ಕೊಳ್ಳೇಗಾಲ: ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರವೆಸಗಿದ ಆರೋಪಿಯೊಬ್ಬನನ್ನು ಹನೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತನನ್ನು ವಿನೋದರಾಜು ಎಂದು ಗುರುತಿಸಲಾಗಿದ್ದು, ಈತ ಹನೂರಿನಲ್ಲಿ ವ್ಯಾಸಂಗ ಮಾಡಲು ಸಂಬಂಧಿಕರ ಮನೆಗೆ ಬಂದಿದ್ದ 15ವರ್ಷದ ಬಾಲಕಿಯನ್ನು ವಿನೋದರಾಜು ಪ್ರೀತಿಯ ನಾಟಕವಾಡಿ ನಂಬಿಸಿ ಜು.24ರಂದು ಅಪಹರಿಸಿದ್ದು, ಈ ಸಂಬಂಧ ಬಾಲಕಿಯ ಪೋಷಕರು ಜು.25ರಂದು ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಹನೂರು ಪೊಲೀಸರು ಜು.26ರಂದು ಬಾಲಕಿಯನ್ನು ಪತ್ತೆ ಹಚ್ಚಿ ರಕ್ಷಿಸಿದ್ದರು. ಆದರೆ, ಅಪಹರಿಸಿ ಪ್ರೀತಿಯ ನಾಟಕವಾಡಿದ್ದ ಆರೋಪಿ ಬಾಲಕಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಎಂಬುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಆರೋಪಿ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದರು. ಗುರುವಾರ ಬೆಳಗ್ಗೆ ಕೊಳ್ಳೇಗಾಲ ಬಸ್ನಿಲ್ದಾಣದಲ್ಲಿ ಹನೂರು ಪೊಲೀಸರು ಅತ್ಯಾಚಾರಿ ಆರೋಪಿಯನ್ನು ಬಂಧಿಸಿದ್ದಾರೆ. ನಂತರ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಕಿರಣಕುಮಾರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.