ಮಂಗಳೂರು/ಬಂಟ್ವಾಳ: ವಾಹನಗಳಿಂದ ಅನಧಿಕೃತವಾಗಿ ಕಾರ್ಯಾಚರಣೆ ವೇಳೆ ಹಣ ಸಂಗ್ರಹಿಸಿರುವುದನ್ನು ಪತ್ತೆ ಮಾಡಿದ ಮಂಗಳೂರು ಲೋಕಾಯುತ್ತ ಪೊಲೀಸರು, ವಾಣಿಜ್ಯ ತೆರಿಗೆ ಅಧಿಕಾರಿ ಸಹಿತ ಮೂವರನ್ನು ಮಂಗಳವಾರ ಬಂಧಿಸಿದ್ದಾರೆ.
ಮಂಗಳೂರಿನ ವಾಣಿಜ್ಯ ತೆರಿಗೆ ಅಧಿಕಾರಿ ರಮೇಶ್, ಕ್ಲರ್ಕ್ ಮೋಂತಿ ಮಚಾದೊ ಹಾಗೂ ವಾಹನ ಚಾಲಕ ಚಿನ್ನಪ್ಪ ಗೌಡ ಸಿಕ್ಕಿಬಿದ್ದವರು. ಇವರನ್ನು ಬಂಧಿಸಿ ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತೆರಿಗೆ ತಪ್ಪಿಸಿ ಸಂಚರಿಸುವ ವಾಹನಗಳನ್ನು ತಪಾಸಣೆ ಮಾಡುವ ಈ ಅಧಿಕಾರಿಗಳು ವಾಹನಗಳಿಂದ ಅನಧಿಕೃತವಾಗಿ ವಸೂಲಿ ಮಾಡುತ್ತಿದ್ದಾರೆ ಎಂಬ ದೂರಿನ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ವಿಠಲದಾಸ ರೈ, ಇನ್ಸ್‌ಪೆಕ್ಟರ್‌ರಾದ ಉಮೇಶ್ ಶೇಟ್, ದಿಲೀಪ್ ಕುಮಾರ್ ನೇತೃತ್ವದಲ್ಲಿ ಸಂಜೆ ಏಕಕಾಲಕ್ಕೆ ದಾಳಿ ನಡೆಸಲಾಗಿತ್ತು. ತಲಪಾಡಿ ಚೆಕ್‌ಪೋಸ್ಟ್‌ಗೆ ದಾಳಿ ನಡೆಸಿದಾಗ ಏನೂ ಪತ್ತೆಯಾಗಲಿಲ್ಲ. ಅದೇ ವೇಳೆ ಬಿ.ಸಿ.ರೋಡ್-ಮೆಲ್ಕಾರ್ ಮಧ್ಯೆ ತಪಾಸಣೆ ನಡೆಸುತ್ತಿದ್ದ ವಾಣಿಜ್ಯ ತೆರಿಗೆ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ತಪಾಸಣೆ ಮಾಡಿದಾಗ ಅವರಲ್ಲಿ ದಾಖಲೆ ಇಲ್ಲದೆ ಇರಿಸಿದ್ದ ಅನಧಿಕೃತ ಮೊತ್ತ ಬೆಳಕಿಗೆ ಬಂದಿತ್ತು. ಸುಮಾರು ರು. 18 ಸಾವಿರ ಮೊತ್ತವನ್ನು ತಮ್ಮ ವಿಶ್ರಾಂತಿ ಕೊಠಡಿಯಲ್ಲಿ ಇರಿಸಿದ್ದರು. ಈ ನಗದು ಮೊತ್ತವನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.