ಚಿಕ್ಕಮಗಳೂರು: ಬಾಕಿ ವೇತನ ಪಾವತಿಗೆ ಆಗ್ರಹಿಸಿ ಹಿರಿಯ, ಕಿರಿಯ ಆರೋಗ್ಯ ಸಹಾಯಕಿಯರು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಕೆಲವು ಆರೋಗ್ಯ ಸಹಾಯಕಿಯರಿಗೆ ಕಳೆದ ಮಾರ್ಚ್‌ನಿಂದ ಹಾಗೂ ಇನ್ನು ಕೆಲವು ಸಹಾಯಕಿಯರಿಗೆ ಮೇ ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸುಮರು 400 ಕ್ಕಿಂತ ಹೆಚ್ಚು ಹಾಗೂ ರಾಜ್ಯದಲ್ಲಿ ಸುಮಾರು 17 ಸಾವಿರ ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿರುವ ಆರೋಗ್ಯ ಇಲಾಖೆಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಕಳೆದ 5-6 ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಸಂಬಳ ದೊರಕುತ್ತಿಲ್ಲ.
ಕಿರಿಯ ಮಹಿಳಾ ಆರೋಗ್ಯ ಸಹಾಯಕೀಯರು ಬಹುತೇಕ ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರುಗಳಿಗೆ, ಅದರಲ್ಲೂ ಮಲೆನಾಡು ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಆರೋಗ್ಯ ಸಹಾಯಕಿಯರುಗಳಿಗೆ ಹೊರ ಜಗತ್ತಿನ ಸಂಪರ್ಕವೇ ಕೆಲವೊಮ್ಮೆ ಇರುವುದಿಲ್ಲ.
ರಾಜ್ಯಾದ್ಯಂತ ಕರ್ತವ್ಯ ನಿರ್ವಹಿಸುವ ಈ ಸಿಬ್ಬಂದಿಗೆ ಕೇಂದ್ರ ಹಾಗೂ ರಾಜ್ಯದ ಅನುದಾನದಿಂದ ಸಂಬಳ ವಿತರಿಸಲಾಗುತ್ತಿದ್ದು, ಈ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವುದರಿಂದ 3-4 ತಿಂಗಳುಗಳಿಗೊಮ್ಮೆ ಸಂಬಳ ವಿತರಿಸಲಾಗುತ್ತಿದೆ ಎಂದು ಆರೋಗ್ಯ ಸಹಾಯಕೀಯರು ಆಕ್ರೋಶ ವ್ಯಕ್ತಪಡಿಸಿದರು.
ಕಿರಿಯ ಹಾಗೂ ಹಿರಿಯ ಆರೋಗ್ಯ ಸಹಾಯಕರ ಸಂಘದ ಜಿಲ್ಲಾ ಶಾಖೆ ಹಾಗೂ ಚಿಕ್ಕಮಗಳೂರು ತಾ. ಶಾಖೆ ಪದಾಧಿಕಾರಿ ಗಾಯತ್ರಿ ಶೆಟ್ಟಿ, ಸ್ವರ್ಣಲತಾ, ಯಶೋಧಮ್ಮ, ಗೋಧಾವರದಮ್ಮ, ವಸಂತ ಕುಮಾರಿ, ವಿಮಲಾಕ್ಷಿ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಇದ್ದರು.