ಚಾಮರಾಜನಗರ: ಕ್ರೀಡಾಕೂಟಗಳು ಜಾತ್ಯತೀತ ಹಾಗೂ ಧರ್ಮಾತೀತವಾಗಿ ಎಲ್ಲ ಒಂದೇ ಎಂಬ ಭಾವನೆ ಮೂಡಿಸಬೇಕು ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಆರ್. ಶಂಕರ್ ಹೇಳಿದರು. ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಚಾಮರಾಜನಗರ ಪಟ್ಟಣ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಹಾಗೂ ಹೆಚ್ಚು ಮಂದಿ ಭಾಗವಹಿಸುವ ದೇಶದಲ್ಲಿ ಆರೋಗ್ಯವಂತರ ಸಂಖ್ಯೆ ಹೆಚ್ಚಿರುತ್ತದೆ. ಬಹಳಷ್ಟು ದೇಶಗಳು ಕ್ರೀಡೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ. ನಮ್ಮ ದೇಶದಲ್ಲಿಯೂ ಸಹ ಕ್ರೀಡಾಕೂಟಕ್ಕೆ ಹೆಚ್ಚಿನ ಆದ್ಯತೆ ದೊರೆಯುತ್ತಿದೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಮ್ಮ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದರು. ಹಿರಿಯ ಶಿಕ್ಷಕ ರೇವಣ್ಣ ವಾಲಿಬಾಲ್ ಸರ್ವ್ ಮಾಡುವ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ಕ್ರೀಡಾಕೂಟದ ಸಂಚಾಲಕ ಚಿಕ್ಕಬಸವಯ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಸಹ ಕಾರ್ಯದರ್ಶಿ ಎನ್. ಜೋಸೆಫ್, ಉಪಾಧ್ಯಕ್ಷ ಜಯರಾಜ್, ನಾಗರತ್ನ, ಶಿವಮಲ್ಲಯ್ಯ, ಮಹದೇವು ಹಾಗೂ ವಿದ್ಯಾರ್ಥಿಗಳು ಮತ್ತು ದೈಹಿಕ ಶಿಕ್ಷಕರು ಭಾಗವಹಿಸಿದ್ದರು.
'ಶಿಕ್ಷಣದಿಂದ ದೇಶದ ಅಭಿವೃದ್ಧಿ'
ಚಾಮರಾಜನಗರ: ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರು ವಿದ್ಯಾವಂತರಾಗಿ ಸಹಕಾರಿಯಾಗಬೇಕು ಎಂದು ರೋಟರಿ ಅಧ್ಯಕ್ಷ ರೇಣುಕಾಪ್ರಸಾದ್ ತಿಳಿಸಿದರು. ನಗರ ಉಪ್ಪಾರ ಬಡಾವಣೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಸಾಕ್ಷರತಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೋಷಕರು ಹೆಣ್ಣು ಮಕ್ಕಳನ್ನು ಹೆಚ್ಚು ವಿದ್ಯಾವಂತರನ್ನಾಗಿ ಮಾಡಬೇಕು. ಮೌಢ್ಯತೆ, ಆಚಾರ, ವಿಚಾರ ಹಾಗು ಬಾಲ್ಯ ವಿವಾಹದಂತಹ ಅನಿಷ್ಟ ಪದ್ದತಿಯನ್ನು ತೊಡೆದು ಹಾಕಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದರು. ಪ್ರಸ್ತುತ ಇಂದಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳ ಹಾವಳಿಯಿಂದ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ, ಪೋಷಕರು ಮಕ್ಕಳನ್ನು ದುಡಿಮೆಗೆ ತಳ್ಳದೆ ಅವರಿಗೆ ಶಿಕ್ಷಣ ಕೊಡಿಸಿದಾಗ ಅದೇ ಅವರಿಗೆ ಮಾಡಿಕೊಡುವ ಆಸ್ತಿ ಎಂದು ತಿಳಿಸಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಸ್ವರ್ಧೆ ಏರ್ಪಡಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ, ರೋಟರಿ ಸಂಸ್ಥೆ ವತಿಯಿಂದ ನೋಟ್ಬುಕ್ ಮತ್ತು ಲೇಖನ ಸಾಮಗ್ರಿ ವಿತರಣೆ ಮಾಡಲಾಯಿತು. ಜಿ.ಆರ್.ಅಶ್ವಥ್ನಾರಾಯಣ್, ಶಿವಕುಮಾರರಾವ್, ಎಪಿಎಂಸಿ ಸದಸ್ಯ ಸುರೇಶ್, ಶಿಕ್ಷಕ ಮಹದೇವಸ್ವಾಮಿ, ವೆಂಕಟೇಶ್, ಮಹದೇವಸ್ವಾಮಿ, ದಾಕ್ಷಾಯಿಣಿ, ರೇವಣ್ಣ, ಇತರರು ಇದ್ದರು.
