ಚಾಮರಾಜನಗರ

24ಕ್ಕೆ ಕಾರ್ಯಾಗಾರ

ಮದ್ದೂರು: ಪ್ರೌಢಶಾಲೆ ನಿರ್ಮಾಣಕ್ಕೆ ಚಾಲನೆ
ಯಳಂದೂರು: ತಾಲೂಕಿನ ಮದ್ದೂರು ಗ್ರಾಮದಲ್ಲಿ ವಾರದೊಳಗೆ 1.20 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸುವರ್ಣ ಗ್ರಾಮ ಯೋಜನೆಯಡಿ ಗುದ್ದಲಿ ಪೂಜೆ ನೆರವೇರಿಸಲಾಗುವುದೆಂದು ಶಾಸಕ ಜಿ.ಎನ್.ನಂಜುಂಡಸ್ವಾಮಿ ತಿಳಿಸಿದರು.
ಗ್ರಾಮದಲ್ಲಿ ನೂತನ ಸರ್ಕಾರಿ ಪ್ರೌಢಶಾಲೆಯ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಮದ್ದೂರು ಗ್ರಾಮಕ್ಕೆ 2007ನೇ ಸಾಲಿನಲ್ಲೇ ಸರ್ಕಾರಿ ಪ್ರೌಢಶಾಲೆ ಮಂಜೂರಾಗಿ ಅನುದಾನ ಬಿಡುಗಡೆಯಾಗಿದ್ದರೂ, ಶಾಲಾ ಕೊಠಡಿ ನಿರ್ಮಾಣಕ್ಕೆ ಬೇಕಾದ ನಿವೇಶನದ ಗೊಂದಲದಿಂದಾಗಿ ಈ ಅನುದಾನವನ್ನು ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನೂತನ ಸರ್ಕಾರಿ ಪ್ರೌಢಶಾಲೆ ನಿರ್ಮಿಸಿಕೊಡಲು ವರ್ಗಾವಣೆ ಮಾಡಲಾಗಿತ್ತು. ಈಗ ನಿವೇಶನದ ಗೊಂದಲವನ್ನು ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಬಗೆಹರಿಸಿರುವ ನಿಟ್ಟಿನಲ್ಲಿ ಗ್ರಾಮದಲ್ಲಿ ನೂತನ ಸರ್ಕಾರಿ ಪ್ರೌಢಶಾಲೆಯನ್ನು ನಿರ್ಮಿಸಲು 20 ಲಕ್ಷ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿಯನ್ನು ತುರ್ತಾಗಿ ಮುಗಿಸಿಕೊಡುವಂತೆ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ ಎಂದರು.
ಜಿಪಂ ಸದಸ್ಯ ಸಿದ್ದರಾಜು, ತಾಪಂ ಸದಸ್ಯ ರಾಮಚಂದ್ರು. ಎಸ್‌ಡಿಎಂಸಿ ಅಧ್ಯಕ್ಷ ನಂಜುಂಡಸ್ವಾಮಿ, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ರಾಜಪ್ಪ, ನಾಗರಾಜು, ಚಿಕ್ಕರಾಜು ಶೆಟ್ಟಿ, ಶಾಲೆಯ ಮುಖ್ಯೋಪಾಧ್ಯಯ ಮಲ್ಲಯ್ಯ, ಬ್ರಹ್ಮಲಿಂಗಯ್ಯ, ಚಿಕ್ಕ ಬಸವಯ್ಯ, ನಾಗಬಸವಯ್ಯ, ಯಶೋಧ, ರಾಜಮ್ಮ, ಯಳಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಾಂಶುಪಾಲ ಚೆಲುವರಾಜು, ಚಕ್ರವರ್ತಿ, ಮಹದೇವಯ್ಯ, ಮದ್ದೂರು ವಿರೂಪಾಕ್ಷ, ಎಂಜಿನಿಯರ್ ರವಿ, ಪುಷ್ಪಲತಾ ಇದ್ದರು.

