-ಧರ್ಮಾಪುರ ನಾರಾಯಣ್
ಹುಣಸೂರು: ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಕ್ಯಾಪ್ಟನ್ ಅರ್ಜುನ ಸೇರಿದಂತೆ ದಸರೆಯಲ್ಲಿ ಭಾಗವಹಿಸುವ ಎಲ್ಲ ಆನೆಗಳಿಗೆ ಮತ್ತಿಗೋಡು ವಲಯದ ಆನೆ ಕ್ಯಾಂಪ್ನಲ್ಲಿ ನಿತ್ಯವೂ ಸ್ನಾನ, ಪೌಷ್ಟಿಕ ಆಹಾರ ಸಮೇತ ವಿಶೇಷ ಆರೈಕೆ ನೀಡಲಾಗುತ್ತಿದೆ.
ಕಳೆದ ಬಾರಿ ಬಳ್ಳೆಯ ಕ್ಯಾಂಪ್ನಲ್ಲಿದ್ದ ಆನೆಗಳನ್ನು ಈ ಬಾರಿ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರಿಸಿ ಆರೈಕೆ ಮಾಡಲಾಗುತ್ತಿದೆ. ಸ್ನಾನದ ಬಳಿಕ ಶಿಬಿರಕ್ಕೆ ಕರೆತಂದು ಸೊಳ್ಳೆ, ನೊಣ ಮೈಮೇಲೆ ಕೂರದಂತೆ ಬೇವಿನ ಎಣ್ಣೆ, ಹರಳೆಣ್ಣೆ, ಹಚ್ಚಿ ಮಾಲಿಷ್ ಮಾಡಲಾಗುತ್ತಿದೆ. ನಂತರವಷ್ಟೆ ವಿಶೇಷ ಆಹಾರ ನೀಡಲಾಗುತ್ತಿದೆ. ಗಜರಾಜ ಅರ್ಜುನ ಸತತ ಮೂರನೇ ಬಾರಿಗೆ ಅಂಬಾರಿ ಹೊರಲು ತಯಾರಾಗಿದ್ದಾನೆ. ಈ ಹಿಂದೆ ಸತತ 14 ಬಾರಿ ತಂಡದ ನಾಯಕತ್ವ ವಹಿಸಿದ್ದ ಬಲರಾಮನು ಈ ಬಾರಿಯೂ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾನೆ.
ರಾಜ್ಯದಲ್ಲಿ ಮಾದರಿ ಕ್ಯಾಂಪ್: ರಾಜ್ಯದ ಮತ್ತಿಗೋಡು, ಬಳ್ಳೆ, ದುಬಾರೆ, ಕೆ. ಗುಡಿ, ಪಿರಿಯಾಪಟಣ್ಣದ ದೊಡ್ಡ ಹರವೆ, ಹಾಸನ, ಮಂಗಳೂರಿನ ಪಿಲಿಕುಳ ಆನೆ ಶಿಬಿರದಲ್ಲಿ ಒಟ್ಟು 73 ಸಾಕಾನೆಗಳಿವೆ. ದಸರಾದಲ್ಲಿ ಭಾಗವಹಿಸುವ ಮತ್ತಿಗೋಡು ವಲಯದ ಆನೆ ಶಿಬಿರದ ಆನೆಗಳು ಹಾಸನ, ಬೆಂಗಳೂರು, ಶಿವಮೊಗ್ಗ, ಉತ್ತರ ಪ್ರದೇಶದ ದಾಂಡೇಲಿ ಹಾಗೂ ಹುಲಿ ಕಾರ್ಯಾಚಾರಣೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿವೆ. ಈ ಶಿಬಿರದ ಆನೆಗಳನ್ನು ಕೇರಳ, ಗೋವಾ, ಉತ್ತರಖಂಡ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪುಂಡಾನೆಗಳನ್ನು ಪಳಗಿಸಿವೆ.
ಕಾಡಾನೆಗಳನ್ನು ಶಿಬಿರದಲ್ಲಿ ಪಳಗಿಸುವ ಮೂಲಕ ಮಾವುತ ಮತ್ತು ಕಾವಾಡಿಗಳ ಶ್ರಮ ವಹಿಸುತ್ತಾರೆ. ರಾಜ್ಯದಲ್ಲೆ ಮಾದರಿ ಆನೆ ಶಿಬಿರ ಎಂಬ ಕೀರ್ತಿಗೆ ಮತ್ತಿಗೋಡು ವಲಯ ಪಾತ್ರವಾಗಿದೆ. ಈ ರೀತಿಯ ಕಸರತ್ತು ಮಾಡಿರುವುದರಿಂದ ದಸರಾದಲ್ಲಿ ಭಾಗವಹಿಸುವುದು ಬಹಳ ಸುಲಭ ಎಂದು ನಾಗರಹೊಳೆ ವನ್ಯಜೀವಿ ವಿಭಾಗದ ಪಶು ವೈದ್ಯ ಡಾ.ಉಮಾಶಂಕರ್ ಮಾಹಿತಿ ನೀಡಿದರು.