ವಿಶ್ವ ವೈದ್ಯರ ದಿನಾಚರಣೆ
ಕೊಳ್ಳೇಗಾಲ: ವೈದ್ಯರ ದಿನಾಚರಣೆ ಅಂಗವಾಗಿ ಹಿರಿಯ ವೈದ್ಯ ಡಾ.ಗೋಪಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ವೈದ್ಯರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಡಾ.ಶಿವರುದ್ರಸ್ವಾಮಿ, ವೈದ್ಯರು ರೋಗಿಗಳನ್ನು ಉತ್ತಮ ರೀತಿಯಲ್ಲಿ ಶುಶ್ರೂಸೆ ಮಾಡುವ ಮೂಲಕ ರೋಗಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಬೇಕು ಎಂದರು. ಬಾಚನಹಳ್ಳಿ ಸರ್ಕಾರಿ ಡಿಎಡ್ ತರಬೇತಿ ಕಾಲೇಜು ಪ್ರಾಂಶುಪಾಲ ಮಲ್ಲಿಕಾರ್ಜುನ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಡಾ.ಸಿ.ರಾಯ್ ಮಾರ್ಗದರ್ಶನದಲ್ಲಿ ಇಂದಿನ ವೈದ್ಯರು ನಡೆಯುವ ಮೂಲಕ ಆದರ್ಶ ಗುಣ ಬೆಳೆಸಿಕೊಳ್ಳಬೇಕಿದೆ ಎಂದರು. ಪ್ರಾಂಶುಪಾಲ ಮೂಕಳ್ಳಿ ಮಹದೇವಸ್ವಾಮಿ ಮತ್ತಿತರರು ಹಾಜರಿದ್ದರು.
ಕ್ರೀಡಾಕೂಟಕ್ಕೆ ಚಾಲನೆ
ಚಾಮರಾಜನಗರದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟಕ್ಕೆ ಹಿರಿಯ ಶಿಕ್ಷಕ ರೇವಣ್ಣ ಚಾಲನೆ ನೀಡಿದರು. ಪರಿವೀಕ್ಷಕ ಶಂಕರ್, ಕುಮಾರಸ್ವಾಮಿ, ಚಿಕ್ಕಬಸವಯ್ಯ, ಎನ್. ಜೋಸೆಫ್, ಜಯರಾಜ್ ಇತರರು ಇದ್ದಾರೆ.
ಪಠ್ಯ ಸಾಮಗ್ರಿ ವಿತರಣೆ
ಚಾಮರಾಜನಗರ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆ ವತಿಯಿಂದ ಅಧ್ಯಕ್ಷ ರೇಣುಕಾಪ್ರಸಾದ್ ಪಠ್ಯ ಸಾಮಗ್ರಿ ವಿತರಿಸಿದರು.