ಸಿಂಹದ ಮರಿ ಸಾವು
ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಚಾಮುಂಡಿ ಹೆಸರಿನ ಹೆಣ್ಣು ಸಿಂಹದ ಮರಿ  ಬುಧವಾರ ಮೃತಪಟ್ಟಿದೆ. ಸಿಂಹದ ಮರಿಯು ಕರುಳಿನ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ. ಇದು 2012, ಜುಲೈ 29 ರಂದು ಜನಿಸಿತ್ತು.  ಮಂಗಳವಾರ ಆರೋಗ್ಯವಾಗಿಯೇ ಇದ್ದ ಸಿಂಹದ ಮರಿಯು ಸರಿಯಾಗಿ ಆಹಾರ ಸೇವಿಸಿತ್ತು. ಆದರೆ ಬುಧವಾರ ಬೆಳಗ್ಗೆ 8.45ರ ಸುಮಾರಿನಲ್ಲಿ ನೋಡಿದಾಗ ಸಿಂಹದ ಮನೆಯಲ್ಲಿ ಜೀರ್ಣವಾಗದ ಆಹಾರವು ರಕ್ತದ ಸಮೇತ ಬಿದ್ದಿತು. ಬಳಿಕ ಸಿಂಹದ ಮರಿಯನ್ನು ಪರಿಶೀಲಿಸಿದಾಗ ಅದು ಅನಾರೋಗ್ಯದಿಂದ ಮೃತಪಟ್ಟಿರುವುದು ದೃಢಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.

ಕಳವು: ವ್ಯಕ್ತಿ ಬಂಧನ
ಮೈಸೂರು: ಆಡ್ ಏಜೆನ್ಸಿಯಲ್ಲಿ ಕಳವು ಮಾಡಿ, ನಂತರ ಬೆಂಕಿ ಹಚ್ಚಿ ಹೋಗಿದ್ದ ಆರೋಪಿಯನ್ನು ದೇವರಾಜ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ವಿದ್ಯಾರಣ್ಯಪುರಂ ನಿವಾಸಿ ನಂಜಪ್ಪ ಎಂಬವರ ಪುತ್ರ ಅವಿನಾಶ್ (29) ಬಂಧಿತ ಆರೋಪಿ.

ಅಗತ್ಯ ವಸ್ತುಗಳ ಬೆಲೆ ಏರಿಕೆ: ಪ್ರತಿಭಟನೆ
ಕೊಳ್ಳೇಗಾಲ: ಅಂಚೆ ನೌಕರರು, ಕಿಸಾನ್ ಮಜ್ದೂರ್ ಸಂಘ ಹಾಗೂ ಸಿಐಟಿಯು ಸಹಯೋಗದಲ್ಲಿ ಅಂಚೆ ಕಚೇರಿ ಮುಂಭಾಗದಲ್ಲಿ ನೂರಾರು ನೌಕರರು ಬೆಲೆ ಏರಿಕೆ ಖಂಡಿಸಿ ಬುಧವಾರ ಪ್ರತಿಭಟಿಸಿದರು. ಬೆಲೆ ಏರಿಕೆಯಿಂದ ಜನರು ಬವಣೆ ಪಡುವಂತಾಗಿದೆ. ಕೂಲಿ ಕಾರ್ಮಿಕರು ಹಾಗೂ ಜನಸಾಮಾನ್ಯರ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ದೂರಿದರು.ವೆಂಕಟೇಶ, ರವಿಕುಮಾರ, ಶ್ರೀನಿವಾಸಮೂರ್ತಿ, ಕೇಶವ ಇದ್ದರು.

ಇಂದು ಹಲವೆಡೆ ವಿದ್ಯುತ್ ವ್ಯತ್ಯಯ
ಮೈಸೂರು: ಇಲ್ಲಿನ ಕೆಎಚ್‌ಬಿ ಎಂಯುಎಸ್‌ಎಸ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ ಫೆ.21ರ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಹೊಂದಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
ಪ್ರದೇಶಗಳು: ಕೆಎಚ್‌ಬಿ ಕಾಲೋನಿ, ಹೂಟಗಳ್ಳಿ ಗ್ರಾಮ, ವಿಜಯನಗರ 4ನೇ ಹಂತ, ಕೆ. ಹೆಮ್ಮನಹಳ್ಳಿ, ಹುಣಸೂರು ವರ್ತುಲ ರಸ್ತೆ, ಹೋಟೆಲ್ ಕಡೂರ್ ಇನ್ ವರೆಗೆ ಹಾಗೂ ಸುತ್ತಮುತ್ತಲ ಪ್ರದೇಶ.

