ಗುಂಡ್ಲುಪೇಟೆ: ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಗೃಹಿಣಿಯೊಬ್ಬರು ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಗ್ರಾಮದ ಶಿವನಾಗಶಾಸ್ತ್ರಿ ಎಂಬುವರ ಪತ್ನಿ ಪೂರ್ಣಿಮಾ (23) ಬೇಗೂರಿನ ಹೊಸ ಬಡಾವಣೆಯಲ್ಲಿದ್ದ ಮನೆಯಲ್ಲಿ ನೇಣು ಬಿಗಿದುಕೊಂಡ ಸಾವನ್ನಪ್ಪಿದ ಗೃಹಿಣಿ. ಈ ಸಂಬಂಧ ಗಂಡ ಶಿವನಾಗಶಾಸ್ತ್ರಿ ಹಾಗು ಪೂರ್ಣಿಮಾ ಚಿಕ್ಕಮ್ಮ ತೊಂಡವಾಡಿ ಗ್ರಾಮದ ಮಹದೇವಮ್ಮ ಅವರನ್ನು ಬೇಗೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗುಂಡ್ಲುಪೇಟೆ ಜೆಎಂಎಫ್ಸಿ ನ್ಯಾಯಾಲಯಕ್ಕೆ ಬೇಗೂರು ಠಾಣೆ ಪಿಎಸ್ಐ ಸಂದೀಪಕುಮಾರ್ ಹಾಜರುಪಡಿಸಿದ್ದು, ಆರೋಪಗಳನ್ನು 25 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಏನಿದು ಘಟನೆ?: ಶಿವನಾಗಶಾಸ್ತ್ರಿ ಹಾಗು ಪೂರ್ಣಿಮಾ ನಡುವೆ ಸಂಬಂಧ ಉತ್ತಮವಾಗಿರಲಿಲ್ಲ ಎನ್ನಲಾಗಿದ್ದು, ಮಂಗಳವಾರ ಬೆಳಗ್ಗೆ ಗಂಡ ಹೆಂಡಿರ ನಡುವೆ ಗಲಾಟೆ ನಡೆದಿತ್ತು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಿವನಾಗಶಾಸ್ತ್ರಿ ಮೈಸೂರಿಗೆ ಬೆಳಗ್ಗೆ ಹೊರಟಿದ್ದ. ಪೂರ್ಣಿಮಾ ಸಂಜೆಯ ತನಕ ಮೊಬೈಲ್ ಕರೆ ಸ್ವೀಕರಿಸದ ಹಿನ್ನಲೆಯಲ್ಲಿ ಅನುಮಾನಗೊಂಡ ಪೂರ್ಣಿಮಾಳ ತಂದೆ-ತಾಯಿ ಬೇಗೂರು ಗ್ರಾಮದ ಮನೆಗೆ ಬಂದಾಗ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಪೂರ್ಣಿಮಾ ತಂದೆ ರಾಜಣ್ಣನ ಬೇಗೂರು ಠಾಣೆಗೆ ದೂರು ನೀಡಿ ನನ್ನ ಮಗಳ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ತಿಳಿಸಿದ್ದಾರೆ. ಬೇಗೂರು ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ಬಗ್ಗೆ ಪ್ರಕರಣ ದಾಖಲಾಗಿದೆ.
ನೇಣು ಬಿಗಿದುಕೊಂಡಿರುವ ಮನೆಗೆ ಡಿವೈಎಸ್ಪಿ ಮಹಾಂತೇಶ ಮುಪ್ಪಿನಮಠ, ವೃತ್ತ ನಿರೀಕ್ಷಕ ಪ್ರಭಾಕರ್ ಸಿಂಧ್ಯಾ, ಬೇಗೂರು ಠಾಣೆಯ ಪಿಎಸ್ಐ ಸಂದೀಪಕುಮಾರ್ ಭೇಟಿ ನೀಡಿದ್ದರು. ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆ ನಡೆಸಲಾದ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು.