ದಕ್ಷಿಣ ಕನ್ನಡ

ಮುದ ನೀಡಿದ ಮನೆ ಮನೆ ಕವಿಗೋಷ್ಠಿ

ಗೋಣಿಕೊಪ್ಪಲು: ತೋಚಿದ- ಗೀಚಿದ ಪದಗಳೇ ಇಲ್ಲಿ ಕವನವಾಗಿ ಹೊರಹೊಮ್ಮಿದವು. ಹಿರಿಯರು- ಕಿರಿಯರೆನ್ನದೆ ಕವಿಹೃದಯಗಳೆಲ್ಲ ಸೇರಿ ಗೋಣಿಕೊಪ್ಪಲು ಸಮೀಪ ಕೈಕೇರಿಯಲ್ಲಿ ಮನೆ ಮನೆ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ತಪ್ಪೋ ಸರಿಯೋ ವೇದಿಕೆಯೇರಿ ತಮ್ಮ ಕವನ ವಾಚಿಸಿ ಖುಷಿ ಪಡುವುದಕ್ಕೆ ಇಲ್ಲಿ ಮುಕ್ತ ಸ್ವಾತಂತ್ರ್ಯವಿತ್ತು. ಗ್ರಾಮೀಣ ಸೊಗಡು ಅಲ್ಲಲ್ಲಿ ಇಣುಕಿದ್ದವು. ಪ್ರೇಮ ಪುರಾಣಕ್ಕೆ ಕೊರತೆ ಇರಲಿಲ್ಲ. ನಡುನಡುವೆ ಹಾಸ್ಯ ಕವನಗಳೂ ಇಣುಕಿ ಕಚಗುಳಿ ಇಡಲು ಪ್ರಯತ್ನಿಸಿದವು. ಚುಟುಕು ಕವನ, ಪ್ರಕೃತಿ ಕುರಿತ ಕವನ, ರಾಜಕಾರಣಿಗಳನ್ನು ಲೇವಡಿ ಮಾಡುವ ಕವನಗಳನ್ನು ವಾಚಿಸಲಾಯಿತು.
ಪುತ್ತೂರು, ಸುಳ್ಯ, ಮೈಸೂರು, ಹುಣಸೂರು, ಕಂಪ್ಲಾಪುರ, ಪಿರಿಯಾಪಟ್ಟಣ, ಕೊಡಗಿನ ಮಡಿಕೇರಿ, ಶನಿವಾರಸಂತೆ, ಭಾಗಮಂಡಲ, ನಾಪೋಕ್ಲು, ಗೋಣಿಕೊಪ್ಪಲು, ಕೈಕೇರಿ ಗ್ರಾಮದ ಸುಮಾರು 30ಕ್ಕೂ ಅಧಿಕ ಮಂದಿ ಕವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮನೆ ಮನೆ ಕವಿಗೋಷ್ಠಿಯೊಂದಿಗೆ ಕೈಕೇರಿ ಸವಿತಾ ಸಮಾಜ ಸಭಾಂಗಣದಲ್ಲಿ ಶುಕ್ರವಾರ ನೂತನ ಸ್ಪೂರ್ತಿ ಸೇವಾ ಸಂಸ್ಥೆ, ಸಂಗಮ ಸ್ವ ಸಹಾಯ ಸಂಘ ಹಾಗೂ ಸಂಕಲ್ಪ ಸ್ವಸಹಾಯ ಸಂಘಗಳ ಉದ್ಘಾಟನೆಯನ್ನು ಮಡಿಕೇರಿ ಆಕಾಶವಾಣಿ ನಿರೂಪಕ, ಕೊಡಗು ಚ್ಯಾನೆಲ್ ನಿರ್ವಾಹಕಮಾದೇಟಿರ ಬೆಳ್ಳಿಯಪ್ಪ ಅವರು ಜ್ಯೋತಿ ಬೆಳಗಿ ಚಾಲನೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘ ಸಂಸ್ಥೆಗಳು ಸಮಾಜದ ಸ್ವಾಸ್ಥ್ಯ ಕಾಪಾಡಲು ಮುಂದಾಗಬೇಕು. ಮಹಿಳೆಯರು ಸ್ವಾವಲಂಬಿಗಳಾಗಲು ಇಂದು ಸ್ವಯಂ ಸೇವಾ ಸಂಸ್ಥೆಗಳು ಪ್ರಮುಖ ಪಾತ್ರವನ್ನು ನಿರ್ವಹಿಸಿದೆ. ಅಸಹಾಯಕರು, ಅಂಗವಿಕಲರು, ನೋವುಂಡ ಮನಸ್ಸುಗಳಿಗೆ ಸಾಂತ್ವನ ನೀಡುವ ಕೆಲಸವನ್ನು ಸಂಘಗಳು ನಿರ್ವಹಿಸಿದ್ದಲ್ಲಿ ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
