ಕ.ಪ್ರ. ವಾರ್ತೆ ಚಿತ್ರದುರ್ಗ ಸೆ.27
ಐತಿಹಾಸಿಕ ಸ್ಮಾರಕಗಳು ನಮಗೆ ದಾರಿದೀಪವಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿರುವುದರಿಂದ ಇಂತಹ ಸ್ಮಾರಕಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಭಾರತ ಪುರಾತತ್ವ ಸರ್ವೆಕ್ಷಣ ಇಲಾಖೆ ನಿವೃತ್ತ ಅಧೀಕ್ಷಕ ಸಿ.ಬಿ. ಪಾಟೀಲ್ ತಿಳಿಸಿದರು.
ಚಂದ್ರವಳ್ಳಿಯ ಎಸ್.ಜೆ.ಎಂ ಮಹಾವಿದ್ಯಾಲಯದ ಜಯದೇವ ಸಭಾಂಗಣದಲ್ಲಿ ನಡೆದ ಇತಿಹಾಸ ವಿಭಾಗ ಮತ್ತು ಇತಿಹಾಸ ಕ್ಲಬ್ ಆಶ್ರಯದಲ್ಲಿ ಇತಿಹಾಸ ಕ್ಲಬ್ ಉದ್ಘಾಟನೆ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ಪರಂಪರೆ ಇತಿಹಾಸ ಹೊಂದಿರುವ ಐತಿಹಾಸಿಕ ಸ್ಮಾರಕಗಳು ಹಾಗೂ ಅವಶೇಷಗಳನ್ನು ಪ್ರೀತಿಸುವವರು ಇತಿಹಾಸವನ್ನು ಪ್ರೀತಿಸುತ್ತಾರೆ. ಸ್ಮಾರಕದ ಮುಖಾಂತರ ಇತಿಹಾಸ ಅಧ್ಯಯನವನ್ನು ತಂದು ಕೊಳ್ಳಬೇಕು. ಸ್ಥಾವರ ಮತ್ತು ಸ್ಮಾರಕದ ಕುರಿತು ಚಿಂತನೆ ನಡೆಸಿ. ಪಠ್ಯಕ್ರಮವನ್ನು ಇತಿಹಾಸವನ್ನಾಗಿ ಓದುವವನು ಬದುಕನ್ನು ಹಾಗೆಯೇ ಆಯ್ಕೆಮಾಡಿಕೊಳ್ಳುತ್ತಾನೆಯೇ ಎಂಬುದನ್ನು ನೋಡಬೇಕಾಗಿದೆ ಎಂದರು.
ಜ್ಞಾನ, ಬದುಕಿಗೆ ಪ್ರೇರಣೆ: ಐತಿಹಾಸಿಕ ಪರಂಪರೆ ವಿಶಿಷ್ಟ ಮತ್ತು ಅಮೂಲ್ಯ ಐತಿಹಾಸಿಕ ಪರಂಪರೆ ಉಳಿಸಿ ಬೆಳೆಸುವುದರ ಕಡೆಗೆ ತಮ್ಮ ಗಮನವನ್ನು ಕೇಂದ್ರಿಕರಿಸಬೇಕು. ವಿದೇಶಗಲ್ಲಿ ಚಿಕ್ಕವಯಸ್ಸಿನಲ್ಲಿ ಐತಿಹಾಸಿಕ ಪರಂಪರೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಅಂತಹ ಪರಂಪರೆ ಭಾರತದಲ್ಲೂ ಮುಂದುವರೆದರೆ ನಮ್ಮ ಪರಂಪರೆಗೆ ಪ್ರಾಮುಖ್ಯತೆ ಬರುತ್ತದೆ. ಚಿತ್ರದುರ್ಗ ಭವ್ಯವಾದ ಇತಿಹಾಸವನ್ನು ಹೊಂದಿದೆ, ಅಷ್ಟೆ ಅಲ್ಲದೆ ಅಗಾಧವಾದ ಸ್ಮಾರಕ ಸಂಪತ್ತನ್ನು ಹೊಂದಿದೆ. ಇಂತಹ ಸ್ಮಾರಕ ಸಂಪತ್ತನ್ನು ಉಳಿಸುವುದರ ಕಡೆಗೆ ಗಮನ ಹರಿಸಬೇಕು. ಇತಿಹಾಸ ನಮ್ಮ ಜ್ಞಾನಕ್ಕಾಗಿ ನಮ್ಮ ಬದುಕಿಗಾಗಿ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಎಸ್.ಜೆ.ಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಮಾತನಾಡಿ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಎಸ್.ಜೆ.ಎಂ. ವಿದ್ಯಾಪೀಠ ವಿಶೇಷವಾಗಿ ಅದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಸಾಹಿತಿ ಕೆ. ವೆಂಕಣ್ಣಚಾರ್ ಚಿತ್ರದುರ್ಗ ಇತಿಹಾಸದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಜೆ.ಎಂ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಂ.ಜಿ. ಶಶಿಧರ್ ಮಾತನಾಡಿ, ಇತಿಹಾಸ ನಮ್ಮ ಪರಂಪರೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್.ಪಿ.ಇನ್ಫೋಟೆಕ್ ಅನಿಮೇಟರ್ ಆರ್. ಸಿದ್ಧರಾಜು, ಎಂ.ಎಚ್. ಶ್ರೀನಿವಾಸರೆಡ್ಡಿ ಹಾಗೂ ಬಿ.ಎಸ್. ಉಮಾಮಹೇಶ್ವರ್ ಮಾತನಾಡಿದರು. ಇತಿಹಾಸ ಕ್ಲಬ್ ಕಾರ್ಯದರ್ಶಿ ವೈ.ಟಿ. ರವಿಕುಮಾರ್ ಸ್ವಾಗತಿಸಿದರು. ಎಸ್. ಪ್ರದೀಪ್ ಹಾಗೂ ಕೆ.ಎಸ್. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಜಿ.ಎಸ್. ಗಿರಿಜಾ ವಂದಿಸಿದರು.