ಶಿವಮೊಗ್ಗ: ನೆಲದ ಇತಿಹಾಸ ಅರಿಯದೇ, ಭವಿಷ್ಯದ ರಾಷ್ಟ್ರವನ್ನು ನಿರ್ಮಾಣ ಮಾಡಲಾಗದು ಎಂದು ಇತ್ತೀಚೆಗಷ್ಟೆ ಕಾರ್ಗಿಲ್ ಯುದ್ಧ ನಡೆದ ಪ್ರದೇಶಗಳಿಗೆ ಭೇಟಿ ನೀಡಿ ಬಂದ ಪತ್ರಕರ್ತ ವೈದ್ಯ ಹೇಳಿದರು.
ಶನಿವಾರ ರೋಟರಿ ಪೂರ್ವ ಶಾಲೆಯ, ಇಂಟರ್ಯಾಕ್ಟ್, ರೋಟರಿ ವಿದ್ಯಾಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಕುರಿತು ಅವರು ಮಾತನಾಡಿದರು.
ಸ್ವತಂತ್ರ ಪೂರ್ವ ದೇಶ ವಿಭಜನೆ, ಸ್ವತಂತ್ರಾ ನಂತರದ ಕಾಶ್ಮೀರ ಸಮಸ್ಯೆಯ ಮೂಲ ಸೆಲೆಯಿಂದಾಗಿ, ಇಂದಿಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭದ್ರತೆಯ ವಾತಾವರಣ ಸೃಷ್ಟಿಯಾಗಿದೆ ಎಂದ ಅವರು ನಮ್ಮ ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆ ಕಾರಣದಿಂದಾಗಿ ಈ ಸಮಸ್ಯೆ ಜ್ವಲಂತವಾಗಿಯೇ ಉಳಿದಿದೆ ಎಂದರು.
ಭಾರತ ಮತ್ತು ಪಾಕಿಸ್ತಾನದ ನಡುವೆ ಈವರೆಗೆ ನಾಲ್ಕು ಯುದ್ಧಗಳು ನಡೆದಿದ್ದು, ಈ ಎಲ್ಲ ಯುದ್ಧಗಳಿಗೂ ಪಾಕಿಸ್ತಾನದ ಪ್ರಚೋದನೆಯೇ ಕಾರಣ ಎಂದು ವಿಶ್ಲೇಷಿಸಿದ ಅವರು ಅತ್ಯಂತ ಹೆಮ್ಮೆಯ ಸಂಗತಿಯೆಂದರೆ, ಈ ಎಲ್ಲಾ ಯುದ್ಧಗಳಲ್ಲಿಯೂ ಭಾರತ ಜಯಗಳಿಸಿದೆ ಎಂದು ಹೇಳಿದರು.
ಪ್ರತಿ ಯುದ್ಧದ ಸಂದರ್ಭವನ್ನು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಬಳಸಿಕೊಳ್ಳಬೇಕಾದ ಎಲ್ಲ ಸಾಧ್ಯತೆಗಳನ್ನು ನಿರಾಕರಿಸಿರುವ ರಾಜಕೀಯ ನಾಯಕರು ಕೇವಲ ಅಧಿಕಾರ ಹಾಗೂ ಸ್ವಾರ್ಥಕ್ಕಾಗಿ ಇಡೀ ವ್ಯವಸ್ಥೆಯನ್ನು ಬಳಸಿಕೊಂಡಿರುವುದು ಅತ್ಯಂತ ದು:ಖಕರ ಎಂದ ಅವರು ಈ ನಡುವೆಯೂ ಅಂದಿನ ಪ್ರಧಾನಿ ವಾಜಪೇಯಿ, ಭಾರತ-ಪಾಕಿಸ್ತಾನದ ನಡುವೆ ಶಾಂತಿ ಸೌಹಾರ್ದತೆಗಾಗಿ ಸಂಜೋತಾ ಎಕ್ಸ್ಪ್ರೆಸ್ ಆರಂಭಿಸಿದ್ದರು. ಪಾಕಿಸ್ತಾನ ಸ್ನೇಹಹಸ್ತಕ್ಕೆ ಪ್ರತಿಯಾಗಿ ಯುದ್ಧ ಸಾರಿತ್ತು. ಹೀಗಾಗಿ ಆ ರಾಷ್ಟ್ರ ನಂಬಿಕೆಗೆ ಅರ್ಹವಲ್ಲ ಎಂಬ ವಾತಾವರಣ ಸೃಷ್ಟಿಯಾಯಿತು ಎಂದು ತಿಳಿಸಿದರು.
ಕಾರ್ಗಿಲ್ ಯುದ್ಧ ಸಂಭವಿಸಿ ಹದಿನೈದು ವರ್ಷಗಳು ಸಂದಿರುವ ಈ ಸಂದರ್ಭದಲ್ಲಿ ಆ ಸೈನಿಕರ ತ್ಯಾಗ ಬಲಿದಾನ ಸ್ಮರಿಸಿಕೊಳ್ಳುವ ಸಂದರ್ಭ ಹಾಗೂ ಆ ಘಟನೆಗಳನ್ನು ಅರ್ಥೈಸಿಕೊಳ್ಳುವುದರ ಮೂಲಕ ಇತಿಹಾಸವನ್ನು ಅರಿಯುವ ಪ್ರಯತ್ನ ಮಾಡಬೇಕು ಎಂದ ಅವರು ಈ ಹಿನ್ನಲೆಯಲ್ಲಿ ಇಂದಿನ ದಿನಾಚರಣೆ ಅರ್ಥಪೂರ್ಣ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಶಾಲಾ ವಿದ್ಯಾರ್ಥಿಗಳು ಮೇಣದ ಬತ್ತಿ ಬೆಳಗಿಸಿ ಮೃತಯೋಧರಿಗೆ ಗೌರವ ಅರ್ಪಿಸಿದರು. ರೋಟರಿ ಶಾಲಾ ಸಮಿತಿ ಅಧ್ಯಕ್ಷ ಜಿ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಅಧ್ಯಕ್ಷ ಎಂ.ಎನ್. ವೆಂಕಟೇಶ್, ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ ಮತ್ತು ಅರುಣದೀಕ್ಷಿತ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ ಕಾರ್ಯಕ್ರಮ ನೆರವೇರಿತು. ಸಿಂಧು ತಂಡ ಪ್ರಾರ್ಥನೆ, ಸಿಂಚನ ಸ್ವಾಗತಿಸಿದರು. ಪಾರ್ವತಿ ವಂದಿಸಿ, ರೇಖಾ ನಿರೂಪಿಸಿದರು.