ಹುಲಗಿನಮುರುಡಿ ಜಾತ್ರೆ
ಗುಂಡ್ಲುಪೇಟೆ: ಶ್ರಾವಣ ಶನಿವಾರ ಅಂಗವಾಗಿ ತಾಲೂಕಿನ ಚಿಕ್ಕತಿರುಪತಿ ಎಂದೇ ಹೆಸರಾದ ಹುಲಗಿನಮುರುಡಿಯಲ್ಲಿ ಚಿಕ್ಕ ಜಾತ್ರೆ ನಡೆದರೆ ಗೋಪಾಲಸ್ವಾಮಿ ಬೆಟ್ಟ ಹಾಗು ತಾಲೂಕಿನ ಶನೇಶ್ವರಸ್ವಾಮಿ ದೇವಸ್ಥಾನಗಳಲ್ಲಿ ಭಕ್ತರ ದಂಡು ಸೇರಿತ್ತು.ಅಷಾಢಮಾಸ ಮುಗಿದ ನಂತರ ಶ್ರಾವಣ ಮಾಸ ಪ್ರಯುಕ್ತ ಹುಲಗಿನಮುರುಡಿ ಬೆಟ್ಟದಲ್ಲಿ ಚಿಕ್ಕ ಜಾತ್ರೆ ಜರುಗಿತು. ಸಾವಿರಾರು ಭಕ್ತರು ಆಗಮಿಸಿ ಬೆಟ್ಟದಲ್ಲಿನ ವೆಂಕಟರಮಣಸ್ವಾಮಿ ಮೂರ್ತಿಗೆ ಬೆಳ್ಳಿ ಒಡವೆಗಳ ಹಾಕಿ ಚಿಕ್ಕ ತೇರು ಎಳೆದರು.ಜಿಲ್ಲೆ ಹಾಗೂ ತಮಿಳುನಾಡಿನ ಭಾಗದ ಭಕ್ತರು ಚಿಕ್ಕಜಾತ್ರೆಯಲ್ಲಿ ಭಾಗವಹಿಸಿ ಭಕ್ತಿ ಭಾವ ಮೆರದರು. ಗೋಪಾಲಸ್ವಾಮಿ ಬೆಟ್ಟದಲ್ಲಿ ಬೆಳಗ್ಗೆಯಿಂದಲೇ ಜನರು ಆಗಮಿಸಿದರು. ಶ್ರಾವಣ ಮಾಸದ ಅಂಗವಾಗಿ ಪ್ರಧಾನ ಅರ್ಚಕ ಗೋಪಾಲಕೃಷ್ಣ ವಿಶೇಷ ಪೂಜೆ-ಪುನಸ್ಕಾರ ನಡೆಸಿದರು. ಗುಂಡ್ಲುಪೇಟೆ ಪಟ್ಟಣದ ಬಳಿಯಿರುವ ಕಬ್ಬೇಕಟ್ಟೆ ಬಳಿಯ ಶನೇಶ್ವರಸ್ವಾಮಿ, ಬೇಗೂರು ಬಳಿಯ ಹಾಲುಕಟ್ಟೆ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ಜನರ ದಂಡೇ ನೆರದಿತ್ತು. ತುಂತುರು ಮಳೆ ನಡುವೆಯೂ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು.
ವಾರ್ಡನ್ ಹುದ್ದೆ: ತಾತ್ಕಾಲಿಕ ನೇಮಕ
ಚಾಮರಾಜನಗರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ವಾರ್ಡನ್ ಹುದ್ದೆಗಳಿಗೆ ನಿವೃತ್ತ ಸರ್ಕಾರಿ ನೌಕರರು ಹಾಗೂ ಮೇಲ್ವಿಚಾರಕರಿಂದ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಸೇವೆ ಪಡೆಯಲು ಅರ್ಜಿ ಆಹ್ವಾನಿಸಿದೆ.63 ವರ್ಷದೊಳಗಿನ ಮತ್ತು ಉತ್ತಮ ಆರೋಗ್ಯವಂತ ನಿವೃತ್ತ ಮೇಲ್ವಿಚಾರಕರು, ಕಚೇರಿ ಅಧೀಕ್ಷಕರು ಹಾಗೂ ಬಿಎಡ್ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರು ಅರ್ಹರು. ಪಿಂಚಣಿ ಹೊರತುಪಡಿಸಿ ನಿವೃತ್ತಿ ಹೊಂದಿದ ಸಮಯದಲ್ಲಿ ಪಡೆದ ಅಂತಿಮ ವೇನತಕ್ಕೆ ಸಮನಾಗಿ ಗೌರವಧನ ನೀಡಲಾಗುವುದು. ಯಾವುದೇ ಇಲಾಖಾ ವಿಚಾರಣೆ, ಕ್ರಿಮಿನಲ್ ಮೊಕದ್ದಮೆ ಇಲ್ಲದವರು ಅರ್ಹರು. ಈ ಕುರಿತು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಂದ ಅಧಿಕೃತ ದಾಖಲಾತಿ ಸಲ್ಲಿಸಬೇಕು. ಸರ್ಕಾರಿ ಮೆಡಿಕಲ್ ಅಧಿಕಾರಿಗಳಿಂದ ಪಡೆದ ದೈಹಿಕ ಆರೋಗ್ಯ ದೃಢೀಕರಣ ಪತ್ರ, ನಿವೃತ್ತಿ ಸಮಯದಲ್ಲಿ ಪಡೆದ ವೇತನದ ವಿವರ ಹಾಗೂ ಮಾಹೆಯಾನ ಪಡೆಯುವ ಪಿಂಚಣಿ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.ಆಸಕ್ತರು ಅರ್ಜಿ ನಮೂನೆಯನ್ನು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಂದ ಖುದ್ದಾಗಿ ಪಡೆದು ಆಗಸ್ಟ್ 11ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಕಚೇರಿಗೆ ಸಲ್ಲಿಸಬೇಕು. ಮಾಹಿತಿಗೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕಚೇರಿ (ದೂ.08226-222855) ಸಂಪರ್ಕಿಸುವುದು.