ಹಾಕಿ ಆಟಗಾರ್ತಿ ರೋಹಿಣಿಗೆ ಪ್ರಶಸ್ತಿ
ಮೈಸೂರು: ರೋಟರಿ ಮೈಸೂರು ಮಿಡ್‌ಟೌನ್ ಮೈಸೂರು ಸಂಸ್ಥೆ ಬುಧವಾರ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ರೋಟರಿ ಮಿಡ್‌ಟೌನ್ ಸ್ಪೋರ್ಟ್ಸ್ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿತ್ತು.
ಹಾಕಿ ಆಟಗಾರ್ತಿ ಎಂ.ಪಿ. ರೋಹಿಣಿಗೆ ರೋಟರಿ ಮಿಡ್‌ಟೌನ್ ಸ್ಪೋರ್ಟ್ಸ್ ಪ್ರಶಸ್ತಿಯನ್ನು ಪತ್ರಿಕೋದ್ಯಮಿ ರಾಜಶೇಖರ ಕೋಟಿ ಪ್ರದಾನ ಮಾಡಿದರು.ರೋಟರಿ ಸಂಸ್ಥೆ ಅಧ್ಯಕ್ಷ ಆರ್.ಎಸ್. ವಿಶ್ವನಾಥ್, ಕಾರ್ಯದರ್ಶಿ ಎಲ್.ಎಂ. ಮನೋಜ್‌ಕುಮಾರ್ ಉಪಸ್ಥಿತರಿದ್ದರು.  

ಅಧಿಸೂಚನೆ ಪ್ರಕಟ: ಖಂಡನೆ
ಮೈಸೂರು: ಕೇಂದ್ರ ಸರ್ಕಾರ ಕಾವೇರಿ ನ್ಯಾಯಾಧೀಕರಣದ ಐತೀರ್ಪಿನ ಅಧಿಸೂಚನೆ ಪ್ರಕಟಿಸಿರುವುದನ್ನು ಕಾವೇರಿ ಕ್ರಿಯಾ ಸಮಿತಿ ಪ್ರಧಾನ ಸಂಚಾಲಕ ತಾಯೂರು ವಿಠ್ಠಲಮೂರ್ತಿ ಖಂಡಿಸಿದ್ದಾರೆ. ತಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿದ ಪ್ರಧಾನಮಂತ್ರಿಗಳು ಕರ್ನಾಟಕದ ರೈತರಿಗೆ ಹಾಗೂ ಕುಡಿಯುವ ನೀರಿಗೆ ಮರಣ ಶಾಸನ ಬರೆದಿದ್ದಾರೆ. ಇದು ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯುಂಟಾಗಿದೆ. ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿರುವ ಅವರು ರಾಜ್ಯದ ಸಂಸದರು ಮತ್ತು ಕೇಂದ್ರ ಮಂತ್ರಿಗಳು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಬ್ಯಾಡ್ಮಿಂಟನ್‌ಗೆಪ್ರಭುಗೌಡಪ್ಪ ಆಯ್ಕೆ
ಮೈಸೂರು: ಮುಂಬೈನಲ್ಲಿ ನಡೆಯಲಿರುವ 36ನೇ ಹಿರಿಯರ ರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಎಸ್. ಪ್ರಭುಗೌಡಪ್ಪ ಕರ್ನಾಟಕ ಪ್ರತಿನಿಧಿಸಲಿದ್ದಾರೆ. ಮುಂಬೈನಲ್ಲಿ ಫೆ. 21 ರಿಂದ 24 ರವರೆಗೆ ಈ ಪಂದ್ಯಾವಳಿ ನಡೆಯಲಿದ್ದು, ಪ್ರಭು ಗೌಡಪ್ಪ ಅವರು ಮೂರನೇ ಬಾರಿಗೆ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಇವರನ್ನು ಮೈಸೂರು ಜಿಲ್ಲಾ ಬ್ಯಾಡ್ಮಿಂಟನ್ ಅಸೋಷಿಯೇಷನ್ ಅಭಿನಂದಿಸಿದೆ.

