ಚಾಮರಾಜನಗರ: ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಜಿಲ್ಲಾಡಳಿತ ಭವನದ ಗೇಟ್ ಎದುರು ತಮಟೆ ಚಳವಳಿ ನಡೆಸಿದರು.ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು, ಜಿಲ್ಲಾಡಳಿತ ಭವನದ ಗೇಟ್ ಮುಂಭಾಗಕ್ಕೆ ತೆರಳಿ ಪ್ರತಿಭಟನೆ ನಡೆಸಿ, ಎಂಇಎಸ್ ಪುಂಡಾಟಿಕೆಯಿಂದಾಗಿ ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಕದಡುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ವೇದಿಕೆ ಜಿಲ್ಲಾಧ್ಯಕ್ಷ ಚಾ.ಗು.ನಾಗರಾಜು ಮಾತನಾಡಿ, ಮರಾಠಿಗರು ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ಸ್ಥಾಪಿಸಿಕೊಂಡು ಅಪರಾಧ ಕೃತ್ಯಗಳನ್ನು ಎಸಗುತ್ತಿರುವುದಲ್ಲದೆ, ಕನ್ನಡಿಗರ ಶಾಂತಿ ಕದಡಿ ಸಂಘದ ನಿಯಮಕ್ಕೆ ಉಲ್ಲಂಘನೆಯಾಗುವಂತಹ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಎಂಇಎಸ್ ಸಂಘಟನೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ಸೇನಾ ಪಡೆ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಕನ್ನಡ ಸಂಘಟನೆ ಮುಖಂಡರಾದ ಚಾ.ಸಿ.ಸೋಮನಾಯಕ, ಹ.ವಿ. ನಟರಾಜು, ಸಿ.ಎ.ಅರುಣ್ಕುಮಾರ್ಗೌಡ, ರಾಮಸಮುದ್ರ ಶಿವಣ್ಣ, ಸಿ.ಸಿ ಪ್ರಕಾಶ್, ರಾಜಶೇಖರ್, ಶಂಕರ್, ರಮೇಶ್, ಟ್ರೈಲರ್ ನಟರಾಜು, ವಸುಧಾ ಸತೀಶ್, ಹೆಬ್ಬಸೂರು ನಂಜುಂಡಯ್ಯ, ಗಣೇಶ್, ಶಿವಕುಮಾರ್ಗೌಡ, ಸತೀಶ್ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಆರು ಮರಳು ಗಾಡಿ ವಶ
ಯಳಂದೂರು: ಸುವರ್ಣಾವತಿ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 6 ಎತ್ತಿನ ಗಾಡಿಗಳನ್ನು ತಹಸೀಲ್ದಾರ್ ಕೆ. ಸಿದ್ದು ನೇತೃತ್ವದ ತಂಡ ವಶಪಡಿಸಿಕೊಂಡಿದ್ದು, ಮರಳು ಅಕ್ರಮ ಸಾಗಣೆ ಮಾಡದಂತೆ ಎತ್ತಿನ ಗಾಡಿ ಮಾಲೀಕರಿಗೆ ತಾಕೀತು ಮಾಡಿದೆ. ತಾಲೂಕಿನ ಮಾಂಬಳ್ಳಿ ಗ್ರಾಮದ ಬಳಿ ಹಾದು ಹೋಗಿರುವ ಸುವರ್ಣಾವತಿ ನದಿಯಲ್ಲಿ ಅಕ್ರಮವಾಗಿ ಮರಳು ತುಂಬಿ ಎತ್ತಿನ ಗಾಡಿಯಲ್ಲಿ ಸಾಗಣೆ ಮಾಡಿ ಮಾರಾಟ ಮಾಡುವ ಖಚಿತ ಮಾಹಿತಿಯನ್ನಾಧರಿಸಿ ದಾಳಿ ಮಾಡಿ, ಗ್ರಾಮಸ್ಥರ ಸಹಕಾರದಿಂದ ಮರಳು ತುಂಬಿದ ಗಾಡಿಗಳನ್ನು ವಶಪಡಿಸಿಕೊಂಡು ಮರಳನ್ನು ಸ್ಥಳದಲ್ಲೇ ಹರಾಜು ಮಾಡಿ ಬಂದ ಹಣವನ್ನು ಸರ್ಕಾರಕ್ಕೆ ಕಟ್ಟಿದ್ದಾರೆ. ತಂಡದಲ್ಲಿ ಆರ್ಐ ನಂಜುಂಡಸ್ವಾಮಿ, ಗ್ರಾಮಲೆಕ್ಕಿಗ ಶೇಷಣ್ಣ, ಸತೀಶ್, ಸಿಬ್ಬಂದಿ ವರ್ಗ ಇದ್ದರು.