ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಯುವತಿಗೆ ಉದ್ಯೋಗ ಒದಗಿಸಿಕೊಡುವ ನೆಪದಲ್ಲಿ ಅಪರಿಚಿತ ಪುರುಷರ ಜೊತೆ ವ್ಯವಹರಿಸಲು ಒತ್ತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯೊಂದಿಗೆ ವ್ಯವಹಾರ ಕುದುರಿಸಿದ್ದ ಇಬ್ಬರು ಪುರುಷರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಕಳೆಂಜದ 18ರ ಹರೆಯದ ಯುವತಿಯನ್ನು ನೆರೆ ಮನೆಯ ಕುಂಞಣ್ಣ ಗೌಡ ಎಂಬವರ ಪತ್ನಿ ಲಕ್ಷ್ಮಿ ಎಂಬಾಕೆ ಉಜಿರೆಯ ಬೇಕರಿಯೊಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಉಜಿರೆಗೆ ಕರೆದೊಯ್ದು ಅಪರಿಚಿತ ಗಂಡಸರ ಜೊತೆ ವ್ಯವಹರಿಸಲು ವ್ಯವಸ್ಥೆ ಕಲ್ಪಿಸಿದ ಬಗ್ಗೆ ದೂರಲಾಗಿದೆ. ಇದರಿಂದ ಆಕ್ರೋಶಿತ ಯುವತಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಳು. ಈ ಬಗ್ಗೆ ಆರೋಪಿ ಲಕ್ಷ್ಮಿಯನ್ನು ಬಂಧಿಸಿದ ಪೊಲೀಸರು, ಆಕೆಯೊಂದಿಗೆ ವ್ಯವಹಾರ ಕುದಿರಿಸಿದ್ದ ಪುರುಷರನ್ನು ಶೋಧಿಸಿದ್ದರು.
ಈ ವೇಳೆ ಮೂಲತಃ ಕೇರಳದ ನಿವಾಸಿಯಾಗಿದ್ದು, ಪ್ರಸಕ್ತ ಕಳೆಂಜದಲ್ಲಿರುವ ಕುರಿಯನ್ ಜೋಸೆಫ್ (56) ಮತ್ತು ಉಜಿರೆಯ ಶಿವಾಜಿ ನಗರ ನಿವಾಸಿ ಯೋಗೀಸ್ ಯಾನೆ ರಮೇಶ್ (38) ಎಂಬಿಬ್ಬರನ್ನು ವಶಕ್ಕೆ ತೆಗೆದು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಭಾನುವಾರ ಬಂಧಿತ ಲಕ್ಷ್ಮಿ ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.