ಗುಂಡ್ಲುಪೇಟೆ: ತಾಲೂಕಿನ ಬೇಗೂರು ಸಾರಿಗೆ ಬಸ್ ನಿಲ್ದಾಣದಲ್ಲಿ ಕಳೆದ ಮೂರು ತಿಂಗಳಿಂದ ಕುಡಿಯುವ ನೀರಿಲ್ಲದೆ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಜತೆಗೆ ನಿಲ್ದಾಣದ ಶೌಚಾಲಯಕ್ಕೆ ನೀರು ಹಾಕದೇ ಇರುವ ಕಾರಣ ನಿಲ್ದಾಣ ಗಬ್ಬೆದ್ದು ನಾರುತ್ತಿದ್ದು, ಪ್ರಯಾಣಿಕರು ಮೂಗು ಮುಚ್ಚಿಕೊಂಡು ನಿಲ್ಲಬೇಕಾದ ಪರಿಸ್ಥಿತಿಯಿದೆ.
ಮೂರು ತಿಂಗಳ ಹಿಂದೆ ಬಸ್ ನಿಲ್ದಾಣದ ಬೋರ್ವೆಲ್ ಕೆಟ್ಟು ನಿಂತಿರುವುದೇ ಈ ಎಲ್ಲ ಸಮಸ್ಯೆಗಳಿಗೆ ಪ್ರಮುಖ ಕಾರಣ. ಸುಸಜ್ಜಿತ ಬಸ್ ನಿಲ್ದಾಣವನ್ನು ಶಾಸಕರು ನಿರ್ಮಿಸಿ ಕೊಟ್ಟಿದ್ದರೂ, ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಯಾಣಿಕರು ಪಡಬಾರದ ಪಾಡು ಪಡುತ್ತಿದ್ದಾರೆ.
ಇನ್ನಾದರೂ ಸಾರಿಗೆ ಇಲಾಖೆಯ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಸಾರಿಗೆ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.