ದಾವಣಗೆರೆ: ಜಾಗತೀಕರಣದ ತಲ್ಲಣಗಳಿಂದ ಮನುಷ್ಯ ಮನುಷ್ಯರ ಮಧ್ಯೆ ಮಾನವೀಯ ಸಂಬಂಧ ಕಣ್ಮರೆಯಾಗುತ್ತಿದ್ದು, ಯುವ ಜನಾಂಗಕ್ಕೆ ಸ್ಫೂರ್ತಿಯಾಗುವ ಸಕಾರಾತ್ಮಕ ಮಾದರಿಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಬಿಳಿಗಿರಿರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಸಂಸ್ಥಾಪಕ ಸದಸ್ಯ ಜಿ.ಎಸ್. ಜಯದೇವ ವಿಷಾದ ವ್ಯಕ್ತಪಡಿಸಿದರು.
ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ನಲ್ಲಿ ಮಂಗಳವಾರ ಪ್ರಚಲಿತ ಸಮಸ್ಯೆಯಾದ ಅತ್ಯಾಚಾರ ನಿಯಂತ್ರಣ ವಿಷಯ ಕುರಿತ ಸಮಾಲೋಚನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹೆತ್ತವರು ಉದ್ಯೋಗಿಗಳಾದ ಪರಿಣಾಮ ಮಕ್ಕಳು ಇಂದು ಕೌಟುಂಬಿಕ ಪ್ರೀತಿ, ಹೆತ್ತವರ ಆರೈಕೆಯಿಂದಲೂ ವಂಚಿತರಾಗುತ್ತಿದ್ದಾರೆ ಎಂದರು. ಪರಿಣಾಮ ಮಕ್ಕಳಲ್ಲಿ ಆತ್ಮವಿಶ್ವಾಸ ಕುಗ್ಗಿ, ನಕಾರಾತ್ಮಕ ಭಾವನೆ ಪ್ರಚೋದಿಸುವಂತಾಗಿದೆ. ಇಂತಹ ಸಂಕೀರ್ಣ ವಾತಾವರಣದಲ್ಲಿ ಅತ್ಯಾಚಾರದಂತಹ ದುಷ್ಕೃತ್ಯ ದಿನಬೆಳಗಾದರೆ ಸುದ್ದಿಯಾಗಿ ಬಿತ್ತರಗೊಳ್ಳುತ್ತಿವೆ. ಇದಕ್ಕೆಲ್ಲಾ ಅರಿವಿನ ಕೊರತೆಯೂ ಕಾರಣ. ವೈಯಕ್ತಿಕ ಶುದ್ಧೀಕರಣವೇ ಇದಕ್ಕೆಲ್ಲಾ ಪರಿಹಾರವಾಗಿದೆ ಎಂದು ಅವರು ತಿಳಿಸಿದರು.
ಟ್ರಸ್ಟ್ ಗೌರವಾಧ್ಯಕ್ಷ ಪ್ರೊ. ಬಿ.ವಿ. ವೀರಭದ್ರಪ್ಪ, ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ, ಸಾಹಿತಿ
ನಾಗರಾಜ ಸಿರಿಗೆರೆ, ಡಾ. ಆನಂದ ಋಗ್ವೇದಿ, ಗಂಗಾಧರಯ್ಯ ಹಿರೇಮಠ ಇತರರು ಭಾಗವಹಿಸಿದ್ದರು.