ದಾವಣಗೆರೆ

ರಾಜಕೀಯ ನಾಯಕರಿಂದ ಸಾಮಾಜಿಕ ನ್ಯಾಯದ ಜಪ

-ನಾಗರಾಜ ಬಡದಾಳ್
ದಾವಣಗೆರೆ:
ಇದೇ ಮೊದಲ ಬಾರಿಗೆ ಜಿಲ್ಲೆಯ ಇತಿಹಾಸದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎಲ್ಲಾ ಜಾತಿ, ವರ್ಗಕ್ಕೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು, ನಾಯಕರು  ಸಾಮಾಜಿಕ ನ್ಯಾಯ ದ ಜಪಕ್ಕೆ ಮುಂದಾಗಿರುವುದು ಹೊಸ ಬೆಳವಣಿಗೆಯಾಗಿದೆ.
 ದಾವಣಗೆರೆ ಪಾಲಿಕೆ, ಹರಿಹರ ನಗರಸಭೆ, ಹರಪನಹಳ್ಳಿ ಪುರಸಭೆ, ಚನ್ನಗಿರಿ, ಹೊನ್ನಾಳಿ, ಜಗಳೂರು ಪಪಂಗೆ ಯಾವ್ಯಾವ ಸಾಮಾನ್ಯ ವರ್ಗ, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ- ಪಂಗಡ, ಮಹಿಳೆಯರಿಗೆ ಸೂಕ್ತ ಅವಕಾಶ ದೊರಕಿಸಿಕೊಡುವ ನಿಟ್ಟಿನಲ್ಲಿ ಬಹುತೇಕ ಎಲ್ಲಾ ಪಕ್ಷಗಳ ನಾಯಕರೂ ಮುಂದಾಗಿರುವುದು ಆಶ್ಚರ್ಯಕರ ಬೆಳವಣಿಗೆಯಾಗಿದೆ.
 ಮುಂಬರುವ ವಿಧಾನಸಭೆ ಚುನಾವಣೆಗಳ ಮೇಲೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪರಿಣಾಮ ಬೀರದಿದ್ದರೂ, ಸಾಮಾನ್ಯ ವರ್ಗಕ್ಕೆ ಸಿಗಬೇಕಾದ ಅವಕಾಶ ಕಲ್ಪಿಸದಿದ್ದರೆ ಅದು ಮುಂದಿನ ದಿನದಲ್ಲಿ ತಮಗೆ ಬರಬೇಕಾದ ಮತಗಳ ಮೇಲೆ, ಮತದಾರರ ಮೇಲೂ ಪರಿಣಾಮ ಉಂಟು ಮಾಡಬಹುದೆಂಬ ಆತಂಕವೂ ಈಗ ಟಿಕೆಟ್ ಹಂಚಿಕೆ ಹೊಣೆ ಹೊತ್ತಿರುವ ನಾಯಕರನ್ನು ಹಗಲು- ರಾತ್ರಿ ನಿದ್ದೆ ಮಾಡದಂತೆ ಕಾಡುತ್ತಿರುವುದೂ ಸುಳ್ಳಲ್ಲ.
 ಹೊಸ ಮುಖಗಳಿಗೆ ಅವಕಾಶ ನೀಡಬೇಕು, ಹಳೆ ಕಾರ್ಯಕರ್ತರನ್ನೂ ಕಡೆಗಣಿಸುವಂತಿಲ್ಲ. ರಾಜಕೀಯವಾಗಿ ಅವಕಾಶ ವಂಚಿತ ಸಮಾಜಗಳ ಮುಖಂಡರು, ಧಾರ್ಮಿಕ ಮುಖಂಡರೂ ರಾಜಕೀಯ ನಾಯಕರ ಮೇಲೆ ತಮ್ಮ ಸಮಾಜಕ್ಕೆ ಅವಕಾಶ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೇ, ತಾವಾಯಿತು, ತಮ್ಮ ವ್ಯವಹಾರವಾಯಿತು ಎಂಬಂತಿದ್ದ ಕೆಲವ ಜನಾಂಗದವರೂ ಈಗ ಎಚ್ಚೆತ್ತಿದ್ದು. ತಮ್ಮವರಿಗೂ ಅವಕಾಶ ನೀಡುವಂತೆ ಧ್ವನಿ ಎತ್ತುತ್ತಿರುವುದು ಆಶಾದಾಯಕ ಸಂಗತಿಯಾಗಿದೆ.
 ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕಮ್ಯುನಿಷ್ಟ್ ಜೊತೆಗೆ ಕೆಜೆಪಿ, ಬಿಎಸ್ಸಾರ್ ಕಾಂಗ್ರೆಸ್ ಜೊತೆಗೆ ಇತರೆ ಹೊಸ ಪಕ್ಷಗಳೂ ಲಗ್ಗೆ ಇಡುತ್ತಿವೆ. ಇದರಿಂದಾಗಿ ಟಿಕೆಟ್ ಆಕಾಂಕ್ಷಿಗಳು ಈ ಊರು ಇಲ್ಲದಿದ್ದರೆ, ಮುಂದಿನ ಊರು  ಎಂಬಂತೆ, ನಿಮ್ಮ ಟಿಕೆಟ್ ಇಲ್ಲದಿದ್ದರೆ, ಇನ್ನೊಂದು ಪಕ್ಷದ ಟಿಕೆಟ್ ಎಂಬ ಧಾಟಿಯಲ್ಲೇ ಟಿಕೆಟ್ ನಿರಾಕರಿಸುವವರಿಗೆ ಹೇಳುತ್ತಿದ್ದು, ಗೌಪ್ಯವಾಗೇನೂ ಉಳಿದಿಲ್ಲ. ಅಲ್ಲದೇ, ಮಹಿಳೆಯರ ಪೈಪೋಟಿಯೂ ಕಡಿಮೆ ಇಲ್ಲ.
