ಚಿಕ್ಕಮಗಳೂರು: ತಡವಾಗಿ ಬಂದು ಆರ್ಭಟಿಸಿದ ಮಳೆಯ ಅಬ್ಬರಕ್ಕೆ ಕೇವಲ ಒಂದೇ ತಿಂಗಳಲ್ಲಿ ಜಿಲ್ಲೆಯಲ್ಲಿ ಆಗಿರೋ ನಷ್ಟ ಬರೋಬರಿ 16.26 ಕೋಟಿ.
ಇಡೀ ಜೂನ್ ತಿಂಗಳಲ್ಲಿ ಮಳೆ ಕೈ ಕೊಟ್ಟಿದ್ದರಿಂದ ರೈತರು ಬೆಳೆಗಳ ಬಗ್ಗೆ ಭರವಸೆ ಕಳೆದುಕೊಂಡಿದ್ದರು. ಮುಂದೇನೂ ಎಂಬ ಪ್ರಶ್ನೆ ಎದುರಾಗುತ್ತಿದ್ದಂತೆ ಮಳೆ ಎಂಟ್ರಿ ಕೊಟ್ಟಿತು. ರೈತರ ಮೊಗದಲ್ಲಿ ಹರ್ಷ ಕಂಡು ಬಂದಿತು. ಜುಲೈ ತಿಂಗಳ 31 ದಿನಗಳಲ್ಲಿ ಸತತವಾಗಿ 25 ದಿನಗಳ ಕಾಲ ಬಿಡುವಿಲ್ಲದೆ ಮಳೆ ಸುರಿಯಿತು. ಜೂನ್ ತಿಂಗಳಲ್ಲಿ ಮಳೆ ಇಲ್ಲದೆ ಬೆಳೆ ಹೋಯ್ತು, ಜುಲೈ ತಿಂಗಳಲ್ಲಿ ಧಾರಾಕಾರವಾಗಿ ಮಳೆ ಸುರಿದು ಬೆಳೆ ಕಳೆದುಕೊಳ್ಳುವಂತಾಯಿತು.
ನಿರಂತರವಾಗಿ ಸುರಿದ ಮಳೆಗೆ 14.16 ಎಕರೆಯಷ್ಟು ಬೆಳೆಗಳಿಗೆ ಹಾನಿ ಸಂಭವಿಸಿದ್ದು, ಸುಮಾರು 5.16 ಲಕ್ಷ ನಷ್ಟವಾಗಿದೆ. ಇದೇ ಅವಧಿಯಲ್ಲಿ 64 ಮನೆಗಳಿಗೆ ಹಾನಿಯಾಗಿದ್ದು, 1.76 ಲಕ್ಷ ನಷ್ಟವಾಗಿದೆ.
ಪರಿಹಾರ ವಿತರಣೆ: ಈ ವರ್ಷದಲ್ಲಿ ಮಳೆಯಿಂದಾಗಿ 7 ಮಾನವ ಜೀವ ಹಾನಿ, 10 ಜಾನುವಾರು ಹಾನಿ ಸಂಭವಿಸಿದೆ. ಜೀವ ಹಾನಿಯಾದ ಕುಟುಂಬಗಳಿಗೆ ಜಿಲ್ಲಾಡಳಿತ ಪರಿಹಾರವನ್ನು ವಿತರಣೆ ಮಾಡಿದೆ.
ಸಾರ್ವಜನಿಕ ಆಸ್ತಿ: ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ 16.26 ಕೋಟಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದೆ.
201 ಕಿಮೀ ರಸ್ತೆಗಳಿಗೆ ಹಾನಿಯಾಗಿದ್ದು, ಇದರಿಂದಾಗಿ 695.50 ಲಕ್ಷ, 71 ಸೇತುವೆಗಳಿಗೆ ಹಾನಿಯಾಗಿದ್ದು, ಇದರಿಂದ 492.25 ಲಕ್ಷ, 12 ಕೆರೆಗಳಿಗೆ ಹಾನಿಯಾಗಿದ್ದು, ಇದರಿಂದಾಗಿ 67 ಲಕ್ಷ, 8 ಸರ್ಕಾರಿ ಕಟ್ಟಡಗಳಿಗೆ ಹಾನಿ ಸಂಭವಿಸಿದ್ದು, ಇದರಿಂದ 23 ಲಕ್ಷ, ಗಾಳಿ ಮತ್ತು ಮಳೆಯಿಂದಾಗಿ 1908 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಇದರಿಂದ 209.88 ಲಕ್ಷ, ಮೋರಿ, ಚರಂಡಿಗಳು ಹಾಗೂ ಭೂ ಕುಸಿತದ 27 ಹಾನಿಯಿಂದಾಗಿ 139 ಲಕ್ಷ ನಷ್ಟ ಸಂಭವಿಸಿದೆ. ಅಂದರೆ, ಒಂದೇ ತಿಂಗಳಲ್ಲಿ ಜಿಲ್ಲೆಯಲ್ಲಿ 16.26 ಕೋಟಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದೆ.
