ದಕ್ಷಿಣ ಕನ್ನಡ

ಎಸ್‌ಇಝಡ್‌ಗೆ ನೇತ್ರಾವತಿ ಬಲಿ

ಬಂಟ್ವಾಳ: ಬೇರೆ ಬೇರೆ ರೀತಿಯ 'ಅತ್ಯಾಚಾರ'ಗಳಿಗೆ ತುತ್ತಾಗುತ್ತಿರುವ ಜಿಲ್ಲೆಯ  ಜೀವನದಿ ನೇತ್ರಾವತಿಗೆ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ. ಕಣ್ಣಿಗೆ ಮಣ್ಣು ಹಾಕಿದಂತೆ 'ನೇತ್ರಾವತಿ' ನದಿ ಪಾತ್ರಕ್ಕೆ ಮಣ್ಣು ತುಂಬಿಸುವ  ಕಾರ್ಯ ಮಂಗಳೂರು ಎಸ್‌ಇಜೆಡ್‌ನಿಂದ ನಡೆಯುತ್ತಿದೆ.
 ಸ್ವಹಿತಾಸಕ್ತಿಗಾಗಿ ನೇತ್ರಾವತಿಯನ್ನೇ ಬಲಿಕೊಡಲು ಹೊರಟಂತಿರುವ  ಮಂಗಳೂರು ಎಸ್‌ಇಜೆಡ್ ಈ ಕಾಮಗಾರಿಯಿಂದಾಗಿ ನೇತ್ರಾವತಿಯ ಗಾತ್ರವೂ ಕಿರಿದಾಗುವ ಅಪಾಯವೂ ಇದೆ.
 ಈಗಾಗಲೆ ಉದ್ದಿಮೆಗಳ ಕೆಂಗಣ್ಣಿಗೆ ಗುರಿಯಾಗಿ ನೀರಕಟ್ಟೆ, ಶಂಭೂರು ಎ.ಎಂ.ಆರ್ ಅಣೆಕಟ್ಟು, ತುಂಬೆ ಅಣೆಕಟ್ಟು, ಮಂಗಳೂರು ವಿಶೇಷ ವಿತ್ತ ವಲಯಕ್ಕೆ ನೀರು ಒದಗಿಸುವ ಜಾಕ್‌ವೆಲ್ ಕಾಮಗಾರಿಯಿಂದ ತತ್ತರಿಸಿರುವ ನೇತ್ರಾವತಿಯ ಮೇಲೆ ಸೆಝ್ ಗಾಯದ ಮೇಲೆ ಬರೆ ಎಳೆದಂತೆ ನಡೆಸುತ್ತಿರುವ ಕಾಮಗಾರಿ ಬಂಟ್ವಾಳದ ಜನತೆಯ ಆತಂಕಕ್ಕೆ ಕಾರಣವಾಗಿದೆ.
 ಬಿ.ಸಿ.ರೋಡು-ಕಡೂರು ರಾಷ್ಟ್ರೀಯ ಹೆದ್ದಾರಿ 234 ರ ಬಂಟ್ವಾಳ ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿಯ ದಡಭಾಗ ಆವರಿಸುವಂತೆ ಪೈಪ್‌ಲೈನ್ ಕಾಮಗಾರಿ ನಡೆದಿದ್ದು, ಅದನ್ನು ಮುಚ್ಚಲು ಅದರ ಮೇಲೆ ಮಣ್ಣುಹಾಕಲಾಗಿದೆ. ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಈ ರಸ್ತೆಯಲ್ಲಿ ಇನ್ನೂ ಅಗಲೀಕರಣ ಕಾಮಗಾರಿಗಳು ನಡೆಯಬೇಕಾಗಿದೆ. ಈ ನಡುವೆ ಹೆದ್ದಾರಿಯಿಂದ ದೂರವುಳಿಯುವ ಸಲುವಾಗಿ ನದಿ ತಟದಲ್ಲಿ ಪೈಪ್ ಲೈನ್ ಹಾದುಹೋಗಿದ್ದು, ನದಿಗೆ ಮಣ್ಣು ಹಾಕಿ ನೆಲಸಮಗೊಳಿಸಲಾಗಿದೆ. ನದಿಯನ್ನೇ ಮುಚ್ಚುವಂತಹಾ ಕಾರ್ಯಕ್ಕೆ ಮುಂದಾಗಿರುವ ಮಂಗಳೂರು ಎಸ್‌ಇಜೆಡ್ ಕುರಿತಾಗಿ ಪ್ರಜ್ಞಾವಂತ ನಾಗರೀಕರಿಂದ ಆಕ್ಷೇಪದ ಮಾತುಗಳು ಕೇಳಿಬಂದಿದೆ. ಆದರೆ ಇದರ ಬಗ್ಗೆ ಧ್ವನಿಯೆತ್ತಬೇಕಾದ ಜನಪ್ರತಿನಿಧಿಗಳು ಮಾತ್ರ ಏನೂ ಆಗದಂತೆ ಸುಮ್ಮನಿದ್ದಾರೆ.
ಬರಿದಾಗುತ್ತಿರುವ ನೇತ್ರಾವತಿ: ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿಕೊಂಡು, ಅಭಿವೃದ್ಧಿ ಹೆಸರಿನಲ್ಲಿ ಸಂಕಷ್ಟ ತರುವ ಯೋಜನೆಗಳು ಬಂಟ್ವಾಳಕ್ಕೆ ಇದೇ ಮೊದಲಲ್ಲ. ವಿವಿಧ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ 'ನೇತ್ರಾವತಿ'ಯನ್ನು ಬರಿದು ಮಾಡಲಾಗುತ್ತಿದೆ. ಜೊತೆಗೆ ನೇತ್ರಾವತಿ ನದಿ ತಿರುವಿನ ಬಗ್ಗೆಯೂ ಅವೈಜ್ಞಾನಿಕ ಹೇಳಿಕೆ ನೀಡುತ್ತಿರುವ ರಾಜಕಾರಣಿಗಳು, ನೇತ್ರಾವತಿಯನ್ನೇ ತಮ್ಮ ಚುನಾವಣಾ ದಾಳವಾಗಿ ಬಳಸುವ ತವಕದಲ್ಲಿದ್ದಾರೆ. ನೇತ್ರಾವತಿಯಿಂದ ಮರಳು ತೆಗೆದಾಯ್ತು, ಅಣೆಕಟ್ಟು ಕಟ್ಟಿ, ಜಾಕ್‌ವೆಲ್ ನಿರ್ಮಿಸಿ ಅಗತ್ಯಕ್ಕಿಂತ ಹೆಚ್ಚು ನೀರು ಕಸಿದುಕೊಂಡಾಯ್ತು ಇನ್ನು ಬರಿದಾದ ನದಿಯನ್ನು ಮಣ್ಣು ಹಾಕಿ ಮುಚ್ಚುವುದೊಂದೇ ಮಂಗಳೂರು ಎಸ್‌ಇಜೆಡ್ ಗುರಿಯೋ ಎಂಬ ಅನುಮಾನವೂ ಮೂಡಿಬರುತ್ತಿದೆ.
ಎಲ್ಲಿಂದ ಪೈಪ್‌ಲೈನ್?: ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ತಾಲೂಕಿನ ನೇತ್ರಾವತಿಯ ನೀರೇ ಬೇಕಂತೆ. ಅದಕ್ಕಾಗಿ ನದಿಯಿಂದ ನೀರು ಸರಬರಾಜು ಮಾಡಲು ಪೆರ್ಲ ಸಮೀಪದ ಬೀಯಪಾದೆ ಎಂಬಲ್ಲಿ ಭಾರೀ ಗಾತ್ರದ ಜಾಕ್ವೆಲ್ ನಿರ್ಮಾಣಗೊಳ್ಳುತ್ತಿದ್ದು, ಶಂಭೂರು ಎಎಂಆರ್ ಪವರ್ ಪ್ರಾಜೆಕ್ಟ್‌ನಿಂದ ಕಣ್ಣಳತೆಯ ದೂರದಲ್ಲಿ ಒಂದು ಎಕರೆಗಿಂತಲೂ ಅಧಿಕ ವಿಸ್ತೀರ್ಣದ ಪ್ರದೇಶದಲ್ಲಿ ಇದರ ಕಾಮಗಾರಿ ನಡೆಯುತ್ತಿದೆ. ನೋಡುಗರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ನದಿ ಕಿನಾರೆಯಲ್ಲಿ ಬೃಹತ್ ಹೊಂಡವನ್ನು ತೋಡಲಾಗಿದೆ, ಇಲ್ಲಿನ ಬೃಹತ್ ಬಂಡೆಗಳನ್ನು ಕೊರೆದು ಕಬ್ಬಿಣದ ಸರಳುಗಳನ್ನು ಜೋಡಿಸುವ ಕೆಲಸ ಭರದಿಂದ ನಡೆಯುತ್ತಿದೆ.
 ಜಾಕ್‌ವೆಲ್‌ನಲ್ಲಿ ಸಂಗ್ರಹಗೊಳ್ಳುವ ನೇತ್ರಾವತಿ ನದಿ ನೀರನ್ನು ಪೈಪ್‌ಲೈನ್ ಮೂಲಕ ಮಂಗಳೂರು ವಿಶೇಷ ವಿತ್ತವಲಯಕ್ಕೆ ಸರಬರಾಜು ಮಾಡುತ್ತಾರಂತೆ. ಹೆದ್ದಾರಿ ಅಗಲೀಕರಣ ಕಾಮಗಾರಿ ಇನ್ನೂ ನಡೆಯದಿರುವ ಹಿನ್ನೆಲೆಯಲ್ಲಿ ಅತಿ ಬುದ್ಧಿವಂತಿಕೆ ಉಪಯೋಗಿಸಿರುವ ಸೆಝ್ ನದಿಯನ್ನೇ  ಆಕ್ರಮಿಸಿದೆ.
 ಈಗಾಗಲೇ ಬಹಳಷ್ಟು ವಿಸ್ತೀರ್ಣದ ನದಿಯನ್ನು ಮಣ್ಣುಹಾಕಿ ಮುಚ್ಚಲಾಗಿದ್ದು, ಭಾರಿ ಅವಾಂತರವೇ ನಡೆದಿದೆ. ಆದರೆ ಇಷ್ಟೆಲ್ಲಾ ನಡೆದರೂ ನಮ್ಮ ಜನಪ್ರತಿನಿಧಿಗಳು-ಅಧಿಕಾರಿಗಳು ಮಾತ್ರ ಏನೂ ಆಗಿಲ್ಲ ಎಂಬಂತೆ ಸುಮ್ಮನಿರುವುದು ಅವರ ಪರಿಸರ ಕಾಳಜಿಯನ್ನು ಎತ್ತಿಹಿಡಿದಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