ಹರಿಹರ: ಬಂಜಾರ ಸಮಾಜ ಉತ್ತಮ ಸಂಸ್ಕೃತಿಯನ್ನು ರೂಢಿಸಿಕೊಳ್ಳುವ ಮೂಲಕ ಮಾದರಿಯಾಗುತ್ತಿದೆ ಎಂದು ಶಾಸಕ ಬಿ.ಪಿ. ಹರೀಶ್ ನುಡಿದರು.
ಬಂಜಾರ (ಲಂಬಾಣಿ) ಸಮಾಜದ ಕುಲಗುರು ಸಂತ ಸೇವಾಲಾಲ್ ಮಹಾರಾಜ ಅವರ 274ನೇ ಜಯಂತ್ಯುತ್ಸವ ಅಂಗವಾಗಿ ಹೊನ್ನಾಳಿ ತಾ. ಸೂರಗೊಂಡನಕೊಪ್ಪದಲ್ಲಿ ಫೆ.14 ಮತ್ತು 15ರಂದು ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೂವಿನಹಡಗಲಿ ಮತ್ತು ಹರಪನಹಳ್ಳಿ ತಾಲೂಕಿನ ತಾಂಡಗಳಿಂದ ಆಗಮಿಸಿದ ಮಾಲಾದಾರಿ ಪಾದಯಾತ್ರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು ದೇವಸ್ಥಾನದ ಆವರಣದಲ್ಲಿ ಧ್ವಜಸ್ಥಂಭ ಉದ್ಘಾಟಿಸಿ ಮಾತನಾಡಿದರು.
ಬಂಜಾರ ಸಮಾಜದ ಜನತೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ತುಂಬಾ ಹಿಂದೆ ಉಳಿದಿತ್ತು. ಸಮಾಜದ ಜನತೆಯನ್ನು ಒಗ್ಗೂಡಿಸಿದ ಹಾಗೂ ಕೆಲವರಲ್ಲಿದ್ದ ವಿವಿಧ ಚಟಗಳನ್ನು ವಿಮುಖಗೊಳಿಸಿ ಧಾರ್ಮಿಕ ಹಾಗೂ ಒಗ್ಗಟ್ಟಿನ ಭಾವನೆಗಳನ್ನು ತುಂಬಿದ ಕೀರ್ತಿ ಗುರುಪೀಠದ ಸರ್ದಾರ ಸೇವಾಲಾಲ್ ಅವರಿಗೆ ಸಲ್ಲುತ್ತದೆ. ಸಮಾಜದ ಜನ ತುಂಬಾ ಶ್ರಮ ಜೀವಿಗಳು. ಬಡತನದ ಮಧ್ಯೆ ಜೀವನ ಸವೆಸುತ್ತಿದ್ದರೂ ವಿದ್ಯಾನಗರದಲ್ಲಿ ದೇವಸ್ಥಾನ ನಿರ್ಮಾಣ ಮಾಡಿರುವುದು ಸಂತೋಷ ತಂದಿದೆ. ಬಂಜಾರ ಸಮಾಜದ ಕುಲಗುರು ಸಂತ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಘೋಷಿಸುವಂತೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದರು.
ಹೆಚ್ಚಿನ ಅನುದಾನ ಮೀಸಲಿಡಿ: ಪೀಠದ ಶ್ರೀಗಳಾದ ಸರ್ದಾರ ಸೇವಾಲಾಲ್ ಮಾತನಾಡಿ, ಸಂತ ಸೇವಾಲಾಲ್ ಮಹಾರಾಜರು ಪವಾಡ ಪುರುಷರು. ಸರ್ಕಾರ, ಅವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಘೋಷಣೆ ಮಾಡಬೇಕು. ಬಂಜಾರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕೆಂದು ಒತ್ತಾಯಿಸಿದರು.
ನಗರಸಭೆ ಸದಸ್ಯ ರಮೇಶ್ ವೆಹರ್ವಾಡೆ, ಕೆಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಬಿ.ಕೆ. ಸೈಯದ್ ರೆಹಮಾನ್, ರಮೇಶ್ ಚೌಹಾಣ್, ಡಾ. ಲಕ್ಷ್ಮಣ್ ನಾಯ್ಕ, ಎಚ್.ಎಸ್. ರಾಘವೇಂದ್ರ ಪಾಪಣ್ಣ, ಹೂವಿನಹಡಗಲಿಯ ಕೊಟ್ರೇಶ್ ನಾಯ್ಕ, ಹಿರಾಲಾಲ್, ಚಂದ್ರನಾಯ್ಕ, ಬಂಜಾರ ಸಮಾಜ ತಾಲೂಕು ಘಟಕದ ಗೌರವಾಧ್ಯಾಕ್ಷ ಬಿ. ಮೋತ್ಯನಾಯ್ಕ, ಕಾರ್ಯಾಧ್ಯಕ್ಷ ಕೃಷ್ಣಕುಮಾರ್, ಸೇವಾಲಾಲ್ ಯೋಗ ಆಶ್ರಮ ಸೇವಾ ಟ್ರಸ್ಟ್ ಅಧ್ಯಕ್ಷ ಪಿ. ರಾಜನಾಯ್ಕ, ಉಪಾಧ್ಯಕ್ಷ ಮೂರ್ತ ನಾಯ್ಕ, ಖಜಾಂಚಿ ಬಾಬು ರಾಠೋಡ್, ಕಾರ್ಯದರ್ಶಿ ಮಂಜನಾಯ್ಕ ಎಚ್, ನಿರ್ದೇಶಕರಾದ ಕೋಟ್ಯನಾಯ್ಕ, ಎಚ್. ಮಂಜನಾಯ್ಕ, ಎಸ್. ಮಂಜನಾಯ್ಕ, ಸೋಮನಾಯ್ಕ, ಶಂಕರ್ ನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು.