ದಕ್ಷಿಣ ಕನ್ನಡ

ವಿವಿಧೆಡೆ ಗಣರಾಜ್ಯೋತ್ಸವ

ಬಂಟ್ವಾಳ: ಭ್ರಷ್ಟಾಚಾರ ಹಾಗೂ ಭೀತಿವಾದ ದೂರವಾದಾಗ ಮಾತ್ರ ಸದೃಢ  ಸಮಾಜ ನಿರ್ಮಾಣ ಸಾಧ್ಯ ಎಂದು ಬಂಟ್ವಾಳ ಶಾಸಕ ಬಿ.ರಮಾನಾಥ ರೈ ಹೇಳಿದ್ದಾರೆ. ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡಿನ ಸಾರ್ವಜನಿಕ ರಂಗಮಂದಿರದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಂಟ್ವಾಳ ತಾಲೂಕು ದಂಡಾಧಿಕಾರಿ ಆನಂದ ನಾಯಕ್ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸೀಕರಿಸಿದರು. ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷೆ ಲಲಿತಾ ಶಿವಪ್ಪ ನಾಯ್ಕ್, ಉಪಾಧ್ಯಕ್ಷ ಆನಂದ ಶಂಭೂರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಶ್ವನಾಥ ಪೂಜಾರಿ, ಪೊಲೀಸ್ ವೃತ್ತ ನಿರೀಕ್ಷಕ ಅನಿಲ್ ಎಸ್.ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸುಧಾಕರ್,ಪಿಡಬ್ಲ್ಯುಡಿ ಎಂಜಿನಿಯರ್ ಲೋಕೇಶ್ವರ್ ಮತ್ತಿತರರು ಇದ್ದರು. ಧ್ವಜಾರೋಹಣಕ್ಕೂ ಮುನ್ನ ಆಕರ್ಷಕ ಪಥಸಂಚಲನ ನಡೆಯಿತು.
ಮಕ್ಕಳಿಗೆ ನಿಲ್ಲುವ ಶಿಕ್ಷೆ: ಇದು ಗಣರಾಜ್ಯೋತ್ಸವಕ್ಕೆ ಆಮಂತ್ರಿತರಾಗಿದ್ದ ಮಕ್ಕಳು ಪಟ್ಟ ಪಾಡು. ಕಾರ್ಯಕ್ರಮಕ್ಕಾಗಿ ಪುರಸಭಾ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಕರೆಸಲಾಗಿತ್ತು. ಸಭಾಂಗಣದಲ್ಲಿ ಇರಿಸಿದ್ದ ಎಲ್ಲ ಕುರ್ಚಿಗಳು ಮಕ್ಕಳಿಂದಲೇ ಭರ್ತಿಯಾಗಿದ್ದರೆ ಕೆಲವೇ ಮಂದಿ ಹಿರಿಯರು ಅಲ್ಲಲ್ಲಿ ಕಾಣುತ್ತಿದ್ದರು.  ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆಯಿಸಿದ ಸಂಘಟಕರು ಮಕ್ಕಳಿಗೆ ಕುಳಿತುಕೊಳ್ಳಲು ಸರಿಯಾಗಿ ಆಸನದ ವ್ಯವಸ್ಥೆ ಕಲ್ಪಿಸದೆ ಇದ್ದದ್ದು ಹಲವರ ಅಸಮಾಧಾನಕ್ಕೆ ಕಾರಣವಾಯಿತು. ಪ್ರೇಕ್ಷಕರ ಕೊರತೆ ನೀಗಿಸಲು ಒತ್ತಾಯಪೂರ್ವಕವಾಗಿ ಮಕ್ಕಳನ್ನು ಕರೆಯಿಸುವ ಸಂಘಟಕರು ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಆಮಂತ್ರಿಸಿದ್ದರೆ ಪ್ರಜಾಪ್ರಭುತ್ವದ ಆಸೆ ಈಡೇರುತ್ತಿತ್ತು ಎನ್ನುವ ಮಾತೂ ಕೇಳಿ ಬಂತು.
ಪುತ್ತೂರು ವರದಿ: ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಾ.ಪಂ. ಅಧ್ಯಕ್ಷೆ ಶಶಿಪ್ರಭಾ ಸಂಪ್ಯ ಮಾತನಾಡಿದರು. ಪರೇಡ್ ನಡೆಸಿ, ಧ್ವಜ ವಂದನೆ ಸ್ವೀಕರಿಸಿದ ಪುತ್ತೂರು ಉಪವಿಭಾಗಾಧಿಕಾರಿ ಎಚ್. ಪ್ರಸನ್ನ ಮಾತನಾಡಿದರು. ಮಾಜಿ ಶಾಸಕ ರಾಮ ಭಟ್, ಪುರಸಭಾ ಅಧ್ಯಕ್ಷೆ ಕಮಲಾ ಆನಂದ್, ಹಿರಿಯರಾದ ಕೆ.ಪಿ. ಶೆಟ್ಟಿ, ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಶೇಷಶಯನ ಕಾರಿಂಜ, ತಹಸೀಲ್ದಾರ್ ಕಳ್ಳೇ ಗೌಡ, ಮತ್ತಿತರರು ಇದ್ದರು. ಪುತ್ತೂರು  ಬಿ.ಎಂ.ಎಸ್. ಆಟೋ ರಿಕ್ಷಾ ಚಾಲಕ ಮಾಲೀಕರ ಸಂಘದ ಕಚೇರಿಯಲ್ಲಿ ಶನಿವಾರ ಗಣರಾಜ್ಯೋತ್ಸವವು ನಡೆಯಿತು. ಸಂಘದ ಅಧ್ಯಕ್ಷ ಸುರೇಶ್ ಸುಧಾಕರ್ ನಾಯಕ್ ಸಭಾಧ್ಯಕ್ಷತೆ ವಹಿಸಿದ್ದರು.  ಪುತ್ತೂರಿನ ಪತ್ರಿಕಾಭವನದಲ್ಲಿ ಪತ್ರಕರ್ತರ ಸಂಘದ ಕಾನೂನು ಸಲಹೆಗಾರ ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ಧ್ವಜಾರೋಹಣ ನಡೆಸಿದರು.
ಬೆಳ್ತಂಗಡಿ ವರದಿ: ಇಲ್ಲಿನ ತಾಲೂಕು ಕಚೇರಿ ಮುಂಭಾಗದ ಮೈದಾನದಲ್ಲಿ ಶಾಸಕ ವಸಂತ ಬಂಗೇರ ಇವರ ಅಧ್ಯಕ್ಷತೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ತಹಸೀಲ್ದಾರ್ ಎಮ್.ಟಿ. ಕುಳ್ಳೇಗೌಡ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್ ವೃತ್ತ ನಿರೀಕ್ಷಕ ಭಾಸ್ಕರ ರೈ,ನಿವೃತ್ತ ಸೈನಿಕ ಎಮ್.ಆರ್. ಜೈನ್, ನಗರ ಪಂಚಾಯಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಇಲಾಖಾಧಿಕಾರಿಗಳು ಮತ್ತಿತರರು ಇದ್ದರು. ನಡ ಪದವಿ ಪೂರ್ವ ಕಾಲೇಜಿನ ವಸಂತಿ ಉಪನ್ಯಾಸ ನೀಡಿದರು. ಈ ಸಂದರ್ಭ ವಿಕಾಲಾಂಗ, ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಅಂಜನಾದೇವಿ ಮತ್ತು ಡಾಕ್ಟರೇಟ್ ಪಡೆದಿರುವ ಬಾಬು ಕೊರಗ ಅವರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ವಿವಿಧ ದೇಶಭಕ್ತಿ ಗೀತೆಗಳಿಗೆ ನೃತ್ಯ ನಡೆಯಿತು.
ಸುಳ್ಯ ವರದಿ: ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ನಡೆಯಿತು. ಧ್ವಜಾರೋಹಣವನ್ನು ತಹಸೀಲ್ದಾರ್ ಎಚ್.ಬಿ. ವೈದ್ಯನಾಥ್ ನೆರವೇರಿಸಿದರು. ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ನ.ಪಂ. ಅಧ್ಯಕ್ಷೆ ಸುಮತಿ ನಾರಾಯಣ, ಜಿ.ಪಂ. ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ, ಕುಕ್ಕೆ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಎ.ಒ.ಎಲ್.ಇ. ಉಪಾದ್ಯಕ್ಷ ಡಾ.ಕೆ.ವಿ. ಚಿದಾನಂದ, ಇತರರು ಇದ್ದರು. ಈ ಸಂದರ್ಭದಲ್ಲಿ ಗೃಹ ರಕ್ಷಕ ದಳದ ರಾಮಕೃಷ್ಣ, ಪ್ರತಿಭಾವಂತ ವಿದ್ಯಾರ್ಥಿಗಳಾದ ಧೃತಿ ಮುಂಡೋಡಿ, ಚೈತ್ರಾ ರಾವ್, ಅಜಯ ಕೃಷ್ಣ,ಅಖಿಲ್ ಪ್ರಸಾದ್, ಮುರಳಿ ಕೃಷ್ಣ, ಮಯೂರ ಅಂಬೆಕಲ್ ಅವರನ್ನು ಸನ್ಮಾನಿಸಲಾಯಿತು.
ಮೂಲ್ಕಿ ವರದಿ: ನಗರ ಪಂಚಾಯಿತಿ ವತಿಯಿಂದ ಮೂಲ್ಕಿ ಕಾರ್ನಾಡಿನ ಗಾಂಧಿ ಮೈದಾನದಲ್ಲಿ ಜರುಗಿದ 64ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ವಿಪಕ್ಷ ಮುಖ್ಯ ಸಚೇತಕ ಕೆ. ಅಭಯಚಂದ್ರ ಜೈನ್ ಧ್ವಜಾರೋಹಣಗೈದು ಮಾತನಾಡಿದರು. ಅಧ್ಯಕ್ಷತೆಯನ್ನು ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ ವಹಿಸಿದ್ದರು. ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ ಜಯ ಸಿ.ಸುವರ್ಣ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕರಿಂಜೆ ವಿನು ವಿಶ್ವನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನ.ಪಂ.ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್, ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ. ಸಾಲ್ಯಾನ್, ಮೂಲ್ಕಿ ಪೊಲೀಸ್ ಠಾಣಾಧಿಕಾರಿ ಬಶೀರ್ ಅಹಮ್ಮದ್ ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ಮೂಲ್ಕಿ ಪೊಲೀಸ್ ಠಾಣೆ ಉಪ ನಿರೀಕ್ಷಕ ಸೋಮಯ್ಯ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!