ಕ.ಪ್ರ.ವಾರ್ತೆ ಚಾಮರಾಜನಗರ ಮಾ.29
ಗ್ರಾಮೀಣಾಭಿವೃದ್ಧಿ ಹರಿಕಾರ, ರಾಜ್ಯಕ್ಕೆ ಕುಡಿಯುವ ನೀರು ಕೊಟ್ಟು 'ನೀರ್‌ಸಾಬ್' ಎಂದೇ ಖ್ಯಾತರಾದ ಅಬ್ದುಲ್ ನಜೀರ್ ಸಾಬ್ ಊರು ಗುಂಡ್ಲುಪೇಟೆಯಲ್ಲೇ ವಾರಕ್ಕೊಮ್ಮೆ ನೀರು!
ಕೊಳವೆ ಬಾವಿ ಮೂಲಕ ಇಡಿ ರಾಜ್ಯದ ನೀರಿನ ದಾಹ ನೀಗಿಸಿದ ನಜೀರ್ ಸಾಬ್‌ಗೆ ಸಾವಿರ ಸಾವಿರ ಸಲಾಮು ಹಾಕಿದರೂ ಸಾಲದು. ಆದರೆ, ಅವರ ಆದರ್ಶದಲ್ಲಿ ಸಾಗಬೇಕಾದ ಗುಂಡ್ಲುಪೇಟೆ ಜನಪ್ರತಿನಿಧಿಗಳು ಜಲ ರಾಜಕೀಯ ಮಾಡುವ ಮೂಲಕ ಇಡಿ ಪಟ್ಟಣದ ಜನತೆಯಿಂದ ಶಾಪ ಹಾಕಿಸಿಕೊಳ್ಳುತ್ತಿದ್ದಾರೆ.
ಇದರಿಂದ ಹನಿ ನೀರಿಗೂ ತತ್ವಾರ ಪಡುವಂತಾಗಿದೆ. ಕೆಲ ಬಡಾವಣೆಗಳಿಗಂತೂ ವಾರ, ಹದಿನೈದು ದಿನಗಳಿಗೊಮ್ಮೆ ನೀರು ಪೂರೈಕೆಯಾಗುವುದೂ ಕಷ್ಟ. ಕಳೆದೈದು ವರ್ಷಗಳಿಂದ ತೀವ್ರವಾಗಿ ತಲೆದೋರಿರುವ ನೀರಿನ ಸಮಸ್ಯೆಯಿಂದ ಸ್ಥಳೀಯರು ಪಟ್ಟಣ ಬಿಟ್ಟು ನಗರಕ್ಕೆ ವಲಸೆ ಹೋಗತ್ತಿದ್ದಾರೆ. ಜೊತೆಗೆ, ಹೊರಗಿನಿಂದ ಜನರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಷ್ಟೇ ಏಕೆ, ಬೇಸಗೆಯಲ್ಲಂತೂ ನೆಂಟರನ್ನು ಆಹ್ವಾನಿಸುವುದಕ್ಕೂ ಹಿಂದು ಮುಂದು ನೋಡುವಂಥ ಸ್ಥಿತಿ ಇಲ್ಲಿದೆ.
ಸೋತ ಪ್ರಸಾದ್: ಗುಂಡ್ಲುಪೇಟೆ ವಿಧಾಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಆಯ್ಕೆಯಾಗಿ 'ಗುಂಡ್ಲುಪೇಟೆ ಅಮ್ಮ' ಎಂದೇ ಖ್ಯಾತರಾದ ನಾಗರತ್ನಮ್ಮ ಹಾಗೂ ನೀರ್‌ಸಾಬ್ ಅವರ ಕೆಲವು ಆದರ್ಶಗಳನ್ನು ಮೈಗೂಡಿಸಿಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಶಾಸಕ ಎಚ್.ಎಸ್.ಮಹದೇವಪ್ರಸಾದ್ ಅವರೂ ನೀರಿನ ಸಮಸ್ಯೆ ನೀಗಿಸುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ (ಕೆಜೆಪಿ) ನಡುವಿನ ಜಲ ರಾಜಕೀಯದಲ್ಲಿ ಜನರು ತತ್ತರಿಸಿ ಹೋಗಿದ್ದಾರೆ.
