ವಿಟ್ಲ: ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೋಳಂತೂರು ಗ್ರಾಮದಲ್ಲಿ ಬುಧವಾರ ನಡೆದಿದೆ. ಬೋಳಂತೂರು ಗ್ರಾಮದ ಅಬ್ದುಲ್ ಖಾದರ್ ಎಂಬವರ ಪುತ್ರ ಮಹಮ್ಮದ್ ಮುಸ್ತಫಾ (16) ಮೃತ ವಿದ್ಯಾರ್ಥಿ. ಈತ ಬಿ.ಸಿ ರೋಡ್ನ ಟ್ಯುಟೋರಿಯಲ್ ತರಗತಿಗೆ ಹೋಗುತ್ತಿದ್ದು, ಬುಧವಾರ ಮನೆಯಲ್ಲಿ ಮಧ್ಯಾಹ್ನ ತಂದೆ ಕಲ್ಲಡ್ಕಕ್ಕೆ ತೆರಳಿದ್ದರು. ತಾಯಿ ಹೊರಗಡೆ ಹೋಗಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಲಿಕೆಯಲ್ಲಿ ಹಿಂದೆ ಇದ್ದ ಕಾರಣ ಆಗಾಗ ತಂದೆ- ತಾಯಿ ಬುದ್ಧಿವಾದ ಹೇಳುತ್ತಿದ್ದುದರಿಂದ ನೊಂದ ಈತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಕಾರು ಡಿಕ್ಕಿ; ಸವಾರ ಗಂಭೀರ
ಉಪ್ಪಿನಂಗಡಿ: ಕೊಕ್ಕಡ ಸೌತಡ್ಕ ಎಂಬಲ್ಲಿ ಬೈಕ್ ಮತ್ತು ತವೆರಾ ಕಾರು ಡಿಕ್ಕಿ ಹೊಡೆದು ಸವಾರ ಸುಜಿತ್ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ. ಗಾಯಾಳು ಸುಜಿತ್ ಕಳೆಂಜ ಗ್ರಾಮದ ಕಾಯರ್ತಡ್ಕ ಮನೆ ನಿವಾಸಿ ಎಂದು ತಿಳಿದು ಬಂದಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ. ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಲಾರಿ ಹಿಂದೆ ಚಲಿಸಿ ಕ್ಲೀನರ್ ಗಂಭೀರ
ಉಪ್ಪಿನಂಗಡಿ: ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿ ಲಾರಿ ಹಿಂದಕ್ಕೆ ಚಲಿಸಿ ಲಾರಿ ಕ್ಲೀನರ್ ಅಜೀಜ್ ಎಂಬಾತ ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಉಪ್ಪಿನಂಗಡಿ ಮಠ ನಿವಾಸಿ ಅಜೀಜ್ನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.