ದಸರೆ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವಿವಿಧ ಶಿಬಿರಗಳಲ್ಲಿ ವಿಶೇಷ ಆರೈಕೆ ನೀಡಲಾಗುತ್ತದೆ. ಮೊದಲ ಹಂತದಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮತ್ತಿಗೋಡು ಆನೆ ಶಿಬಿರದ ಅರ್ಜುನ (56)- ಮಾವುತ ದೊಡ್ಡಮಾಸ್ತಿ, ಕಾವಾಡಿ ಸಣ್ಣಪ್ಪ, ಬಲರಾಮ (58)-, ಮಾವುತ ತಿಮ್ಮ, ಕಾವಾಡಿ ಗಣೇಶ, ಅಭಿಮನ್ಯು(51)- ಮಾವುತ ವಸಂತ, ಕಾವಾಡಿ ರಾಜು, ಮೇರಿ (55) - ಮಾವುತ ಮೋಟಪ್ಪ, ಕಾವಾಡಿ ಚಿನ್ನಾಳು, ಸರಳ (55)- ಮಾವುತ ಮಂಜು, ಕಾವಾಡಿ ಸುಜಾನ್, ಚಾಮರಾಜ ನಗರದ ಕೆ.ಗುಡಿ ಶಿಬಿರದ ಗಜೇಂದ್ರ (54)- ಮಾವುತ ರಾಮ, ಕಾವಾಡಿ ಗಣಪತಿ ತೆರಳುವರು.
2ನೇ ಹಂತದಲ್ಲಿ ಕೆ. ಗುಡಿಯ ಶ್ರೀರಾಮ (56)- ಮಾವುತ ಅಣ್ಣು, ಕಾವಾಡಿ ಶಂಕರ, ಮಂಗಳೂರಿನ ಪಿಲಿಕುಳ ಶಿಬಿರದ ದುರ್ಗಾ ಪರಮೇಶ್ವರಿ (38)- ಮಾವುತ ಶಿವಪ್ಪ, ಕಾವಾಡಿ ಪ್ರವೀಣ, ಕೊಡಗಿನ ದುಬಾರೆಯ ವಿಕ್ರಂ (46)- ಮಾವುತ ರಾಜಮಣಿ, ಕಾವಡಿ ರಾಜು, ಹರ್ಷ (50)- ಮಾವುತ ಚಿಕ್ಕ, ಕಾವಾಡಿ ಅಶೋಕ, ಪ್ರಶಾಂತ್ (37)- ಮಾವುತ ಚಿನ್ನಪ್ಪ, ಕಾವಾಡಿ ರಾಜು, ಗೋಪಿ (26)- ಮಾವುತ ಶರೀ, ಗೋಪಾಲಸ್ವಾಮಿ (27)- ಮಾವುತ ಗೋಪಾಲ, ಕಾವಾಡಿ ದಾಸಪ್ಪ, ವರಲಕ್ಷ್ಮಿ(60)- ಮಾವುತ ಗುಂಡ, ಕಾವಡಿ ರಾಜು.
ಅರ್ಜುನನ ಜೊತೆಗೆ ಅಂಬಾರಿ ಹೊರಲು ಬಲರಾಮ ಮತ್ತು ಗಜೇಂದ್ರನನ್ನು ಸಹ ತಾಲೀಮು ನೀಡಲಾಗುತ್ತಿದೆ. ಆ.14ಕ್ಕೆ ಮೊದಲ ಹಂತದ ಗಜಪಯಣಕ್ಕೆ ವೀರನಹೊಸಳ್ಳಿ ಬಳಿ ಚಾಲನೆ ದೊರೆಯಲಿದೆ ಎಂದು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ನಿರ್ದೇಶಕ ಗೋಕುಲ್ ತಿಳಿಸಿದ್ದಾರೆ.
ಬೊಂಬಾಟ್ ಮೆನು
ಶಿಬಿರದಲ್ಲಿ ದಸರಾ ಗಜಪಡೆ ಸೇರಿದಂತೆ, ಗರ್ಭಿಣಿ, ಬಾಣಂತಿ, ವೃದ್ಧ ಆನೆಗಳಿಗೆ ನಿತ್ಯ ನೀಡುವ ರಾಗಿಮುದ್ದೆಯೊಂದಿಗೆ ಮೆಕ್ಕೆಜೋಳ, ಗೋದಿ ಹುಡಿ, ಸೋಯಾ, ಅವರೆ ಹಿಂಡಿ, ಹೆಸರು ಕಾಳು, ಕುಸಲಕ್ಕಿ, ಉದ್ದಿನಕಾಳನ್ನು ಬೇಯಿಸಿ ಉಪ್ಪು ಮಿಶ್ರಣಮಾಡಿ ನಿತ್ಯ ಎರಡು ಬಾರಿ ವಿಶೇಷ ಆಹಾರ ನೀಡುವ ಜೊತೆಗೆ ಹುಲ್ಲಿನಲ್ಲಿ ಬತ್ತ ಹಾಕಿ ಕುಸುರೆ ಕಟ್ಟಿ ನೀಡಲಾಗುತ್ತದೆ. ಮೈಸೂರಿಗೆ ಬಂದ ಬಳಿಕ ಆನೆಗಳಿಗೆ ಸ್ನಾನ ಮಾಡಿಸಲು ಅರಮನೆಯ ಒಳಾಂಗಣದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ನಿತ್ಯ ಆನೆಗಳ ಆರೋಗ್ಯ ತಪಾಸಣೆ ನಡೆಯುತ್ತದೆ ಎಂದು ಡಾ.ಉಮಾಶಂಕರ್ ತಿಳಿಸಿದರು.