ಸಮರ್ಪಣಾ ಸಾಂಸ್ಕೃತಿಕೋತ್ಸವ
ಟಿ. ನರಸೀಪುರ: ತಲಕಾಡಿನಲ್ಲಿರುವ ಸಮರ್ಪಣಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವವು ಇತ್ತೀಚೆಗೆ ನಡೆಯಿತು.ಮುಕ್ತ ವಿವಿ ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ರಂಗಸ್ವಾಮಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದೇ ಪೋಷಕರ ಆದ್ಯ ಕರ್ತವ್ಯ ಎಂದು ಕಿವಿಮಾತು ಹೇಳಿದರು.ಬಿಇಒ ಜಿ.ಎ. ಲೋಕೇಶ್ ಮತ್ತಿತರರು ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಎನ್.ವಿ. ಫಣೀಶ್, ಕಾರ್ಯದರ್ಶಿ ಸುಧಾ ಫಣೀಶ್, ಉಪಾಧ್ಯಕ್ಷ ನಾಗೇಂದ್ರ, ಖಜಾಂಚಿ ರಮೇಶ್, ಸದಸ್ಯರಾದ ಆನಂದ ದೀಕ್ಷಿತ್, ಅನಿತಾ ನಾಗೇಂದ್ರ, ಅನುಪಮಾ ರಮೇಶ್ ಇದ್ದರು.

ವಾಹನ ಹರಿದು ವ್ಯಕ್ತಿ ಸಾವು
ಟಿ.ನರಸೀಪುರ:  ವಾಹನ ಹರಿದು ನಿವೃತ್ತ ಕೆಇಬಿ ನೌಕರರೊಬ್ಬರು ಸಾವಿಗೀಡಾಗಿರುವ ಘಟನೆ ತಾಲೂಕಿನ ಆಲಗೂಡು ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಟಿ.ನರಸೀಪುರ ತಾಲೂಕಿನ ಆಲಗೂಡು ಗ್ರಾಮದ ಬಸವಣ್ಣ (55) ಮೃತಪಟ್ಟವರು. ಬೆಳಗ್ಗೆ ಬಹಿರ್ದೆಸೆಗೆಂದು ತೆರಳಿದ್ದ ಸಂದರ್ಭದಲ್ಲಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಈ ದುರ್ಘಟನೆ ನಡೆದಿದೆ. ಈ ಸಂಬಂಧ ಟಿ.ನರಸೀಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಮರಾಜನಗರ: ಕೇಂದ್ರದ ಪರಿಸರ ಮತ್ತು ಅರಣ್ಯ ಮಂತ್ರಾಲಯದ ಪ್ರಾಯೋಜಕತ್ವದಲ್ಲಿ ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರ, ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾ ಚಾಪ್ಟರ್ ಮತ್ತು ಪ್ರಾದೇಶಿಕ ಕಚೇರಿ, ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ, ಭಾರತ ವಿಜ್ಞಾನ ಜಿಲ್ಲಾ ಸಮಿತಿ, ರೋಟರಿ ಸಂಸ್ಥೆ ಸಹಯೋಗದಲ್ಲಿ ಫೆ.24ರಂದು ರೋಟರಿ ಭವನದಲ್ಲಿ ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಕಾರ್ಯಗಾರ ಏರ್ಪಡಿಸಲಾಗಿದೆ. ಜಿಲ್ಲೆಯ ಆಯ್ದ ವೈದ್ಯರು, ಆಸ್ಪತ್ರೆ ಮೇಲ್ವಿಚಾರಕರು, ದಾದಿಯರು, ನರ್ಸಿಂಗ್ ಕಾಲೇಜಿನ ಉಪನ್ಯಾಸಕರು ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಫೆ.24ರ ಬೆಳಗ್ಗೆ 11ರಿಂದ 4.30ರವರೆಗೆ ಈ ಕಾರ್ಯಗಾರ ನಡೆಯಲಿದೆ. ಕಾರ್ಯಗಾರದಲ್ಲಿ 5 ಉಪಯುಕ್ತ ತಾಂತ್ರಿಕ ಅಧಿವೇಶನ ನಡೆಯಲಿದೆ. ಜೀವ ವೈದ್ಯಕೀಯ ತ್ಯಾಜ್ಯ ಕುರಿತು ಚಲನಚಿತ್ರ ಹಾಗೂ ಗುಂಪು ಚರ್ಚೆ ಮಾಡಿ ನಿರ್ಣಯಗಳನ್ನು ಮಂಡಿಸಲಾಗುವುದು ಎಂದು ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರದ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಸೇರ್ಪಡೆ
ಗುಂಡ್ಲುಪೇಟೆ: ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಶಾಸಕ ಎಚ್.ಎಸ್.ಮಹದೇವಪ್ರಸಾದ್ ನೇತೃತ್ವದಲ್ಲಿ ನೂರಾರು ವಿವಿಧ ಪಕ್ಷಗಳ ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾದರು.
ಮಾಜಿ ಪುರಸಭಾ ಅಧ್ಯಕ್ಷ ರಮೇಶ್, ಪಿ.ವೆಂಕಟಚಲಾ, ಮಾಜಿ ಸದಸ್ಯರಾದ ಪಿ.ಸೋಮಶೇಖರ್ ಹಾಗೂ ಬಿಜೆಪಿ ಮುಖಂಡರಾದ ರಾಜಗೋಪಾಲ್, ಶಿವಶಂಕರ್, ನಾಗರತ್ಮಮ್ಮ, ಪುರುಷೋತ್ತಮ್ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ್ದಾರೆ.

