ಹೊನ್ನಾಳಿ: ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರಿಗೆ ಪಟ್ಟಣದಲ್ಲಿ ವಾಹನ ನಿಲ್ಲಿಸಿಕೊಳ್ಳಲು ಸೂಕ್ತ ನಿಲ್ದಾಣವಿಲ್ಲ. ತಾಲೂಕು ಅಡಳಿತ ಹಾಗೂ ಪಟ್ಟಣ ಪಂಚಾಯಿತಿಯವರು ಸೂಕ್ತ ಜಾಗ ನೀಡಬೇಕು ಎಂದು ಟ್ಯಾಕ್ಸಿ ಹಾಗೂ ಇತರೆ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಸತ್ತಿಗೆ ಸುರೇಶ್ ಮನವಿ ಸಲ್ಲಿಸಿದ್ದಾರೆ.
ಶುಕ್ರವಾರ ಸಂಘದವತಿಯಿಂದ ನೂರಾರು ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ಮೆರವಣಿಯೊಂದಿಗೆ ತಾಲೂಕು ಕಚೇರಿಗೆ ಅಗಮಿಸಿ ತಹಶೀಲ್ದಾರ್ ರೇಷ್ಮಾ ಹಾನಗಲ್ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ. ಪರಮೇಶ್ವರಪ್ಪ ಅವರಿಗೆ ಮನವಿ ಅರ್ಪಿಸಿದರು. ನಂತರ ಮಾತನಾಡಿದ ಸುರೇಶ್, ಟ್ಯಾಕ್ಸಿ ನಿಲ್ದಾಣ ಇಲ್ಲದೆ ಅನಿವಾರ್ಯವಾಗಿ ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಬೇಕಾಗಿದೆ. ಇದರಿಂದ ಸಾಕಷ್ಟು ಟ್ರಾಫಿಕ್ ಸಂಭವಿಸುತ್ತಿದ್ದು ಸಾರ್ವಜನಿಕರು ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಮತ್ತು ಸೂಕ್ತ ರಕ್ಷಣೆಯನ್ನು ತಾಲೂಕು ಆಡಳಿತ ಒದಗಿಸಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ರೇಷ್ಮಾ ಹಾನಗಲ್ ಟ್ಯಾಕ್ಸಿ ಮತ್ತು ಇತರೆ ವಾಹನಗಳ ಮಾಲೀಕರು ಹಾಗೂ ಚಾಲಕರ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಿ ಇದಕ್ಕೆ ಸಂಬಂಧಪಟ್ಟ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವಾಗಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಟ್ಯಾಕ್ಸಿ ಹಾಗೂ ಇತರೆ ವಾಹನಗಳ ಮಾಲೀಕರು, ಚಾಲಕರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆಯ ಬಿದರಗಡ್ಡೆ ಷಡಾಕ್ಷರಿ, ವಿನಯ್, ವಿಜಯ್ ಅವರು ಹಾಗೂ ಟ್ಯಾಕ್ಸಿ ಮಾಲೀಕರು, ಚಾಲಕರ ಸಂಘದ ಉಪಾಧ್ಯಕ್ಷ ಎಚ್.ಪಿ. ಸುರೇಶ್, ರಮೇಶ್, ಸಂಘಟನಾ ಕಾರ್ಯದರ್ಶಿ ಹಾಲೇಶ್ ಹಾಗೂ ಗೌರವಾಧ್ಯಕ್ಷ ರಂಗಪ್ಪ ಇತರರು ಇದ್ದರು.