ಮಿಲಿಟರಿ ಕಾಲೇಜು ಪ್ರವೇಶಕ್ಕೆ ಅರ್ಜಿ
ಚಾಮರಾಜನಗರ: ಡೆಹರಾಡೂನ್ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ ಜುಲೈ 2015ನೇ ಅಧಿವೇಶನಕ್ಕಾಗಿ 8ನೇ ತರಗತಿಗೆ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕರಿಗೆ ಅರ್ಹತಾ ಪ್ರವೇಶ ಪರೀಕ್ಷೆ ಬೆಂಗಳೂರಿನಲ್ಲಿ ಡಿಸೆಂಬರ್ 1 ಮತ್ತು 2 ರಂದು ನಡೆಯಲಿದೆ. 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ ದಿನಾಂಕ 01.07.2015 ರಂತೆ 1112 ವರ್ಷದಿಂದ 13 ವರ್ಷದೊಳಗಿರುವ (ದಿನಾಂಕ 02.07.2002 ರಿಂದ 01.01.2004ರೊಳಗೆ ಜನಿಸಿರುವ) ಬಾಲಕರು ಮಾತ್ರ ಅರ್ಹರು.
ರಿಜಿಸ್ಟರ್ಡ್ ಪಾರ್ಸಲ್ ಮೂಲಕ ಅರ್ಜಿ ನಮೂನೆ ಪಡೆಯಲು ಇಚ್ಛಿಸುವವರು ಬ್ಯಾಂಕ್ ಡ್ರಾಫ್ಟ್ನೊಂದಿಗೆ 11 ಇಂಚು ಉದ್ದ ಮತ್ತು 9 ಇಂಚು ಅಗಲದ ಸ್ವ-ವಿಳಾಸದ ಲಕೋಟೆಯ ಮೇಲೆ 40 ರು. ಮೌಲ್ಯದ ಅಂಚೆ ಚೀಟಿಗಳನ್ನು ಅಂಟಿಸಿ ಕಳುಹಿಸಬೇಕು. ಲಕೋಟೆಯ ಮೇಲೆ ಅಭ್ಯರ್ಥಿಯ ಪೂರ್ಣ ಅಂಚೆ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಭರ್ತಿ ಮಾಡಿದ ಅರ್ಜಿ ನಮೂನೆಯ ಎರಡು ಪ್ರತಿಗಳನ್ನು ಹಾಗೂ ಅದರ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಸೆಪ್ಟಂಬರ್ 30ಕೊಳಗೆ ಸಲ್ಲಿಸುವುದು. ಹೆಚ್ಚಿನ ವಿವರಗಳಿಗೆ ಬೆಂಗಳೂರಿನ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ (ದೂರವಾಣಿ ಸಂಖ್ಯೆ 080 -25589459)ನ್ನು ಸಂಪರ್ಕಿಸಲು ಕೋರಲಾಗಿದೆ.