ಮನೆ ಮನೆ ಕವಿಗೋಷ್ಠಿ ಇತರೆ ದಸರೆ, ಹಬ್ಬ- ಹರಿದಿನಗಳಲ್ಲಿ ಕಂಡು ಬರುವ ಕವಿಗೋಷ್ಠಿಗಿಂತಲೂ ಭಿನ್ನವಾಗಿದೆ. ಇಲ್ಲಿ ಹೆಚ್ಚಿನ ಆತ್ಮೀಯತೆಯನ್ನು ಕಾಣಬಹುದು. ಪ್ರತಿಯೊಬ್ಬನ ಮನಸ್ಸಿನಲ್ಲಿಯೂ ಕವಿ ಇದ್ದಾನೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೋಣಿಕೊಪ್ಪಲು ಸ್ಪೂರ್ತಿ ಸೇವಾ ಸಂಸ್ಥೆಯ ಅಧ್ಯಕ್ಷ, ದಕ್ಷಿಣ ಕನ್ನಡದ ನಿರಂತರ ಪ್ರಗತಿ ಮಾಸ ಪತ್ರಿಕೆಯ ಸಂಪಾದಕ ಮಹಾಬಲ ಎಂ. ಕಲ್ಮಡ್ಕ ವಹಿಸಿದ್ದರು. ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಬಿ. ಭಾಗ್ಯಲಕ್ಷ್ಮಿ, ಮನೆ ಮನೆ ಕವಿಗೋಷ್ಠಿ ಬಳಗದ ಅಧ್ಯಕ್ಷ ಕಂಪ್ಲಾಪುರ ಮೋಹನ್, ಗೋಣಿಕೊಪ್ಪಲು ಪ್ರೆಸ್ ಕ್ಲಬ್ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ, ಕೊಡಗು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿದರು.
ಹಾತೂರು ಗ್ರಾ.ಪಂ. ಅಧ್ಯಕ್ಷ ಕುಪ್ಪಂಡ ಗಿರೀಶ್ ಪೂವಣ್ಣ, ವೀರಾಜಪೇಟೆ ತಾಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿ ವಿಶ್ವನಾಥ್ ಇದ್ದರು.
ರಾಷ್ಟ್ರೀಯ ರತ್ನ ಪ್ರಶಸ್ತಿ ವಿಜೇತೆ, ಛಾಯಾಗ್ರಾಹಕಿ ಸಿ. ಜಯಲಕ್ಷ್ಮಿ ಸ್ವಾಗತ, ಕವಿಗೋಷ್ಠಿ ಬಳಗ ಸಂಚಾಲಕಿ ಸಿ. ತ್ರಿವೇಣಿ ಪ್ರಾಸ್ತಾವಿಕ ಮಾತನಾಡಿದರು. ಶನಿವಾರಸಂತೆ ಪತ್ರಕರ್ತ ವಿ.ಸಿ. ಸುರೇಶ್ ಒಡೆಯನಪುರ ಕಾರ್ಯಕ್ರಮ ನಿರೂಪಿಸಿದರು.
ಜೆ. ಗುರುರಾಜರಾವ್ ಸಂಘದ ಧ್ಯೇಯೋದ್ದೇಶ ವಾಚಿಸಿದರೆ, ಹುಣಸೂರಿನ ಮಾದು ಪ್ರಸಾದ್ ವಂದಿಸಿದರು. ಕವಿಯಿತ್ರಿ ಹೇಮಲತಾ, ಮೋಹಿನಿ, ಸುಕುಮಾರ್, ಜಾಫರ್ ಆಲಿ ಮುಂತಾದವರು ಕವನ ವಾಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್