ಮೂಡಿಗೆರೆ: ಕೂಲಿ ಕಾರ್ಮಿಕರು ತಮ್ಮ ಬದುಕು ಕಟ್ಟಿಕೊಳ್ಳಲು ಭಾರತೀಯ ಕಮ್ಯುನಿಸ್ಟ್ ಪಕ್ಷ ಕೈಜೋಡಿಸುತ್ತದೆ ಎಂದು ಸಿಪಿಐ ತಾಲೂಕು ಕಾರ್ಯದರ್ಶಿ ಗೋಪಾಲಶೆಟ್ಟಿ ಹೇಳಿದರು.
ಕಳಸದ ಬೀದಿ ಮನೆ ಸಮೀಪ ಸರ್ವೇ ನಂ 641 ರಲ್ಲಿ ಸಂಗಾತಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಸಂಗಾತಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.
ಕಳೆದ ಜನವರಿ 26ರಂದು ಸರ್ವೇ ನಂ 641ರಲ್ಲಿ ಖಾಲಿ ಇದ್ದ ಕಂದಾಯ ಭೂಮಿಗೆ ಅತಿಕ್ರಮ ಪ್ರವೇಶ ಮಾಡಿದ ನಿವೇಶನ ರಹಿತರು ಸುಮಾರು 33 ಗುಡಿಸಲು ಕಟ್ಟಿಕೊಂಡಿದ್ದರು.ಇವರಿಗೆ ಬೆನ್ನೆಲುಬಾಗಿ ಸಿಪಿಐ ನಿಂತಿತ್ತು. ಇವತ್ತು ಸಂಗಾತಿ ನಗರದಲ್ಲಿರುವ ಕುಟುಂಬಗಳು ಸೇರಿ ಸಮುದಾಯ ಭವನ ನಿರ್ಮಿಸಿದ್ದಾರೆ ಎಂದರು.
ಜಿಲ್ಲಾ ಮಂಡಳಿ ಸದಸ್ಯ ಲಕ್ಷ್ಮಣಾಚಾರ್ ಮಾತನಾಡಿ ದುಡಿಯುವ ಜನತೆ ಒಗ್ಗಟ್ಟಾಗಿ ನಿಂತರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಸಂಗಾತಿ ನಗರವೇ ಉದಾಹರಣೆ ಎಂದರು. ಸಿಪಿಐ ತಾಲೂಕು ಮಹಿಳಾ ಒಕ್ಕೂಟದ ಸಂಚಾಲಕಿ ಶಾರದ ಜಿ.ಶೆಟ್ಟಿ ಮಾತನಾಡಿದರು. ನಿವೇಶನ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣ, ಮುಖಂಡ ಅಣ್ಣಪ್ಪ, ವಜೀರ್ ಅಹಮ್ಮದ್, ಶ್ರೀಧರ್ ಆಚಾರ್ ಮುಂತಾದವರು ಇದ್ದರು.
ಅರ್ಜಿ ಆಹ್ವಾನ
ಚಿಕ್ಕಮಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಿಂದುಳಿದ ವರ್ಗಗಳ ಜನಾಂಗದ ಸಂಘ ಸಂಸ್ಥೆಗಳು ನಡೆಸುವ ಅನುದಾನ ರಹಿತ ವಿದ್ಯಾರ್ಥಿ ನಿಲಯಗಳಿಗೆ ಅನುದಾನ ನೀಡಲು ಹಿಂದುಳಿದ ವರ್ಗಕ್ಕೆ ಸೇರಿದ ಅರ್ಹ ನೋಂದಾಯಿತ ಸಂಘ, ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಪಂ ಕಟ್ಟಡ, ಕೊಠಡಿ ಸಂಖ್ಯೆ 29, ಚಿಕ್ಕಮಗಳೂರು -ದೂ- 08262 220922) ಸಂಪರ್ಕಿಸಲು ತಿಳಿಸಿದೆ.