 ಸಾಮಾನ್ಯ ವರ್ಗಕ್ಕೆ ಮೀಸಲಾದ ವಾರ್ಡ್‌ಗಳಲ್ಲಿ ಸಾಮಾನ್ಯ ವರ್ಗಕ್ಕೆ ನೀಡಬೇಕು ಎಂಬುದು ಬಹುತೇಕ ಎಲ್ಲಾ ಪಕ್ಷಗಳ ಗುರಿ. ಇದೀಗ ಎಲ್ಲರ ಕಣ್ಣು ಇರುವುದು ಸಾಮಾನ್ಯ ವರ್ಗದ ಮೇಲೆಂಬುದೂ ಸುಳ್ಳಲ್ಲ. ಕೆಲವು ನಾಯಕರಂತೂ, ಸಾಮಾನ್ಯ ವರ್ಗಕ್ಕೆ ಮೀಸಲಾದ ವಾರ್ಡ್‌ಗೆ ಅನ್ಯರಿಗೆ ಅವಕಾಶ ನೀಡುವುದು ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲೂ ತಮಗೇ ಮಾರಕವಾಗುತ್ತದೆ ಎಂಬ ಸಂಗತಿ ಅರಿತು, ಎಚ್ಚರಿಕೆ ನಡೆ ಇಡುತ್ತಿದ್ದಾರೆ.
 ಕೆಲ ವಾರ್ಡ್‌ಗಳಂತೂ ನಾಯಕರ ಪಾಲಿಕೆ ನುಂಗಲಾಗದ, ಇತ್ತ ಉಗುಳಲೂ ಆಗದ ಬಿಸಿ ತುಪ್ಪವಾಗಿದೆ ಪರಿಣಮಿಸುತ್ತಿದೆ. ಈಗ ಟಿಕೆಟ್‌ಗೆ ಅನ್ಯ ವರ್ಗಕ್ಕೆ ಸೇರಿದವರೂ ಸಾಮಾನ್ಯ ವರ್ಗಕ್ಕೆ ಕೈ ಹಾಕುತ್ತಿರುವುದು ಮತದಾರರಲ್ಲೂ ಇರುಸು ಮುರುಸಿಗೆ ಕಾರಣವಾಗಿದೆ. ಆದರೆ, ಜಿಲ್ಲೆಯಲ್ಲಿ ಪ್ರಭಾವಿ ಪಕ್ಷವಾದ ಬಿಜೆಪಿ, ಕಾಂಗ್ರೆಸ್‌ಗೆ ಸೆಡ್‌ಡು ಹೊಡೆಯುವಂತೆ ಒಂದು ಕಡೆ ಕೆಜೆಪಿ, ಮತ್ತೊಂದು ಕಡೆ ಜೆಡಿಎಸ್, ಮಗದೊಂದು ಕಡೆ ಬಿಎಸ್ಸಾರ್ ಕಾಂಗ್ರೆಸ್ ಪ್ರಮುಖ ಪಕ್ಷಕ್ಕೆ ಕಾಡುತ್ತಿವೆ. ಅಲ್ಲಿ ಅವಕಾಶ ಸಿಗದಿದ್ದರೆ, ಇಲ್ಲಿ ಬಾಗಿಲು ತೆಗೆದಿದೆ ಎಂಬುದೂ ಆಕಾಂಕ್ಷಿಗಳಿಗೆ ಗೊತ್ತಿರುವ ಸಂಗತಿಯಾಗಿದೆ.
 ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿ ಎಂಬುದಾಗಿ ಬಿಜೆಪಿ ಕಾಯುತ್ತಿದ್ದರೆ, ಬಿಜೆಪಿ ಯಾವ ಅಸ್ತ್ರ ಪ್ರಯೋಗಿಸುತ್ತದೋ ಎಂಬುದನ್ನು ಕಾಂಗ್ರೆಸ್ ಕಾದು ನೋಡುತ್ತಿದೆ. ಎರಡೂ ಪಕ್ಷಗಳ ಟಿಕೆಟ್ ಹಂಚಿಕೆ ನೋಡಿಕೊಂಡು, ಅದರಲ್ಲೂ ಪ್ರಭಾವಿಗಳು, ಬಂಡಾಯವೇಳುವ ಅಭ್ಯರ್ಥಿಗಳಿಗೆ ಗಾಳ ಹಾಕಲು ಹೊಸ ಪಕ್ಷ ಸಜ್ಜಾಗುತ್ತಿವೆ. ಒಟ್ಟಾರೆ, ಪ್ರಮುಖ ಪಕ್ಷಗಳಿಗಂತೂ ಯಾಕಾದರೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಯು ವಿಧಾನಸಭೆ ಚುನಾವಣೆಗೆ ಮುಂಚೆ ಬಂದಿತೋ ಎಂಬುದಾಗಿ ಹಿತೈಷಿಗಳಲ್ಲಿ ಬೇಸರ ವ್ಯಕ್ತಪಡಿಸುತ್ತಿರುವುದೂ ಗೌಪ್ಯವಾಗೇನೂ ಉಳಿದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