ಮಹದೇವಪ್ರಸಾದ್ ಅವರ 16 ಬೆಂಬಲಿಗರು ಕಳೆದ ಬಾರಿ ಪುರಸಭಾ ಸದಸ್ಯರಾಗಿದ್ದರು. ಆದರೂ, ಪಟ್ಟಣದ ನೀರಿನ ಸಮಸ್ಯೆಗೆ ಪರಿಹಾರ ಹುಡುಕಲು ಯತ್ನಿಸಲಿಲ್ಲ. ಪಟ್ಟಣದ ನಾಲ್ಕು ಒವರ್‌ಹೆಡ್ ಟ್ಯಾಂಕ್ ಕಳೆದ ಎರಡು ವರ್ಷಗಳಿಂದ ನೀರನ್ನೇ ಕಂಡಿಲ್ಲ. ಇನ್ನೂ ಹೊಸದಾಗಿ ನಿರ್ಮಿಸಲಾದ ಮಡಹಳ್ಳಿ ರಸ್ತೆಯ ಮಾನಸ ಶಿಕ್ಷಣ ಸಂಸ್ಥೆ ಆವರಣದಲ್ಲಿರುವ ಟ್ಯಾಂಕ್‌ಗಂತೂ ನೀರನ್ನೇ ಬಿಟ್ಟಿಲ್ಲ.
ನಂಜನಗೂಡು ತಾಲೂಕಿನ ದೇಬೂರು ಬಳಿಯ ಕಬಿನಿ ನಾಲೆಯಿಂದ ಗುಂಡ್ಲುಪೇಟೆ ಪಟ್ಟಣಕ್ಕೆ ನೀರು ಹರಿದಿದೆ. ಯೋಜನೆಯನ್ನು ಹಂಗಳದವರೆಗೂ ವಿಸ್ತರಿಸಲಾಯಿತು. ಆದರೆ, ಇದರ ಕಾಮಗಾರಿ ಮುಗಿದಿದೆ. ಜನರಿಗೆ ಇದರ ಉಪಯೋಗ ಲಭ್ಯವಾಗಿಲ್ಲ. ಇದೀಗ ನೀರಿನ ಸಮಸ್ಯೆ ಅಧಿಕವಾಗಿರುವುದರಿಂದ ಇದನ್ನೇ ಬಂಡವಾಳವನ್ನಾಗಿಸಿಕೊಂಡು, ಪುರಸಭೆ ಜತೆ ಸೇರಿ ಕೆಲವರು ಕೃತಕ ನೀರಿನ ಅಭಾವ ಸೃಷ್ಟಿಸಿದ್ದಾರೆ. ಕಳೆದ 2-3 ವರ್ಷಗಳಿಂದ ಸಮಸ್ಯೆ ಉಲ್ಬಣವಾಗಿದ್ದರೂ ಇವರಿಗೆ ಅಂಕೆ ಹಾಕುವವರೇ ಇಲ್ಲವಾಗಿದೆ. ಅಧಿಕಾರಿಗಳು ಮತ್ತು ಪುರಸಭಾ ಸದಸ್ಯರನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ನೀರಿನ ಸಮಸ್ಯೆ ನಿಗಿಸಬೇಕಿದ್ದ ಶಾಸಕರು ಕೈಚೆಲ್ಲಿ ಕುಳಿತ್ತಿದ್ದಾರೆ. ಪ್ರತಿ ಪಕ್ಷಗಳು ಅಭಿವೃದ್ಧಿಗೆ ಅಡ್ಡಗಾಲು ಎನ್ನುತ್ತಿದ್ದಾರೆ. ಇನ್ನು ಪ್ರತಿಪಕ್ಷದವರು ಖಾಲಿ ಬಿಂದಿಗೆ ಹಿಡಿದು ಆಗಾಗ್ಗೆ ಪುರಸಭೆಗೆ ಮುತ್ತಿಗೆ ಹಾಕುತ್ತಿದ್ದಾರೆ. ಆದರೆ, ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ. ಜನಸಾಮಾನ್ಯರು 750 ಕೊಟ್ಟು ಹೊರಗಿನಿಂದ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ಕನ್ನಡನಾಡಿಗೆ ನೀರು ಕೊಟ್ಟು ಹೊರ ರಾಜ್ಯದವರಿಗೂ ಮಾದರಿಯಾದ ಅಬ್ದುಲ್ ನಜೀರ್ ಸಾಬ್ ಊರಲ್ಲೇ ಈ ಗತಿ ಬಂದಿರುವುದು ದುರಂತವೇ ಸರಿ.