ವಾಡಿಕೆ ಮೀರಿದ ಮಳೆ: ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 1904 ಮಿಮೀ. ಈವರೆಗೆ ಅಂದರೆ ಜನವರಿಯಿಂದ ಜುಲೈ ಅಂತ್ಯದವರೆಗೆ ವಾಡಿಕೆ ಮಳೆ 1139.7 ಮಿಮೀ, ಈವರೆಗೆ ಬಿದ್ದಿರುವ ಮಳೆ 1336.9 ಮಿಮೀ. ಅಂದರೆ, ಜಿಲ್ಲೆಯಲ್ಲಿ ಶೇ. 117.3 ರಷ್ಟು ಮಳೆಯಾಗಿದೆ.
ಜಿಲ್ಲೆಯ 7 ತಾಲೂಕುಗಳಲ್ಲಿ ಕಳೆದ 7 ತಿಂಗಳಲ್ಲಿ ಬಿದ್ದಿರುವ ಮಳೆಯ ಶೇಕಡವಾರು ಪ್ರಮಾಣ ಈ ಕೆಳಕಂಡಂತೆ ಇದೆ.
ಚಿಕ್ಕಮಗಳೂರು- ಶೇ. 137, ಕಡೂರು- ಶೇ. 160.4, ಕೊಪ್ಪ- ಶೇ. 116.3, ಮೂಡಿಗೆರೆ- ಶೇ. 120.1, ನರಸಿಂಹರಾಜಪುರ- ಶೇ. 114.7, ಶೃಂಗೇರಿ- ಶೇ. 104.7, ತರೀಕೆರೆ- ಶೇ. 138.8. ಜಿಲ್ಲೆಯ ಎಲ್ಲಾ 7 ತಾಲೂಕುಗಳಲ್ಲಿ ವಾಡಿಕೆಗೂ ಮೀರಿ ಮಳೆ ಬಂದಿದೆ.
ಜಿಲ್ಲೆಯ ಬಯಲುಸೀಮೆಯ ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕಿನ ಎರಡು ಹೋಬಳಿಯ ರೈತರು ಮುಂಗಾರು ಮಳೆಯನ್ನು ಅವಲಂಬಿತ ಬೆಳೆ ಬೆಳೆಯುತ್ತಿದ್ದಾರೆ. ಮೇ ತಿಂಗಳ ಕೊನೆಯಲ್ಲಿ ಬಂದ ಮಳೆಯಿಂದಾಗಿ ರೈತರು ಬಿತ್ತನೆ ಮಾಡಿದ್ದರು. ಜೂನ್ ತಿಂಗಳಲ್ಲಿ ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಕಾರ್ಯ ಸ್ಥಗಿತಗೊಳಿಸಿದ್ದರು.
ಜುಲೈ ತಿಂಗಳಲ್ಲಿ ಬಂದ ಮಳೆಯಿಂದಾಗಿ ಬಯಲುಸೀಮೆಯಲ್ಲಿನ ಬೆಳೆಗಳು ಚೇತರಿಸಿಕೊಂಡವು. ಆದರೆ, ಇದೀಗ ಆಗಾಗ ಬರುತ್ತಿರುವ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿ ಬೆಳೆಗಳಿಗೆ ಹಾನಿ ಸಂಭವಿಸುತ್ತಿದೆ. ಸದ್ಯದ ಪರಿಸ್ಥಿತಿಯ ಪ್ರಕಾರ ಇದೇ ರೀತಿಯಲ್ಲಿ ಮಳೆ ಮುಂದುವರಿದರೆ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಲಿದೆ.