ವಿದ್ಯಾರ್ಥಿ ವೇತನಕ್ಕೆ ಅರ್ಜಿ
ಚಾಮರಾಜನಗರ: ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಮೆಟ್ರಿಕ್ಪ್ರೂರ್ವ ವಿದ್ಯಾರ್ಥಿ ವೇತನಗಳ ಸೌಲಭ್ಯ ಪಡೆದುಕೊಳ್ಳಲು ತಾಲೂಕಿನ ಶಿಕ್ಷಣ ಸಂಸ್ಥೆಗಳಲ್ಲಿ 5ನೇ ತರಗತಿಯಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಪ್ರಸಕ್ತ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ. 5ನೇ ತರಗತಿಯಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವರ್ಗ-1, 2ಎ, 3ಎ,3ಬಿ ವಿದ್ಯಾರ್ಥಿಗಳಿಗೆ ಮಾತ್ರ ಮೆಟ್ರಿಕ್ಪೂರ್ವ ಹಾಗೂ ಕೇಂದ್ರ ಪುರಸ್ಕೃತ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ, ಐಟಿಐ, ಡಿಪ್ಲೋಮಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾತ್ರ ಶಿಷ್ಯ ವೇತನ ಹಾಗೂ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಮೆಟ್ರಿಕ್ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.ಅಗತ್ಯ ದಾಖಲಾತಿಗಳೊಂದಿಗೆ ಆಗಸ್ಟ್ 31ರೊಳಗೆ ಕಚೇರಿಗೆ ಸಲ್ಲಿಸಬೇಕು. ತಡವಾಗಿ ಬಂದ ಹಾಗೂ ಅಪೂರ್ಣ ಮಾಹಿತಿಯ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗೆ ನಗರದ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರಾವಣಮಾಸ ವಿಶೇಷ ಪೂಜೆ
ಯಳಂದೂರು: ಮೊದಲ ಶ್ರಾವಣ ಶನಿವಾರ ಅಂಗವಾಗಿ ಪಟ್ಟಣದ ಭೂ ಲಕ್ಷ್ಮಿವರಹಾಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವಮೂರ್ತಿ ಮೆರವಣಿಗೆ ಮಾಡಲಾಯಿತು.ಶ್ರಾವಣ ಮಾಸ ಪ್ರಾರಂಭವಾದ್ದರಿಂದ ಭೂ ಲಕ್ಷ್ಮಿವರಹಾಸ್ವಾಮಿಗೆ ಬೆಳಗ್ಗೆಯಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ದೇವರಿಗೆ ತುಳಸಿ ಮಾಲೆ ಹಾಗೂ ವಿವಿಧ ಪುಷ್ಪಗಳಿಂದ ಶೃಂಗರಿಸಿ ಮಂಗಳಾರತಿ ಮಾಡಲಾಯಿತು. ಭೂ ಲಕ್ಷ್ಮಿವರಹಾಸ್ವಾಮಿ, ಉತ್ಸವ ಮೂರ್ತಿಯನ್ನು ವಾದ್ಯ ಮೇಳ ಶಂಕು-ಜಾಗಟೆಗಳೂಂದಿಗೆ ಪಟ್ಟಣ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರು ನಾರಾಯಣ, ಶ್ರೀಹರಿ ಸ್ಮರಣೆ ಮಾಡಿದರು.
ಉದ್ಘಾಟನೆ
ಕೊಳ್ಳೇಗಾಲದಲ್ಲಿ ಸಿದ್ದಪ್ಪಾಜಿ ಸ್ಮರಣಾರ್ಥ ಫುಟ್ಬಾಲ್ ಪಂದ್ಯಾವಳಿಯನ್ನು ಕೊಳ್ಳೇಗಾಲ ಶಾಸಕ ಎಸ್.ಜಯಣ್ಣ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಮಹಾದೇವಿ, ಸದಸ್ಯ ರಮೇಶ್ ಮತ್ತಿತರರು ಹಾಜರಿದ್ದರು.
