ಚಾಮರಾಜನಗರ: ನೌಕರ ಸಂಘಗಳು ಸಮಾಜ ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ನಗರದ ವಿರಕ್ತ ಮಠದ ಚನ್ನಬಸವಸ್ವಾಮೀಜಿ ತಿಳಿಸಿದರು.
ನಗರದ ವಿರಕ್ತ ಮಠದ ಆವರಣದಲ್ಲಿ ಏರ್ಪಡಿಸಿದ್ದ ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘ, ಬಸವೇಶ್ವರ ಪತ್ತಿನ ಸಹಕಾರ ಸಂಘ ಹಾಗೂ ಸಂಗಮ ಗೃಹ ನಿರ್ಮಾಣ ಸಹಕಾರ ಸಂಘಗಳ ವಾರ್ಷಿಕ ಮಹಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ನೌಕರನೂ ಸೇವಾ ಮನೋಭಾವನೆ ಬೆಳೆಸಿಕೊಂಡು ಕರ್ತವ್ಯ ನಿರ್ವಹಿಸಿದಾಗ ಮಾತ್ರ ತಮ್ಮ ಜೀವನ ಸಾರ್ಥಕಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಆರ್.ಎಂ. ಸ್ವಾಮಿ ಮಾತನಾಡಿ, ವೀರಶೈವ ನೌಕರರು ಸಂಘದಲ್ಲಿ ಹೆಚ್ಚು ಸದಸ್ಯರಾಗುವ ಮೂಲಕ ಸಂಘದಲ್ಲಿ ಸಿಗುವ ಸೌಲಭ್ಯಗಳನ್ನು ಪಡೆದು ತಾವು ಅಭಿವೃದ್ದಿಯಾಗುವ ಮೂಲಕ ಸಮಾಜದ ಅಭಿವೃದ್ದಿಗೂ ಸಹಕಾರ ನೀಡಬೇಕೆಂದು ಹೇಳಿದರು.
ವೀರಶೈವ ಸಂಘ ಸಂಸ್ಥೆಗಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು, ಸಹಕಾರ ಸಂಘಗಳಲ್ಲಿ ಬರುವ ಆದಾಯದ ಸ್ವಲ್ಪ ಭಾಗವನ್ನು ಸಮಾಜದ ಸೇವಾ ಕಾರ್ಯಗಳಿಗೆ ಬಳಸಿ, ದೇಶದ ಅಭಿವೃದ್ದಿಗೆ ಶ್ರಮಿಸಬೇಕು, ಸಂಘಗಳು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಿದಾಗ ಸಹಕಾರ ಸಂಘಗಳು ಯಶ್ವಸಿಯಾಗಿ ನಡೆಯಲು ಸಾಧ್ಯ ಎಂದರು.
ಇದೇ ಸಂಧರ್ಭದಲ್ಲಿ ನಿವೃತ್ತ ನೌಕರರನ್ನು ಸನ್ಮಾನಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು, ಸಭೆಯಲ್ಲಿ ಉಪಾಧ್ಯಕ್ಷ ಸಿದ್ದಮಲ್ಲಪ್ಪ, ಶಿವಕುಮಾರಸ್ವಾಮಿ, ನಾಗಮಲ್ಲಪ್ಪ, ದುಂಡುಮಾದಪ್ಪ, ಕುಮಾರ, ಜಿಲ್ಲಾ ಕೆಪಿಟಿಸಿಎಲ್ ವೀರಶೈವ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಪರಮೇಶ್ವರಪ್ಪ ಸೇರಿದಂತ ಸಂಘದ ಪದಾಧಿಕಾರಿಗಳು ಇದ್ದರು.