ದಾವಣಗೆರೆ: ದೇಶದ ಪರಿಸ್ಥಿತಿ ಕೆಟ್ಟಿದೆ ಎಂಬ ಮನೋಭಾವ ಕೈಬಿಟ್ಟು, ಮೊದಲು ನಾವು ನೈತಿಕ ನೆಲೆಗಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಹೇಳಿದರು.
ತಾಲೂಕಿನ ಪಲ್ಲಾಗಟ್ಟೆಯ ಸಿದ್ದಮ್ಮ ಗ್ರಾಮೀಣ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಸಾಣೇಹಳ್ಳಿ ಶಿವಾನುಭವ ಸಮಿತಿ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದೇಶದ ಸ್ಥಿತಿ ಚೆನ್ನಾಗಿಯೇ ಇರುತ್ತದೆ. ಅದಕ್ಕೆ ನಾವು ಸರಿಯಾಗಿರಬೇಕೆಂಬ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.
ಸಂಕಲ್ಪ ಮಾಡಿ: ಪ್ರತಿ ಹಳ್ಳಿಯಲ್ಲೂ ಒಳ್ಳೆಯವರೇ ಇದ್ದಾರೆ. ಶಾಲಾ ಶಿಕ್ಷಣದ ಹಂತದಲ್ಲೇ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಾನೆಂದಿಗೂ ಭ್ರಷ್ಟನಾಗುವುದಿಲ್ಲ ಎಂದು ಸಂಕಲ್ಪ ಮಾಡಬೇಕು. ಅದರಂತೆ ಜೀವನವಿಡೀ ಬಾಳಬೇಕು. ನೈತಿಕ ನೆಲೆಗಟ್ಟಿನ ಸಮಾಜ ನಿರ್ಮಾಣದ ಸದುದ್ದೇಶದಿಂದಲೇ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಶಿವಾನುಭವ ಸಮಿತಿ ಆಯೋಜಿಸಿದೆ ಎಂದು ತಿಳಿಸಿದರು.
ಶ್ರಾವಣದ ಒಂದು ತಿಂಗಳ ಅವಧಿಯಲ್ಲಿ ಪ್ರತಿದಿನ ವಿವಿಧ ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಮನಸ್ಸು ಮತ್ತು ಬೀದಿ ಎರಡರ ಶುದ್ಧೀಕರಣವಾಗಬೇಕಾದ ಅಗತ್ಯವಿದೆ ಎಂದರು ಸಾಧಕರ ಸಂದೇಶ: ಗಾಂಧೀಜಿ ಸರಳ ಜೀವನ, ಪ್ರಾಮಾಣಿಕತೆಯಿಂದಲೇ ಮಹಾತ್ಮರೆನಿಸಿಕೊಂಡರು. ಬಸವಾದಿ ಶರಣರು, ವಚನಕಾರರು ಸರಳ ಜೀವನ ನಡೆಸಿದ್ದು, ಅಂತಹ ಸಾಧಕರ ಸಂದೇಶ ಪ್ರತಿಯೊಬ್ಬರಿಗೂ ತಲುಪಿಸಿ, ಜೀವನ ಸಾರ್ಥಕ ಪಡಿಸಿಕೊಳ್ಳುವುದು ಕಾರ್ಯಕ್ರಮದ ಸಂಕಲ್ಪವಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಮರುಳಸಿದ್ಧರು ನಡೆದಾಡಿದ ಪುಣ್ಯಭೂಮಿ ಈ ನಾಡು. ಪಲ್ಲಾಗಟ್ಟೆ ಗ್ರಾಮ ಪಂಡಿತಾರಾಧ್ಯ ಶಿವಾಚಾರ್ಯರ ಪಾದಸ್ಪರ್ಶದಿಂದ ಪುನೀತವಾಯಿತು. ಗ್ರಾಮದಲ್ಲಿ ಎಲ್ಲಾ ಜಾತಿ, ವರ್ಗ, ಧರ್ಮೀಯರು ಸೌಹಾರ್ದತೆಯಿಂದ ಬಾಳುತ್ತಿದ್ದು, ಇತರರಿಗೂ ಈ ಊರು ಮಾದರಿಯಾಗಿದೆ ಎಂದರು.
ಬ್ಯಾಂಕ್ ನಿವೃತ್ತ ಅಧಿಕಾರಿ ಎಸ್.ಟಿ. ಶಾಂತಗಂಗಾಧರ ವಚನಕಾರ್ತಿ ಗಂಗಾಬಿಕೆ ಕುರಿತು ಉಪನ್ಯಾಸ ನೀಡಿದರು.
ಜಿಪಂ ಸದಸ್ಯೆ ಜಯಲಕ್ಷ್ಮಿ ಮಹೇಶ, ತಾಪಂ ಅಧ್ಯಕ್ಷೆ ಸವಿತಾ ಪ್ರಕಾಶ, ಮಾಜಿ ಅಧ್ಯಕ್ಷ ಶ್ರೀನಿವಾಸ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್ .ಸಿ. ಮಹೇಶ, ಬಿಜೆಪಿ ಮುಖಂಡ ಎಸ್.ಕೆ. ಮಂಜುನಾಥ, ಗ್ರಾಪಂ ಅಧ್ಯಕ್ಷ ನಿರ್ಮಲ ರಾಜಪ್ಪ, ಉಪಾಧ್ಯಕ್ಷ ರಂಗಪ್ಪ, ಎಸ್.ಆರ್.ಎಚ್.ಎಸ್. ಸಲಹಾ ಸಮಿತಿ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ನಾಗರಾಜಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜಯ್ಯ, ಎಪಿಎಂಸಿ ಸದಸ್ಯ ಕೆಂಚನಗೌಡ ಮೊದಲಾದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.