ತರೀಕೆರೆ: ತಾಪಂ ಸಭಾಂಗಣದಲ್ಲಿ ಮಂಗಳವಾರ ತಾಪಂ ಅಧ್ಯಕ್ಷೆ ಲೀಲಾವತಿ ಮಲ್ಲಿಕಾರ್ಜುನ್ ಅಧ್ಯಕ್ಷತೆಯಲ್ಲಿ ಮಾಸಿಕ ಕೆಡಿಪಿ ಸಭೆ ನಡೆಯಿತು.
ತಾಪಂ ಇಒ ದೇವರಾಜ್ ಮಾತನಾಡಿ, ತಾಲೂಕಿನಲ್ಲಿ ನಿರುಪಯಕ್ತ ಬೋರ್‌ವೆಲ್‌ಗಳನ್ನು ಮತ್ತು ನೀರಿನ ಸ್ಥಾವರ ಬತ್ತಿ ಹೋಗಿದ್ದರೆ ಅದನ್ನು ಕೂಡಲೇ ಮುಚ್ಚಲು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲು ಮುಂದಾಗಬೇಕು ಮತ್ತು ಯಾವುದೇ ಹೊಸ ಬೋರ್‌ವೆಲ್‌ಗಳ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಹೇಳಿದರು.
ಪಶು ಇಲಾಖೆ ಅಧಿಕಾರಿಗಳು ಮಾತನಾಡಿ ಆಗಸ್ಟ್ 16 ರಿಂದ ಕಾಲುಬಾಯಿ ಜ್ವರಕ್ಕೆ ಚುಚ್ಚುಮದ್ದು ನೀಡುವ ಕಾರ್ಯ ಮುಂದುವರಿಸಲಾಗುವುದು. ಜಾನುವಾರುಗಳಿಗೆ ತಗುಲುವ ದೊಡ್ಡರೊಗ ತಾಲೂಕಿನಲ್ಲಿ ಕಂಡುಬಂದಿಲ್ಲ. ಲಿಂಗದಹಳ್ಳಿ, ಶಿವನಿ ಮತ್ತಿತರ ಕಡೆ ಮೇವು ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
33 ಸಾವಿರ ಸಸಿ ವಿತರಣೆ: ಕೃಷಿ ಅರಣ್ಯ ಯೋಜನೆಯಡಿ ಪ್ರತಿ ಗ್ರಾಪಂಗೆ 2650 ಸಸಿಗಳಂತೆ 15 ಗ್ರಾಪಂಗಳಿಗೆ ಸುಮಾರು 33 ಸಾವಿರ ಸಸಿಗಳನ್ನು ಉಚಿತವಾಗಿ ನೀಡಲಾಗಿದೆ. ಉಳಿದ 31 ಗ್ರಾಪಂಗಳಿಗೂ ಸಸಿಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಸಾಮಾಜಿಕ ಅರಣ್ಯ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಇಒ ದೇವರಾಜ್ ಅವರು, ಸಸಿಗಳನ್ನು ಕಡ್ಡಾಯವಾಗಿ ಬೆಳೆಸಬೇಕು. ಅಧಿಕಾರಿಗಳು ಸಸಿಗಳನ್ನು ಬೆಳೆಸುವತ್ತ ವಿಶೇಷ ಗಮನ ಹರಿಸಬೇಕು. ರಸ್ತೆ ಎರಡೂ ಬದಿಗಳಲ್ಲಿ ಸಸಿಗಳನ್ನು ನೆಟ್ಟು ಸಂರಕ್ಷಿಸಬೇಕು ಮತ್ತು ಕಳೆದ ವರ್ಷಗಳಲ್ಲಿ ಹಾಕಿದ ಸಸಿಗಳ ಪ್ರಗತಿ ವರದಿಯನ್ನು ಮುಂದಿನ ಸಭೆಗೆ ತಿಳಿಸಬೇಕು.
ಇಲಾಖೆ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ವಿವಿಧ ಇಲಾಖೆಗಳು ಮಂದಾಗಬೇಕು ಎಂದರು. ಯಾವುದೇ ಇಲಾಖೆಯ ಕಾಮಗಾರಿ ಮತ್ತಿತರ ಕಾರ್ಯವನ್ನು ನಿರ್ವಹಿಸುವಾಗ ಸಂಬಂಧಿಸಿದವರಿಂದ ದೃಢೀಕರಣ ಕೇಳಬೇಕು ಇದು ಹೊಸ ನಿಯಮ. ಕೇಂದ್ರ ಮತ್ತು ರಾಜ್ಯ ಸರ್ಕಾರ, ಹಾಗೂ ಜಿಪಂ ಮತ್ತು ತಾಪಂ ಕಾಯಕ್ರಮಗಳ ಪ್ರಗತಿಯನ್ನು ಸಭೆಯ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯ ತಿಮ್ಮಯ್ಯ ಮಾತನಾಡಿ ತಾಲೂಕಿನಲ್ಲಿ ಶೇ.99 ರಷ್ಟು ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ. ಆಂಗ್ಲ ಮಾಧ್ಯಮದ 40 ಪುಸ್ತಕಗಳು ಮಾತ್ರ ಕೊರತೆ ಇದೆ, ಅವುಗಳನ್ನು ಶೀಘ್ರದಲ್ಲೇ ವಿತರಿಸಲಾಗುವುದು. ತಾಲೂಕಿನ 16 ಕಡೆ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಲಾಗಿದೆ. ಶೈಕ್ಷಣಿಕ ವರ್ಷದಲ್ಲಿ 212 ವಿದ್ಯಾರ್ಥಿಗಳು ಕಾನ್ವೆಂಟ್‌ನಿಂದ ಸರ್ಕಾರಿ ಶಾಲೆಗೆ ಸೇರ್ಪಡೆಯಾಗಿದ್ದಾರೆ ಎಂದು ಸಭೆಗೆ ತಿಳಿಸಿದರು.
ಇದೇ ವೇಳೆ ವಿವಿಧ ಇಲಾಖೆ ಪ್ರಗತಿ ಪರಿಶೀಲಿಸಲಾಯಿತು ತಾಪಂ ಉಪಾಧ್ಯಕ್ಷೆ ಲತಾ ತಮ್ಮಯ್ಯ, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.