ಬಂಟ್ವಾಳ: ನೇತ್ರಾವತಿ ನದಿ ತಿರುಗಿಸುವುದರ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಉಸಿರು ನಿಲ್ಲಿಸುವ ಹುನ್ನಾರವಿದೆ ಎಂದು ಪರಿಸರವಾದಿ, ಕಲಾವಿದ ದಿನೇಶ್ ಹೊಳ್ಳ ಆರೋಪಿಸಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಸಂಜೆ ನಡೆದ ಸಾಹಿತ್ಯ- ಸಂಸ್ಕೃತಿ- ಪ್ರಕೃತಿ ಕುರಿತ ಗೋಷ್ಠಿಯಲ್ಲಿ 'ನಿಸರ್ಗ- ಸ್ಥಿತ್ಯಂತರ' ಬಗ್ಗೆ ಅವರು ಮಾತನಾಡಿದರು. ನೇತ್ರಾವತಿ ತಿರುವು ಯೋಜನೆಯಿಂದ ಪ್ರಕೃತಿಯಲ್ಲಿರುವ ಎಲ್ಲ ಜೀವ, ಚರಾಚರಗಳು ಸರ್ವನಾಶವಾಗಲಿವೆ. ನದಿಮೂಲದ ಬಗ್ಗೆ ಅರಿವು ಇಲ್ಲದವರು ಈ ಯೋಜನೆ ರೂಪಿಸಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಇದಕ್ಕೆ ಬೆಂಬಲವಾಗಿ ನಿಂತಿರುವುದು ದುರಂತ ಎಂದು ಹೊಳ್ಳ ವಿಷಾದಿಸಿದರು. ಯಾರದೋ ಹಿತಕ್ಕಾಗಿ ನೇತ್ರಾವತಿಯನ್ನು ಹತ್ಯೆ ಮಾಡುವ ಕ್ಷುಲ್ಲಕ ಭಾವನೆ ಸಲ್ಲದು ಎಂದ ಅವರು, ನೇತ್ರಾವತಿ ತಿರುವು ಯೋಜನೆ ಗುತ್ತಿಗೆದಾರರು ಮತ್ತು ಜನಪ್ರತಿನಿಧಿಗಳಿಗೆ ಹಣ ಮಾಡುವ ದಂಧೆಯೇ ಹೊರತು ಬಾಯಾರಿದವರಿಗೆ ನೀರು ಕೊಡುವ ಕಾಳಜಿಯಲ್ಲ ಎಂದು ಟೀಕಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕ ಡಾ.ಬಿ.ಪಿ. ಸಂಪತ್ ಕುಮಾರ್ ಮಾತನಾಡಿ, ಪ್ರಕೃತಿಯನ್ನು ಮಾನವೀಯತೆಯ ಕಣ್ಣುಗಳಿಂದ ನೋಡದೆ ಇದ್ದರೆ, ಮುಂದಿನ ಪೀಳಿಗೆಯಲ್ಲಿ ಸಂಸ್ಕೃತಿ ಬದಲಾಗಿ ವಿಕೃತಿಗಳೇ ಮೈಗೂಡಿಕೊಳ್ಳುವ ಅಪಾಯವಿದೆ ಎಂದರು.