ಚಾಮರಾಜನಗರ: ಚಿಕ್ಕಮಕ್ಕಳಲ್ಲಿ ಅತಿಸಾರ ಭೇದಿ ಕಾಣಿಸಿಕೊಂಡಾಗ ತಾತ್ಸಾರ ಮಾಡದೇ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಿ ಜಿಪಂ ಅಧ್ಯಕ್ಷ ನಾಗೇಂದ್ರ ತಿಳಿಸಿದರು.
ನಗರದ ಜಿಲ್ಲಾ ಅಸ್ಪತ್ರೆಯ ಅವರಣದಲ್ಲಿ ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಹಯೋಗದಲ್ಲಿ ಆ. 8 ರವರೆಗೆ ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ 2014 ಕಾರ್ಯಕ್ರಮವನ್ನು ಮಕ್ಕಳಿಗೆ ಒಆರ್ಎಸ್ ಪ್ಯಾಕೆಟ್ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಅತಿಸಾರ ಭೇದಿಯಿಂದ ಸಾವನ್ನಪ್ಪುತ್ತಿರುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಲು 10 ದಿನಗಳ ಕಾಲ ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಲಾಗುತ್ತದೆ ಎಂದರು.
ಆರ್ಸಿಎಚ್ ಅಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಮಾತನಾಡಿ, ರಾಜ್ಯಾದ್ಯಂತ ಆರೋಗ್ಯ ಇಲಾಖೆಯಿಂದ ಅಭಿಯಾನ ಹಮ್ಮಿಕೊಂಡಿದ್ದು, ದೇಶದಲ್ಲಿ ಶೇ. 20 ರಷ್ಟು ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಇದನ್ನು ತಡೆಯಲು ಜಾಗೃತಿ ಪಾಕ್ಷಿಕ ಕಾರ್ಯಕ್ರಮವನ್ನು 10 ದಿನಗಳ ಕಾಲ ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುತ್ತದೆ ಎಂದರು.
ನಗರಸಭಾ ಅಧ್ಯಕ್ಷ ಎಸ್. ನಂಜಂಡಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ವ್ಯೆದ್ಯಾಧಿಕಾರಿ ಡಾ. ಮಲ್ಲಿಕಾ, ಮಕ್ಕಳ ತಜ್ಞ ಡಾ. ಬಸವರಾಜ ಅಟ್ಲಾಪುರಿ, ಡಾ. ಸತ್ಯಪ್ರಕಾಶ್ ಇದ್ದರು.