ಚಾಮರಾಜನಗರ

ಮೇವಿನ ಬಿಲ್ಲೆ ತಯಾರಿಕಾ ಘಟಕ ಕಾರ್ಯಾರಂಭ

ಚಾಮರಾಜನಗರ: 2020ರ ವೇಳೆಗೆ ರಾಷ್ಟ್ರದಲ್ಲಿ 220 ಮಿಲಿಯನ್ ಟನ್ ಹಾಲು ಉತ್ಪಾದನೆ ಗುರಿ ಹಾಕಿಕೊಳ್ಳಲಾಗಿದೆ ಎಂದು ಸಂಸದ ಆರ್. ಧ್ರುವನಾರಾಯಣ ತಿಳಿಸಿದರು.
ತಾಲೂಕಿನ ಮುಣಚನಹಳ್ಳಿಯಲ್ಲಿ ನಿರ್ಮಾಣ ಮಾಡಲಾಗಿರುವ ದಕ್ಷಿಣ ಭಾರತದ ಮೊದಲ ಮೇವಿನ ಬಿಲ್ಲೆ ತಯಾರಿಕಾ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಭಾರತ ಹಾಲಿನ ಉತ್ಪಾದನೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. ದೇಶ ಹೈನುಗಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು, ಇದೀಗ 110 ಮಿಲಿಯನ್ ಟನ್ ಹಾಲು ಉತ್ಪಾದನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮೈಸೂರು- ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಲಿನ ಉತ್ಪಾದನೆಯಲ್ಲಿ 3ನೇ ಸ್ಥಾನ ಪಡೆದಿದೆ. ತಾಲೂಕಿನಲ್ಲಿ ನೂತನವಾಗಿ ಕಾರ್ಯಾರಂಭವಾಗಿರುವ ಮೇವಿನ ಬಿಲ್ಲೆ ತಯಾರಿಕಾ ಘಟಕವು ರೈತಾಪಿ ವರ್ಗಕ್ಕೆ ಅನುಕೂಲವಾಗಲಿದೆ. ರಾಷ್ಟ್ರೀಯ ವಿಕಾಸ ಯೋಜನೆಯಡಿ ಘಟಕ ನಿರ್ಮಾಣವಾಗಿದೆ ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅವಶ್ಯವಿರುವ ಕಟ್ಟಡಗಳಿಗೆ ತಮ್ಮ ಸಂಸತ್ ನಿಧಿಯ ಅನುದಾನದಲ್ಲಿ ನೆರವು ನೀಡುತ್ತಿದ್ದು, ಇದನ್ನು ಮುಂದುವರೆಸಲಾಗುವುದು. ಬಹುತೇಕ ಜನರು ಸಮುದಾಯ ಭವನಗಳಿಗೆ ಬೇಡಿಕೆ ಬರುತ್ತಿದ್ದು, ಇದಕ್ಕಿಂತ ಪ್ರಾಮುಖ್ಯವಾಗಿರುವ ಶಾಲೆ, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅನುದಾನ ಅಗತ್ಯವಿರುವುದನ್ನು ಮನಗಾಣಬೇಕು ಎಂದರು.
ಶಾಸಕ ಎಚ್.ಎಸ್. ಮಹದೇವಪ್ರಸಾದ್ ಮಾತನಾಡಿ, ಮಳೆಯಾಶ್ರಿತ ಚಾಮರಾಜನಗರ ಜಿಲ್ಲೆಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ಕುಟುಂಬಗಳಿಗೆ ಮೇವಿನ ಬಿಲ್ಲೆ ಘಟಕ ವರದಾನವಾಗಿದೆ. ಮೈಸೂರು-ಚಾಮರಾಜನಗರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಲ್ಲಿ ಉತ್ಪಾದಿಸಲಾಗುವ 6 ಲಕ್ಷ ಲೀ. ಹಾಲಿನ ಪೈಕಿ 2 ಲಕ್ಷ ಲೀಟರನ್ನು ಜಿಲ್ಲೆಯ ಉತ್ಪಾದಕರು ಸರಬರಾಜು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇವು ಉತ್ಪನ್ನಗಳ ಘಟಕವನ್ನು ಸದುಪಯೋಗ ಮಾಡಿಕೊಳ್ಳಬೇಕಿದೆ ಎಂದರು.
ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ ಮೇವು ಬೆಳೆ ಘಟಕಕ್ಕೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಬೇಡಿಕೆ ಇಟ್ಟಿರುವ 20 ಎಕರೆ ಜಮೀನು ಒದಗಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು. ನೀರಿನ ಲಭ್ಯತೆ ಪ್ರದೇಶವನ್ನು ಗುರುತಿಸಿ ಭೂಮಿ ನೀಡುವ ದಿಸೆಯಲ್ಲಿ ಜಿಲ್ಲಾಧಿಕಾರಿ ನೆರವಿನೊಂದಿಗೆ ಕ್ರಮ ವಹಿಸಲಾಗುವುದು ಎಂದರು.
ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಸುರೇಶ್ ಬಾಬು ಮಾತನಾಡಿ, ರಸಮೇವು ತಯಾರಿಕಾ ಘಟಕಕ್ಕೆ 85 ಲಕ್ಷ ಬಿಡುಗಡೆಯಾಗಿದೆ. ಚಾಮರಾಜನಗರ ಮತ್ತು ಹುಣಸೂರಿನಲ್ಲಿ ಹಾಲಿನ ಪ್ಯಾಕೆಟ್ ಘಟಕ ನಿರ್ಮಾಣ ಮಾಡಲು 622 ಲಕ್ಷ ವೆಚ್ಚದ ಘಟಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಮಂಜೂರಾತಿ ದೊರೆಯುವ ನಿರೀಕ್ಷೆಯಿದೆ ಎಂದರು.
ಮೈಸೂರು ಚಾ.ನಗರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಎನ್. ಮಹದೇವಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ನಾಗಶ್ರೀ ಪ್ರತಾಪ್, ಉಪಾಧ್ಯಕ್ಷ ಪಿ. ಮಹದೇವಪ್ಪ, ಶಿವಪುರ ಗ್ರಾಪಂ ಅಧ್ಯಕ್ಷೆ ಗುರುತಾಯಮ್ಮ, ಉಪಾಧ್ಯಕ್ಷೆ ಎಂ.ಸಿ. ಮಹದೇವಮ್ಮ, ಕರ್ನಾಟಕ ಸಹಕಾರ ಹಾಲು ಮಹಾಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಎ.ಎಸ್. ಪ್ರೇಮನಾಥ್, ಹಾಲು ಮಹಾಮಂಡಳಿಯ ಹಿರಿಯ ಅಧಿಕಾರಿ ರವಿಕುಮಾರ್ಕಾಕಡೆ, ಒಕ್ಕೂಟದ ಆಡಳಿತ ಮಂಡಳಿಯ ಸದಸ್ಯರಾದ ಸಿ. ಓಂಪ್ರಕಾಶ್, ಎ.ಟಿ. ಸೋಮಶೇಖರ್, ಎಂ.ಶಿವಾನಂದಸ್ವಾಮಿ, ಕೆ. ಹಿರೇಗೌಡ, ಕೆ.ಜಿ. ಮಹೇಶ್, ನಂ. ಸಿದ್ದಪ್ಪ, ಟಿ.ಎ. ರಾಜೇಗೌಡ, ಎಸ್. ಮಹದೇವಸ್ವಾಮಿ, ವಿಮಲಾಶಂಕರ್, ನೀಲಾಂಬಿಕೆ, ಎಸ್.ಇ. ಅಶೋಕ್, ಮಂಜುಳ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸದಸ್ಯ ಎಚ್.ಎಸ್. ಬಸವರಾಜ್ ಅವರು ಸ್ವಾಗತಿಸಿದರು.

ಮೇವು ಬಿಲ್ಲೆ ಘಟಕ ಬಿಎಸ್‌ವೈ ಕೊಡುಗೆ
ತಾಲೂಕಿನ ಮಣಚನಹಳ್ಳಿಯಲ್ಲಿ ಮೇವು ಬಿಲ್ಲೆ ಘಟಕ ಸ್ಥಾಪನೆ ಸಂಬಂಧ 2010- 11ರ ಬಜೆಟ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದರು ಎಂದು ವಿಪ ಸದಸ್ಯ ಪ್ರೊ. ಕೆ.ಆರ್.ಮಲ್ಲಿಕಾರ್ಜುನಪ್ಪ ತಿಳಿಸಿದರು. ಇಂಥದೊಂದು ಯೋಜನೆ ಇದೆ ಎಂದು ಮೈಮುಲ್ ಮಾಜಿ ನಿರ್ದೇಶಕ ಕೋಡಿಮೋಳೆ ರಾಜಶೇಖರ್ ನನ್ನ ಗಮನಕ್ಕೆ ತಂದರು. ನಂತರು ಎರಡು- ಮೂರು  ಬಾರಿ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಸಂಬಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡುವುದಲ್ಲದೆ, ಯಡಿಯೂರಪ್ಪ ಅವರ ಗಮನಕ್ಕೆ ತಂದು ಬಜೆಟ್‌ನಲ್ಲಿ ಘೋಷಣೆ ಮಾಡಿಸಿದ್ದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್