ದಾವಣಗೆರೆ

ಪಪಂಗೆ 25 ಎಕರೆ ಗೋಮಾಳ

ನರಸಿಂಹರಾಜಪುರ: ಪಟ್ಟಣದಲ್ಲಿ ಆಶ್ರಯ ಬಡಾವಣೆ ನಿರ್ಮಿಸಲು ಡಿಪೋ ಬಳಿ ಇರುವ 77 ಎಕರೆ ಗೋಮಾಳ ಜಾಗದಲ್ಲಿ 25 ಎಕರೆ ಜಾಗವನ್ನು ಪಟ್ಟಣ ಪಂಚಾಯ್ತಿಗೆ ಮಂಜೂರು ಮಾಡಿಸಿ ಕೊಡುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲು ಪಟ್ಟಣ ಪಂಚಾಯ್ತಿ ನಿರ್ಧರಿಸಿದೆ.
ಸೋಮವಾರ ಪಪಂ ಅಧ್ಯಕ್ಷೆ ಲೇಖಾವಸಂತ್ ಅಧ್ಯಕ್ಷತೆಯಲ್ಲಿ ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಆಶ್ರಯ ಬಡಾವಣೆ ನಿರ್ಮಿಸಲು ಜಾಗ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆ ತೀರ್ಮಾನಿಸಿತು.
ಪಟ್ಟಣದ ಪೌರ ಕಾರ್ಮಿಕರು 70-80 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಅವರಿಗೆ ಕಾಯಂ ಹಕ್ಕು ಪತ್ರ ಕೊಡಬೇಕು ಎಂದು ಪಪಂ ಸದಸ್ಯ ಲಕ್ಷ್ಮಣ ಶೆಟ್ಟರು ವಿಷಯ ಪ್ರಸ್ತಾಪಿಸಿದರು. ಈ ಬಗ್ಗೆ ಚರ್ಚೆ ನಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆ ತೀರ್ಮಾನಿಸಿತು.
ಬೋರ್‌ವೆಲ್ ಬಗ್ಗೆ ಮಾಹಿತಿ: ಪಪಂ ವ್ಯಾಪ್ತಿಯಲ್ಲಿ ಹೊಸದಾಗಿ ತೆಗೆಸಿದ ಬೋರ್‌ವೆಲ್ ಬಗ್ಗೆ ಮಾಹಿತಿ ನೀಡಬೇಕು ಎಂದು ಸದಸ್ಯ ಸುಕುಮಾರ್ ಒತ್ತಾಯಿಸಿದರು. ಮುಖ್ಯಾಧಿಕಾರಿ ಸಭೆಗೆ ಮಾಹಿತಿ ನೀಡಿ, ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗಾಗಿ ಟಾಸ್ಕ್‌ಫೋರ್ಸ್ ಯೋಜನೆಯಡಿ ರು. 10 ಲಕ್ಷ ಮಂಜೂರಾಗಿದ್ದು 6 ಕೊಳವೆ ಬಾವಿಗಳನ್ನು ತೆಗೆಯಲಾಗಿದೆ ಎಂದರು.
ಪಪಂ ಅಧ್ಯಕ್ಷೆ ಲೇಖಾ ವಸಂತ್ ಮಾತನಾಡಿ, ಮುಂದಿನ ಸಭೆಯಲ್ಲಿ ಇಂಜಿನಿಯರ್ ಅವರು ಈ ವರ್ಷದ ಕೊಳವೆ ಬಾವಿಗೆ ಸಂಬಂಧಪಟ್ಟ ಎಲ್ಲಾ ವಿವರ ಸಭೆಗೆ ನೀಡಬೇಕು ಎಂದು ಸೂಚಿಸಿದರು.