ಕಾನೂನು ಅರಿವು ಕಾರ್ಯಕ್ರಮ
ಗುಂಡ್ಲುಪೇಟೆ: ಮಕ್ಕಳ ದೌರ್ಜನ್ಯ ತಡೆಯುವ ಭಾದಿಕ ಮಕ್ಕಳಿಗೆ ನೆರವು ನೀಡುವ ಹೊಣೆಗಾರಿಕೆ ಶಿಕ್ಷಣ ಸಂಸ್ಥೆಗಿದೆ ಎಂದು ಜೆಎಂಎಫ್ಸಿ ನ್ಯಾಯಾಧೀಶ ಡಿ.ಕಮಲಾಕ್ಷ ಹೇಳಿದರು.ಪಟ್ಟಣದ ಮಾನಸ ವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಆಶ್ರಯದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ಅಧಿನಿಯಮ ಬಾಧಿತ ವ್ಯಕ್ತಿಯ ಸ್ನೇಹಿಯಾಗಿದೆ ಎಂದರು.ಬಾಧಿತ ಮಕ್ಕಳ ದೌರ್ಜನ್ಯ ತಡೆಯುವುದು ಶಿಕ್ಷಣ ಸಂಸ್ಥೆ ಮಾತ್ರವಲ್ಲದೆ ಶಿಕ್ಷಕ ವೃಂದ ಹಾಗು ಸಾರ್ವಜನಿಕರು ಇಂತಹ ಪ್ರಕರಣಗಳ ತಡೆಯುವ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.ಮಾನಸ ವಿದ್ಯಾಲಯದ ಅಧ್ಯಕ್ಷ ಗೋವಿಂದರಾಜು, ವಕೀಲರ ಸಂಘದ ಅಧ್ಯಕ್ಷ ಬಿ.ಶಿವಣ್ಣ, ಸಹಾಯಕ ಅಭಿಯೋಜಕ ಮಂಜುನಾಥ್, ವಕೀಲರಾದ ಮೂರ್ತಿ, ಶಾಂತಮಲ್ಲಪ್ಪ, ರಾಜಶೇಖರಮೂರ್ತಿ ಇದ್ದರು.
ಪ್ರತಿಭಾ ಪುರಸ್ಕಾರ
ಚಾಮರಾಜನಗರದಲ್ಲಿ ನಡೆದ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸರ್ಕಾರಿ ಶಾಲಾ ಮಕ್ಕಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಪ್ರತಿಭಾ ಪುರಸ್ಕಾರ ನೀಡಿದರು.
ಡೆಂಘೀ ವಿರೋಧಿ ಮಾಸಾಚರಣೆ
ಚಾಮರಾಜನಗರ: ಕಾಮಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ ಮತ್ತು ಸಿಂಗಾನಲ್ಲೂರು ಸರ್ಕಾರಿ ಪ್ರೌಢಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಜುಲೈ 30 ರಂದು ಶಾಲಾ ಆವರಣದಲ್ಲಿ ಡೆಂಘೀ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಮುಖ್ಯ ಭಾಷಣಕಾರರಾದ ಕೇಂದ್ರದ ವೈದ್ಯಾಧಿಕಾರಿ ಡಾ. ಮಧುಸೂದನ್ ಅವರು ಡೆಂಘೀ ಜ್ವರ ವೈರಾಣುವಿನಿಂದ ಬರುವ ರೋಗ. ಇದು ಈಡಿಸ್ ಜಾತಿಯ ಸೊಳ್ಳೆಗಳಿಂದ ಹರಡುತ್ತದೆ ಎಂದು ತಿಳಿಸಿದರು. ರೋಗ ನಿಯಂತ್ರಣ ಹಾಗೂ ರೋಗ ಹರಡದಂತೆ ವಾತಾವರಣ ಶುಚಿತ್ವ ಕಾಪಾಡುವ ಕುರಿತು ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಆರ್. ರಾಜಮ್ಮ, ಆರೋಗ್ಯ ಸಹಾಯಕರಾದ ವಿಜಯಕುಮಾರ್, ರೆಜೀನಾ, ಆಶಾಲತಮ, ಸಿಂಗಾನಲ್ಲೂರು ಗ್ರಾಪಂ ಸದಸ್ಯರು, ಮಲೇರಿಯಾ ಲಿಂಕ್ ವರ್ಕರ್ ಮೂರ್ತಿ, ಆಶಾ ಕಾರ್ಯಕರ್ತೆ ಲಕ್ಷ್ಮೀ, ಸುಂದ್ರಮ್ಮ, ಅಂಗನವಾಡಿ ಕಾರ್ಯಕರ್ತೆ ಜ್ಞಾನಜ್ಯೋತಿ, ಸಹ ಶಿಕ್ಷಕರಾದ ವಿಶ್ವನಾಥ್, ಭಾಗ್ಯ, ಸ್ಯಾಮುಯಲ್, ಪ್ರೇಮಕುಮಾರಿ, ಕೃಷ್ಣ, ಆಶಾ, ಮಾನಸ, ಕಾಲೇಜಿನ ಶಿವರಾಜಮ್ಮ, ಬಿಎಡ್ಪ್ರ್ಶಿಕ್ಷಣಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಸಮಾರಂಭಕ್ಕೆ ಮೊದಲು ಡೆಂಗ್ಯೂ ವಿರೋಧಿ ಆಚರಣೆ ಕುರಿತು ಜಾಥಾ ಏರ್ಪಡಿಸಲಾಗಿತ್ತು. ಎಸ್ಡಿಎಂಸಿ ಅಧ್ಯಕ್ಷ ಮಹದೇವಸ್ವಾಮಿ ಅವರು ಜಾಥಾಗೆ ಚಾಲನೆ ನೀಡಿದರು.