ಸದ್ಯ ಮಳೆಯ ಆರ್ಭಟ ಕಡಿಮೆಯಾಗಿದ್ದು, ಬೆಳಗ್ಗೆ ಬಿಡುವು ಕೊಡುತ್ತಿರುವ ಮಳೆ ಮಧ್ಯಾಹ್ನದ ವೇಳೆಗೆ ಆರಂಭವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಕೆರೆಕಟ್ಟೆಯಲ್ಲಿ ಅತಿ ಹೆಚ್ಚು ಅಂದರೆ, 127.4 ಮಿಮೀ ಮಳೆ ಬಂದಿದೆ.
ಇನ್ನುಳಿದಂತೆ ಚಿಕ್ಕಮಗಳೂರು ನಗರದಲ್ಲಿ 7.3, ವಸ್ತಾರೆ- 21, ಜೋಳ್ದಾಳ್- 23, ಆಲ್ದೂರು- 29.8, ಅತ್ತಿಗುಂಡಿ- 51, ಬ್ಯಾರವಳ್ಳಿ- 32, ಕಡೂರು- 2.2, ಗಿರಿಯಾಪುರ- 14, ಬೀರೂರು- 3.3, ಕೊಪ್ಪ- 61.8, ಹರಿಹರಪುರ- 67, ಜಯಪುರ- 52, ಕಮ್ಮರಡಿ- 81.7, ಬಸರೀಕಟ್ಟೆ- 77.2, ಮೂಡಿಗೆರೆ- 53.9, ಕೊಟ್ಟಿಗೆಹಾರ- 103, ಜಾವಳಿ- 65.2, ಗೋಣಿಬೀಡು- 24.2, ಕಳಸ- 72, ಎನ್.ಆರ್. ಪುರ- 29, ಬಾಳೆಹೊನ್ನೂರು- 30.4, ಮೇಗರಮಕ್ಕಿ- 32, ಶೃಂಗೇರಿ- 62, ಕಿಗ್ಗಾ- 115.7, ತರೀಕೆರೆ- 24, ಲಕ್ಕವಳ್ಳಿ- 33.4, ಅಜ್ಜಂಪುರ- 10.8, ಶಿವನಿ- 13.2, ಬುಕ್ಕಾಂಬೂದಿ- 14.2, ರಂಗೇನಹಳ್ಳಿಯಲ್ಲಿ 25.8 ಮಿಮೀ ಮಳೆಯಾಗಿದ್ದು, ಜಿಲ್ಲೆಯಲ್ಲಿ ಮಂಗಳವಾರ ಮಳೆಯ ಪ್ರಮಾಣ ಇಳಿಮುಖವಾಗಿತ್ತು.
ಶೃಂಗೇರಿಯಲ್ಲಿ ಮುಂದುವರಿದ ಮಳೆ
ಶೃಂಗೇರಿ: ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರ ನಿರಂತರವಾಗಿ ಮುಂದುವರಿದಿದೆ. ಮಂಗಳವಾರ ಬೆಳಗ್ಗೆಯಿಂದ ಧಾರಾಕಾರ ಮಳೆ ಸುರಿಯುತ್ತಿತ್ತು. ಮಳೆಯಿಂದ ವ್ಯಾಪಕ ಹಾನಿಯುಂಟಾಗುತ್ತಿದೆ. ಭತ್ತದ ಗದ್ದೆ ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ.
ಅಡಕೆ ತೋಟಗಳಿಗೆ ಔಷಧಿ ಸಿಂಪಡಣೆ ಮಾಡಲು ಸಾಧ್ಯವಾಗದೆ ರೈತರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಮಳೆ- ಗಾಳಿಯಿಂದ ವಿದ್ಯುತ್ ಕಡಿತ ಉಂಟಾಗುತ್ತಿದೆ. ತುಂಗಾ ನದಿಯಲ್ಲಿ ಇಳಿಮುಖವಾಗತೊಡಗಿದ್ದ ನೀರಿನ ಪ್ರಮಾಣ ಮತ್ತೆ ಹೆಚ್ಚತೊಡಗಿದ್ದು, ಇದೇ ರೀತಿ ಮಳೆಯ ಅಬ್ಬರ ಮುಂದುವರಿದರೆ ತುಂಗಾ ನದಿಯಲ್ಲಿ ಪ್ರವಾಹದ ಭೀತಿ ಉಂಟಾಗಲಿದೆ. ಮಂಗಳವಾರ ಸಂಜೆಯವರೆಗೂ ಮಳೆಯ ಆರ್ಭಟ ಮುಂದುವರಿದಿತ್ತು.