ಆಧುನಿಕ ಮೀನು ಮಾರುಕಟ್ಟೆ: ಪಟ್ಟಣದ ಮೀನು ಮಾರುಕಟ್ಟೆಯನ್ನು ಆಧುನೀಕರಣಗೊಳಿಸಲು ಹಾಗೂ ಹೆಚ್ಚುವರಿಯಾಗಿ ಆಧುನಿಕ ಮೀನು ಮಾರುಕಟ್ಟೆ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ತರಕಾರಿ ಮಾರುಕಟ್ಟೆ ಸಮೀಪದಲ್ಲೇ ಆಧುನಿಕ ಮೀನು ಮಾರುಕಟ್ಟೆ ನಿರ್ಮಿಸಬಹುದು ಎಂಬ ಸಲಹೆಗೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ತರಕಾರಿ ಕೊಳ್ಳಲು ಬರುವ ಸಸ್ಯಹಾರಿಗಳಿಗೆ  ತೊಂದರೆಯಾಗುತ್ತದೆ ಎಂದು ಕೆಲವು ಸದಸ್ಯರು ಅಭಿಪ್ರಾಯ ಪಟ್ಟರು. ಮುಂದೆ ಸಾರ್ವಜನಿಕರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳಲು ಸಭೆ ತೀರ್ಮಾನಿಸಿತು.
ಸದ್ಯಕ್ಕೆ ಯಾವುದೇ ತೀರ್ಮಾನಕ್ಕೆ ಬರದೆ ಮುಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಯಿತು.   
ನಿವೇಶನ ಕೊಡುವುದು ಬೇಡ: ದೇವರಾಜು ಅರಸು ಭವನ ನಿರ್ಮಾಣಕ್ಕಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ನಿವೇಶನ ನೀಡಬೇಕೆಂಬ ಬಗ್ಗೆ ಚರ್ಚೆ ನಡೆದು ಸದ್ಯಕ್ಕೆ ನಿವೇಶನ ನೀಡುವುದು ಬೇಡ ಎಂದು ಸಭೆ ತೀರ್ಮಾನಿಸಿತು.
ಪಟ್ಟಣದ ಮುಖ್ಯ ಬಸ್ ನಿಲ್ದಾಣದದಿಂದ ಹಳೇ ಮಂಡಗದ್ದೆ ವೃತ್ತದವರೆಗೆ ಎಲ್ಲ ರೀತಿಯ ವಾಹನಗಳ ನಿಲುಗಡೆ ನಿಷೇಧ ಮಾಡಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದ ಬಗ್ಗೆ ಸಭೆ ಚರ್ಚೆ ನಡೆಯಿತು. ವಾಹನ ನಿಲುಗಡೆ ನಿಷೇಧದಿಂದ ವರ್ತಕರಿಗೆ ತಮ್ಮ ವಾಹನ ನಿಲ್ಲಿಸಲು ತೊಂದರೆಯಾಗುತ್ತಿದೆ ಎಂದು ಮನವಿ ಸಲ್ಲಿಸಿದ್ದಾರೆ. ಪೂರ್ಣ ನಿಲುಗಡೆ ನಿಷೇಧದ ಬದಲು ವಾರದಲ್ಲಿ 3 ದಿನ ರಸ್ತೆಯ ಬಲ ಭಾಗ ಮತ್ತು ವಾರದಲ್ಲಿ 3 ದಿನ ಎಡ ಭಾಗದಲ್ಲಿ ವಾಹನ ನಿಲ್ಲಿಸುವುದು ಸೂಕ್ತ ಎಂದು ಸಭೆ ತೀರ್ಮಾನಿಸಿತು.
40 ಮನೆ ಗುರಿ: ರಾಜೀವ್‌ಗಾಂಧಿ ವಸತಿ ನಿಗಮದಿಂದ ಪಟ್ಟಣ ವ್ಯಾಪ್ತಿಗೆ 40 ಮನೆಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದು ತಾಪಂ ರಾಜೀವ್‌ಗಾಂಧಿ ವಸತಿ ನಿಗಮ ಅಧಿಕಾರಿ ಷಡಕ್ಷರಿ ಮಾಹಿತಿ ನೀಡಿದರು. ಬಿಪಿಎಲ್ ಕುಟುಂಬದವರಿಗೆ ಮನೆ ಕಟ್ಟಿಕೊಳ್ಳಲು ರು. 1.20 ಲಕ್ಷ ಸಹಾಯ ಧನ ನೀಡಲಾಗುತ್ತದೆ ಎಂದರು. ಪಪಂ ಅಧ್ಯಕ್ಷೆ ಲೇಖಾ ವಸಂತ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಬ್ದುಲ್‌ಸುಬಾನ್, ಮುಖ್ಯಾಧಿಕಾರಿ ರಾಮರುದ್ರಯ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!