ಬೆಟ್ಟದ ತಪ್ಪಲಲ್ಲಿ ಚಿರತೆ ಸಾವು
ಚಾಮರಾಜನಗರ: ನಗರದ ಕರಿವರದರಾಜಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕಾದಾಟದಲ್ಲಿ ಚಿರತೆಯೊಂದು ಸಾವನಪ್ಪಿರುವುದು ಶನಿವಾರ ಪತ್ತೆಯಾಗಿದೆ. ಶನಿವಾರ ಬೆಳಗಿನ ವಾಯು ವಿಹಾರಕ್ಕೆ ತೆರಳಿದ್ದವರಿಗೆ ಚಿರತೆ ಸಾವನಪ್ಪಿರುವುದು ಪತ್ತೆಯಾಗಿದೆ. ನಂತರ ಅರಣ್ಯ ಇಲಾಖೆ ವಿಷಯ ತಿಳಿಸಿದ್ದಾರೆ. ಸುಮಾರು 5-6 ವರ್ಷದ ಚಿರತೆ ಸಾವನಪ್ಪಿದ್ದು, ಮೈಮೇಲೆ ಗಾಯಗಳಾಗಿವೆ. ಎರಡು ಚಿರತೆಗಳ ನಡುವೆ ಕಾದಾಟದಿಂದ ಸಾವನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಬಿಆರ್ಟಿ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ದಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡಸಿದರು. ನಂತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶ್ರಾವಣ ಶನಿವಾರ ಆಚರಣೆ: ಶ್ರಾವಣ ಮಾಸದ ಮೊದಲನೇ ಶನಿವಾರ ಅಂಗವಾಗಿ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ ಹೊರ ವಲಯದಲ್ಲಿರುವ ಹಾಲುಕಟ್ಟೆ ಶನೇಶ್ವರ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಸಾವಿರಾರು ಮಂದಿಗೆ ಅನ್ನ ಸಂತರ್ಪಣೆ ನಡೆಯಿತು. ಶನಿವಾರ ಪ್ರಯಕ್ತ ಬೆಳಗ್ಗೆ 7 ಗಂಟೆಗೆ ಶನೇಶ್ವರಸ್ವಾಮಿಗೆ ಹೋಮ, ಅಗ್ನಿಕುಂಡ, ಹವನಾದಿ ಪೂಜಾ ಕಾರ್ಯಕ್ರಮ ನಡೆಯಿತು. ಆರಾಧನಾ ಮಹೋತ್ಸವಕ್ಕೆ ಬಂದ ಸಾವಿರಾರು ಮಂದಿ ಭಕ್ತರು ಪ್ರಸಾದ ಸ್ವೀಕರಿಸಿದರು.
ಮೆರವಣಿಗೆ
ಮೊದಲ ಶ್ರಾವಣ ಶನಿವಾರ ಅಂಗವಾಗಿ ಯಳಂದೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭೂ ಲಕ್ಷ್ಮಿವರಹಾಸ್ವಾಮಿ ಉತ್ಸವಮೂರ್ತಿ ಮೆರವಣಿಗೆ ಮಾಡಲಾಯಿತು.
