ಚಿಕ್ಕಮಗಳೂರು: ನಗರದ ವಿವಿಧೆಡೆ ಇರುವ ಮಾಂಸ ಮಾರಾಟ ಅಂಗಡಿಗಳನ್ನು ಸಂತೆ ಮಾರುಕಟ್ಟೆ ಮೈದಾನದಲ್ಲಿರುವ ಮಾಂಸ ಮಾರಾಟ ಮಳಿಗೆಗಳ ಸಂಕೀರ್ಣಕ್ಕೆ ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಕೋಳಿ ಮತ್ತು ಮಾಂಸ ಮಾರಾಟ ಮಳಿಗೆಗಳ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಇಲ್ಲಿನ ಹನುಮಂತಪ್ಪ ವೃತ್ತದಿಂದ ಅನಿಲ್ ಕುಮಾರ್ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ತೆರಳಿದ ಮಾಂಸ ಮಾರಾಟಗಾರರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿರಸ್ತೇದಾರ್ ಚೇತನ್ ಅವರಿಗೆ ಮನವಿ ಸಲ್ಲಿಸಿದರು.
ನಗರದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ನಗರಸಭೆಯವರು ಇಲ್ಲಿನ ಸಂತೆ ಮೈದಾನದಲ್ಲಿ ಮಾಂಸ ಮಾರಾಟ ಮಳಿಗೆಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಮಳಿಗೆಗಳಲ್ಲಿ ಹಲವರು ಮಾಂಸ ಮಾರಾಟ ಮಾಡುತ್ತಿದ್ದಾರೆ. ಆದರೆ, ಕೆಲವರು ಇಲ್ಲಿ ಮಳಿಗೆ ಪಡೆದುಕೊಂಡಿದ್ದರೂ ತಾವು ಈ ಹಿಂದೆ ಮಾಂಸ ಮಾರಾಟ ಮಾಡುತ್ತಿದ್ದ ಸ್ಥಳಗಳಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ. ಹರಾಜಿನಲ್ಲಿ ಪಡೆದುಕೊಂಡಿದ್ದ ಮಳಿಗೆಗಳ ಬಾಡಿಗೆಯನ್ನೂ ಪಾವತಿ ಮಾಡುತ್ತಿಲ್ಲ ಎಂದು ಹೇಳಿದರು.