ಹನೂರು: ಲೈಂಗಿಕ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬರು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಕೊಳ್ಳೇಗಾಲ ತಾಲೂಕಿನ ಸುಂಡ್ರಳ್ಳಿಯಲ್ಲಿ ನಡೆದಿದೆ.
ಚೆನ್ನಾಲಿಂಗನಹಳ್ಳಿಯ ವೆಂಕಟಪ್ಪನ ಪುತ್ರಿ ಮೀನಾಕ್ಷಿ(35) ಎಂಬಾಕೆಯನ್ನು 15 ವರ್ಷದ ಹಿಂದೆ ಸುಂಡ್ರಳ್ಳಿ ಗ್ರಾಮದ ಹನುಮೇಗೌಡನ ಜೊತೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಪುತ್ರಿಯರಿದ್ದು, ಸುಂಡ್ರಳ್ಳಿ ಗ್ರಾಮದ ನಾಗೇಂದ್ರ ಎಂಬುವರ ಜಮೀನನ್ನು ಮೀನಾಕ್ಷಿ ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದರು.
ಕೆಲ ದಿನಗಳ ಹಿಂದೆ ಪಕ್ಕದ ಜಮೀನಿನ ಲಿಂಗೇಗೌಡರ ಮಗ ವೆಂಕಟಾಚಲ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದಾಗ ಹನುಮೇಗೌಡನ ಮೇಲೆ ವೆಂಕಟಾಚಲ ಹಲ್ಲೆ ಮಾಡಿದ್ದು, ಇದರಿಂದ ಮನನೊಂದು ಆಕೆ ತನ್ನ ಸಹೋದರ ದಾಸಪ್ಪನ ಮೊಬೈಲ್ಗೆ ಕರೆ ಮಾಡಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಮಕ್ಕಳಾದ ವೆಂಕಟರಾಜಮ್ಮ ಮತ್ತು ಪ್ರೀತಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ದಾಸಪ್ಪ ಹನೂರು ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತಳ ಶವವನ್ನು ಹನೂರಿನ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿತ್ತು. ಸ್ಥಳಕ್ಕೆ ಹನೂರು ಶಾಸಕ ನರೇಂದ್ರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.