ಪೌರಾಯುಕ್ತರಾಗಿ ಕೃಷ್ಣಮೂರ್ತಿ
ಚಾಮರಾಜನಗರ: ನಗರಸಭಾ ಪೌರಾಯುಕ್ತರಾಗಿ ವಿ.ಎಚ್.ಕೃಷ್ಣಮೂರ್ತಿ ಮತ್ತೆ ಅಧಿಕಾರ ವಹಿಸಿಕೊಂಡರು.
ಒಂದು ವರ್ಷದ ಹಿಂದೆ ನಗರಸಭಾ ಪೌರಾಯುಕ್ತರಾಗಿ ನೇಮಕವಾಗಿದ್ದ ಅವರನ್ನು ಸರ್ಕಾರ ದಾಂಡೇಲಿ ನಗರಸಭೆಗೆ ವರ್ಗಾವಣೆ ಮಾಡಿತ್ತು. ಈ ಜಾಗಕ್ಕೆ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಸ್ವಾಮಿ ಅವರನ್ನು ನೇಮಕ ಮಾಡಿತ್ತು. ಈ ವರ್ಗಾವಣೆಯನ್ನು ಪ್ರಶ್ನಿಸಿ ಕೃಷ್ಣಮೂರ್ತಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮಂಡಳಿ, ಕೃಷ್ಣಮೂರ್ತಿ ಅವರ ವರ್ಗಾವಣೆಗೆ ತಾತ್ಕಾಲಿಕ ತಡೆ ನೀಡಿ, ಫೆ. 14ರಂದು ಮಧ್ಯಂತರ ಆದೇಶ ನೀಡಿತು. 3 ತಿಂಗಳವರೆಗೆ, ಇಲ್ಲವೇ ಪ್ರಸಕ್ತ ಅರ್ಜಿ  ವಿಲೇವಾರಿಯಾಗುವವರೆಗೂ ವರ್ಗಾವಣೆ ಅದೇಶಕ್ಕೆ ತಡೆ ನೀಡಿ ಹಾಲಿ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸುವಂತೆ ಅದೇಶದಲ್ಲಿ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ನಗರಸಭಾ ಕಚೇರಿಗೆ ಆಗಮಿಸಿದ ಕೃಷ್ಣಮೂರ್ತಿ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ನಗರಸಭಾ ಎಇಇ ಶ್ರೀನಿವಾಸ್, ವ್ಯವಸ್ಥಾಪಕಿ ಮಸಿಟಾ ರೀಟಾ ಇದ್ದರು.

