮತೀಯ ವಿವಿ ಸ್ಥಾಪನೆಗೆ ಸ್ಪಷ್ಟವಾಗಿ ಅವಕಾಶ ಇಲ್ಲ ಎಂದು ಅವರು ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.
ಪ್ರತ್ಯೇಕತೆಯ ಬೀಜ ಬಿತ್ತುತ್ತಲೇ ಇರುವ ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದಿಂದ ಸಿಮಿ, ಕೆಎಫ್ಡಿ, ಲಷ್ಕರ್ ತೋಯ್ಬಾ ಅಂತಹ ಸಂಘಟನೆಗಳು ಹುಟ್ಟಿ ಭಾರತದ ಶಾಂತಿಯನ್ನು ಹಾಳು ಮಾಡಿರುವ ಸತ್ಯ ತಿಳಿದು, ತಿಳಿದು ಮತ್ತೊಂದು ಪ್ರತ್ಯೇಕ ಮುಸ್ಲಿಂ ವಿವಿ ಸ್ಥಾಪಿಸುವುದು ಸರಿಯಲ್ಲ ಎಂದು ಅವರು ಖಂಡಿಸಿದರು. ಈ ಪ್ರತಿಭಟನೆಯಲ್ಲಿ ಆರ್ಎಸ್ಎಸ್, ಬಜರಂಗದಳ, ಶ್ರೀರಾಮಸೇನೆ, ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಎಂಡಿಎ ಅಧ್ಯಕ್ಷ ಎಲ್. ನಾಗೇಂದ್ರ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ. ಮಂಜುನಾಥ್, ಪಾಲಿಕೆ ಮಾಜಿ ಸದಸ್ಯರಾದ ಶಿವಕುಮಾರ್, ಮಹದೇವಮ್ಮ, ನಂದೀಶ್ ಪ್ರೀತಂ, ಗಿರೀಶ್ಪ್ರಸಾದ್, ಡಿ. ನಾಗಭೂಷಣ್, ಬಿಜೆಪಿ ನಗರಾಧ್ಯಕ್ಷ ಎಂ. ಶಿವಕುಮಾರ್, ಮುಖಂಡರಾದ ಮಲ್ಲಪ್ಪಗೌಡ, ಶಂಕರ್, ಹೇಮಂತ್ಕುಮಾರ್, ಮೈ.ಕಾ. ಪ್ರೇಮ್ಕುಮಾರ್, ನಿಂಗರಾಜು, ಮಂಜುನಾಥ, ರಮೇಶ್, ಎಂ. ಸತೀಶ್, ಪ್ರದೀಪ್, ಶ್ರೀರಾಮಸೇನೆಯ ಸಂಜಯ್, ಸಮಿತಿಯ ಸಂಯೋಜಕ ಸು. ಮುರುಳಿ, ಮುಸ್ಲಿಂ ವಿವಿ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಸಿ.ವಿ. ಕೇಶವಮೂರ್ತಿ, ವಕೀಲ ಭಾಸ್ಕರ್ ಮೊದಲಾದವರು ಇದ್ದರು.
ಜಾಥಾ ರದ್ದು: ನಗರ ಸ್ಥಳೀಯ ಸಂಸ್ಥೆಗಳ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಮುಸ್ಲಿ ವಿವಿ ವಿರೋಧಿ ಹೋರಾಟ ಸಮಿತಿಯು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಜಾಥಾ ರದ್ದುಗೊಳಿಸಿದರು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಪ್ರತಿಭಟಿಸಿದ ಬಳಿಕ ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಮತ್ತು ಇತರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ನಾಗಾನಾಯಕ್ ಅವರಿಗೆ ಮನವಿ ಸಲ್ಲಿಸಿದರು. ಡಿಸಿಪಿ ಬಸವರಾಜ ವೈ. ಮಾಲಗತ್ತಿ, ಎಸಿಪಿಗಳಾದ ಶಶಿಕುಮಾರ್, ಎ.ಎನ್. ಪ್ರಕಾಶ್ಗೌಡ ಮತ್ತು ಸಿಬ್ಬಂದಿ ಭದ್ರತೆ ಕೈಗೊಂಡಿದ್ದರು.
ಅಲಿಘರ್ ಮುಸ್ಲಿಂ ವಿವಿ ಸ್ಥಾಪನೆಯಿಂದ ದೇಶ ವಿಭಜನೆ ಆಯಿತು. ಅದೇ ರೀತಿ ಈಗ ಶ್ರೀರಂಗ ಪಟ್ಟಣದಲಿ ಮುಸ್ಲಿಂ ವಿವಿ ಸ್ಥಾಪಿಸುತ್ತಿರುವುದು ಮತ್ತೊಂದು ವಿಭಜನೆಗೆ ದಾರಿ ಆಗಲಿದೆ. ಮತ್ತೆ ಮುಸ್ಲಿಂರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ರೂಪಿಸಿರುವ ತಂತ್ರ ಇದು. ಈ ನಿಟ್ಟಿನಲ್ಲಿ ಎಲ್ಲರೂ ಇದಕ್ಕೆ ವಿರೋಧ ವ್ಯಕ್ತಪಡಿಸಬೇಕು.
-ತೋಂಟದಾರ್ಯ, ವಿಧಾನಪರಿಷತ್ ಮಾಜಿ ಸದಸ್ಯ