ಲೈಂಗಿಕ ಕಿರುಕುಳ:ಇಬ್ಬರ ಸೆರೆ
ಚಾಮರಾಜನಗರ: ತಾಲೂಕಿನ ಕುದೇರು ಶಾಲೆಯಿಂದ ತರಗತಿ ಮುಗಿಸಿಕೊಂಡು ಊರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಇಬ್ಬರು ಶಾಲಾ ಬಾಲಕಿಯರಿಗೆ ಯುವಕರಿಬ್ಬರು ಲೈಂಗಿಕ ಕಿರುಕುಳ ನೀಡಿರುವ ಘಟನೆ ಶುಕ್ರವಾರ ನಡೆದಿದೆ. ಕುದೇರಿನಿಂದ ಶಾಲೆ ಮುಗಿಸಿಕೊಂಡು ನಂಜನಗೂಡು ತಾಲೂಕಿನ ಚಿಕ್ಕಹೊಮ್ಮ ಮೋಳೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅದೇ ಗ್ರಾಮದ ಗಾರೆ ಕೆಲಸಗಾರ ಚಂದ್ರು ಮತ್ತು ಡೈವರ್ ಪ್ರತಾಪ್ ಎಂಬುವರು ಮಾರ್ಗ ಮಧ್ಯ ಲೈಂಗಿಕ ಕಿರುಕುಳನೀಡಿ, ಎಳೆದಾಡಿದ್ದಾರೆ. ನಂತರ ಬಾಲಕಿಯರು ತಪ್ಪಿಸಿಕೊಂಡು ಹೋಗಿ ಮನೆಯವರಿಗೆ ವಿಚಾರ ತಿಳಿಸಿದ್ದಾರೆ. ಪೋಷಕರು ಕುದೇರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಂದ್ರು ಮತ್ತು ಪ್ರತಾಪ್ ಎಂಬುವರ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆಒಪ್ಪಿಸಿದ್ದಾರೆ.
ಶಂಕುಸ್ಥಾಪನೆ
ಚಾಮರಾಜನಗರದಲ್ಲಿ ಜಿಪಂ ಸಂಪನ್ಮೂಲ ಕೇಂದ್ರ ಕಟ್ಟಡ ಶಂಕುಸ್ಥಾಪನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಹದೇವ ಪ್ರಸಾದ್ ನೆರವೇರಿಸಿದರು.
ನಗರಸಭೆ ಮಾಜಿ ಸದಸ್ಯೆ ನಿಧನ
ಕೊಳ್ಳೇಗಾಲ: ನಗರಸಭೆ ಮಾಜಿ ಸದಸ್ಯರಾದ ಶಂಕನಪುರ ಗ್ರಾಮದ ಚೌಡಮ್ಮ(53) ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಕಳೆದ 2ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶುಕ್ರವಾರ ರಾತ್ರಿ ನಿಧನರಾಗದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರ ಅಂತ್ಯಕ್ರಿಯೆ ಶಂಕನಪುರ ರುದ್ರಭೂಮಿಯಲ್ಲಿ ಶನಿವಾರ ಜರುಗಿತು.ನಗರಸಭೆ ಸದಸ್ಯ ಹಾಗೂ ಜೆಡಿಎಸ್ ಟೌನ್ ಅಧ್ಯಕ್ಷ ಪಿ.ಎಂ.ಕಷ್ಣಯ್ಯ, ನಗರಸಭೆ ಸದಸ್ಯೆ ನಾಗಸುಂದ್ರಮ್ಮ ಜಗದೀಶ್, ಬಸಂತ್ ಸೇರಿದಂತೆ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು. ಸಭೆ ಮುಂದೂಡಿಕೆ: ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅಧ್ಯಕ್ಷತೆಯಲ್ಲಿ ಚಾಮರಾಜನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ನೂತನ ಸಭಾಂಗಣದಲ್ಲಿ ನಿಗಧಿಪಡಿಸಲಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮಗಳು ಸೇರಿದಂತೆ) ತ್ರೈಮಾಸಿಕ ಕೆಡಿಪಿ ಸಭೆಯನ್ನು ಕಾರಣಾಂತರಗಳಿಂದ ಆಗಸ್ಟ್ 6ರಂದು ಬೆಳಗ್ಗೆ 10.30 ಗಂಟೆಗೆ ಮುಂದೂಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.