ಮಧ್ವಾಚಾರ್ಯ ಜಯಂತಿ ಸರ್ಕಾರಿ ಆಚರಣೆಯಾಗಲಿ
ಚಾಮರಾಜನಗರ: ನಗರದ ಮಾಧ್ವ ನವಮಿ ಅಂಗವಾಗಿ ಜಿಲ್ಲಾ ಮಾಧ್ವ ಮಂಡಲದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರು ಹಾಗು ಸ್ಪರ್ಧಾ ವಿಜೇತರನ್ನು ಸನ್ಮಾನಿಸಲಾಯಿತು.
ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆದ ಮಧ್ವ ನವಮಿ ಸಮಾರಂಭದಲ್ಲಿ ಕೊಳ್ಳೇಗಾಲದ ಉದ್ಯಮಿ, ಯೋಗಪಟು ಪಶುಪತಿ ಆಯ್ಯರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಧ್ವಾಚಾರ್ಯರು ಜಾತಿಬೇಧವಿಲ್ಲದೆ ಎಲ್ಲ ವರ್ಗದವರನ್ನು ಸಮಾನವಾಗಿ ಕಂಡ ಮಹಾಪುರುಷ ಎಂದರು. ಜಿಲ್ಲಾ ಮಾಧ್ವ ಮಂಡಲದ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ, ಸರ್ಕಾರ ಇತ್ತೀಚೆಗೆ ಅನೇಕ ಮಹಾಪುರುಷರ ಜನ್ಮದಿನವನ್ನು ಆಚರಿಸುತ್ತಿದೆ. ಅದೇ ಮಾದರಿಯಲ್ಲಿ ಹಿಂದೂ ಸಮಾಜದ ಅಭ್ಯುದಯಕ್ಕೆ ದುಡಿದ ಮಧ್ವಾಚಾರ್ಯರ ಜಯಂತಿ ಆಚರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಪ್ರತಿ ವರ್ಷ ಫೆ.19ರಂದು ಬರಲಿರುವ ಮಧ್ವನವಮಿಯನ್ನು ಜಿಲ್ಲಾ ಹಾಗೂ ತಾಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಕಾರ್ಯಕ್ರಮ ರೂಪಿಸಬೇಕು ಎಂದು ಆಗ್ರಹಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರುಕ್ಮಿಣಮ್ಮ, ಶ್ರೀಶ ಭಟ್, ಲಕ್ಷ್ಮೀ ನರಸಿಂಹ, ಗುರುರಾಜ್ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಬಿಆರ್‌ಐ(ಅ)ಅಭ್ಯರ್ಥಿಗಳು ಕಣಕ್ಕೆ
ಚಾಮರಾಜನಗರ: ಜಿಲ್ಲೆಯಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾರತೀಯ ರಿಪಬ್ಲಿಕನ್ ಪಕ್ಷ(ಅ) ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಪಿ. ಸಂಘಸೇನಾ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಾಮರಾಜನಗರ, ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ಪುರಸಭೆ, ಯಳಂದೂರು ಮತ್ತು ಹನೂರು ಪಟ್ಟಣ ಪಂಚಾಯಿತಿಗೆ ನಡೆಯುವ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ತಿಳಿಸಿದ್ದಾರೆ. ಸ್ಪರ್ಧಿಸುವವರು ಪಿ. ಸಂಘಸೇನಾ 9731668640 ಮತ್ತು ಎಸ್‌ಎಸ್‌ಡಿ ಜಿಲ್ಲಾಧ್ಯಕ್ಷರಾದ ಕೆ. ವಂಗಪ್ಪ 7760267825 ಇವರನ್ನು ಸಂಪರ್ಕಿಸಬಹುದು.

ಹಳ್ಳಿ ಹೈಕ್ಳ ಚಿತ್ರಕಲಾ ಪ್ರದರ್ಶನ
ಚಾಮರಾಜನಗರ: ನಗರದ ಸ್ಫೂರ್ತಿ ಇನ್ಸ್‌ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಮತ್ತು ಸ್ಫೂರ್ತಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ತಾಲೂಕು ಬಿಸಲವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮಕ್ಕಳ ಹಳ್ಳಿ ಹೈಕ್ಳ ಚಿತ್ರಕಲಾ ಪ್ರದರ್ಶನವನ್ನು ಫೆ.22ರಿಂದ 24ರವರೆಗೆ ನಗರದ ಸ್ಫೂರ್ತಿ ಸ್ಟಡಿ ಸೆಂಟರ್‌ನಲ್ಲಿ ಏರ್ಪಡಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಚಿತ್ರಕಲಾ ಪ್ರದರ್ಶನಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಲಾಗಿದೆ.

ನಾಳೆ ಸಭಾಭವನ ಉದ್ಘಾಟನೆ
ಬೇಗೂರು: ಕಲ್ಲಹಳ್ಳಿ ಗ್ರಾಮದ ಸಮೀಪವಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ನವರಂಗ ಸಭಾಭವನದ ಉದ್ಘಾಟನೆಯು ಫೆ.22ರ ಬೆಳಗ್ಗೆ ನೆರವೇರಲಿದೆ. ಮಧ್ಯಾಹ್ನ 1 ಗಂಟೆಗೆ ಭಾಗವಹಿಸುವ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗವಿರುತ್ತದೆ. ಸುತ್ತಮುತ್ತಲ ಗ್ರಾಮದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸಮಿತಿ ಕೋರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