ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 1
ಜಿಲ್ಲಾಡಳಿತದ ಬೇಜವಾಬ್ದಾರಿತನ, ಮಹಾನಗರ ಪಾಲಿಕೆಯ ನುಣುಚಿಕೊಳ್ಳುವ ಕಾರ್ಯವೈಖರಿಯಿಂದಾಗಿ ಇಂದಿರಾ ಗಾಜಿನ ಮನೆಯಲ್ಲಿನ ಪುಟಾಣಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 11 ವರ್ಷದ ಶಾಲಾ ಬಾಲಕನೊಬ್ಬ ಯಮನ ಪಾದ ಸೇರುವಂತಾಯಿತು.
ಇಂದಿರಾ ಗಾಜಿನ ಮನೆಯಲ್ಲಿನ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಜ. 31ರಂದು ಮಧ್ಯಾಹ್ನ ನಡೆದ ಈ ಘಟನೆ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ಈ ಘಟನೆಗೂ ಮುನ್ನ ನೆನಪಿಸಿಕೊಳ್ಳಬೇಕಾದ ಸಂಗತಿಯೆಂದರೆ, ಗ್ಲಾಸ್ಹೌಸ್ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಜಿಲ್ಲಾಡಳಿತ ವಹಿಸಿಕೊಂಡಿದೆ. ಇಂದಿರಾ ಗಾಜಿನ ಮನೆ ಆವರಣದ ನವೀಕರಣ ಕಾಮಗಾರಿ ಕಳಪೆ ಮಟ್ಟದಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದರು. ಆರೋಪಕ್ಕೆ ಘಟನೆ ಪುಷ್ಟಿ ನೀಡಿದೆ.
ಈ ಹಿಂದೆಯೂ: ಆರು ತಿಂಗಳ ಹಿಂದೊಮ್ಮೆ ಈ ಪುಟಾಣಿ ರೈಲು ಉರುಳಿ ಬಿದ್ದ ಪರಿಣಾಮ 15ಕ್ಕೂ ಹೆಚ್ಚು ಪುಟಾಣಿಗಳಿಗೆ ಅಲ್ಪಸ್ವಲ್ಪ ಗಾಯವಾಗಿತ್ತು. ಆದರೆ, ಯಾರೊಬ್ಬರಿಗೂ ಮಾರಣಾಂತಿಕ ಗಾಯವಾಗದಿದ್ದರ ಪರಿಣಾಮ ಈ ಘಟನೆ ಪ್ರಚಾರಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. ಮಹಾತ್ಮಾ ಗಾಂಧಿ ಉದ್ಯಾನವನದಲ್ಲಿ ನಿತ್ಯವೂ ಒಂದಿಲ್ಲೊಂದು ಅಹಿತಕರ ಘಟನೆಗಳು ಸಂಭವಿಸುತ್ತಲೇ ಇದ್ದರೂ ಜಿಲ್ಲಾಡಳಿತ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಇರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯೇ ಸರಿ.
ಕಳಪೆ ಕಾಮಗಾರಿ: ಇಂದಿರಾ ಗಾಜಿನ ಮನೆ ಆವರಣದ ನವೀಕರಣದ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರ ಕೈಗೊಂಡಿದೆ. ಈ ಕೇಂದ್ರದಿಂದ ನಡೆದ ಬಹುತೇಕ ಕಾಮಗಾರಿಗಳು ಕಳಪೆಯಾಗಿವೆ ಎಂಬ ಆರೋಪ ಪಾಲಿಕೆ ಸಾಮಾನ್ಯ ಸಭೆಯಲ್ಲಿಯೂ ಸಾಕಷ್ಟು ಸಲ ಪ್ರತಿಧ್ವನಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ನಂತರ, ಮೇಯರ್ ಡಾ. ಪಾಂಡುರಂಗ ಪಾಟೀಲ ನಿರ್ಮಿತಿ ಕೇಂದ್ರದ ವತಿಯಿಂದ ನಡೆದಿರುವ ಕಾಮಗಾರಿಯ ಬಗ್ಗೆ ಪರಿಶೀಲನೆ ನಡೆಸಿ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸುವಂತೆ ಸಾಮಾನ್ಯ ಸಭೆಯಲ್ಲಿ ಆದೇಶ ನೀಡಿದ್ದರು.
ತಪ್ಪಿದ ದುರಂತ: ನಿರ್ಮಿತಿ ಕೇಂದ್ರದ ವತಿಯಿಂದ ಆಗತಾನೇ ನಿರ್ಮಿಸಲಾಗಿದ್ದ ಇಂದಿರಾ ಗಾಜಿನ ಮನೆಯ ಕಂಪೌಂಡ್ ಗೋಡೆ ಮಳೆಯ ಹೊಡೆತಕ್ಕೆ ಮುಗ್ಗರಿಸಿ, ಪುಟಾಣಿ ರೈಲಿನ ಮೇಲೆ ಬಿದ್ದಿತ್ತು. ಇದರಿಂದಾಗಿ ಪುಟಾಣಿ ರೈಲು ತಲೆಕಳೆಗಾಗಿ ಬಿದಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಪ್ರಾಣಾಪಾಯ ಸಂಭವಿಸಿರಲ್ಲಿಲ್ಲ. ಘಟನೆಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಣಗೊಂಡ ಸುದ್ದಿಯಿಂದ ತಬ್ಬಿಬ್ಬಾದ ಜನತೆ ಕೆಲ ದಿನ ಇಂದಿರಾಗಾಜಿನ ಮನೆಯತ್ತಲೂ ಹಾಯ್ದಿರಲಿಲ್ಲ! ಇಂದಿರಾ ಗಾಜಿನ ಮನೆಯ ಮಹಾತ್ಮಾಗಾಂಧಿ ಉದ್ಯಾನವನದಲ್ಲಿ ಪುಟಾಣಿ ರೈಲಿನ ಮಜಾವನ್ನು ಚಿಕ್ಕಮಕ್ಕಳಗಿಂತಲೂ ಹೆಚ್ಚಾಗಿ ವಯಸ್ಕರರೇ ಸವಿಯುತ್ತಿದ್ದಾರೆ ಎಂದು ಗೊತ್ತಾಗಿದೆ. ಪುಟಾಣಿ ರೈಲು ಓಡಿಸುವ ಗುತ್ತಿಗೆ ಪಡೆದಿರುವವರು ಹಣದಾಸೆಗೆ ವಯಸ್ಕರರಿಗೆ ಪುಟಾಣಿ ರೈಲಿನಲ್ಲಿ ಮುಕ್ತ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರೇಮಿಗಳಿಗೆ ಈ ಪುಟಾಣಿ ರೈಲು ಅಂದರೆ ಅತ್ಯಂತ ಪ್ರೀತಿಯಂತೆ!.
ಉಗ್ರ ಹೋರಾಟ: ಎಚ್ಚರಿಕೆ: ಇಂದಿರಾ ಗಾಜಿನ ಮನೆಯಲ್ಲಿ ಮಹಾತ್ಮಾ ಗಾಂಧಿ ಉದ್ಯಾನವನದಲ್ಲಿರುವ ಪುಟಾಣಿ ರೈಲಿನಲ್ಲಿ ಜೀವ ಕಳೆದುಕೊಂಡು ವಿದ್ಯಾರ್ಥಿ ಶುಭಂನ ಕುಟುಂಬಕ್ಕೆ ಮುಖ್ಯಮಂತ್ರಿಗಳ ನಿಧಿಯಿಂದ ರು. 10 ಲಕ್ಷ ಪರಿಹಾರ ನೀಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ. ಸಮಿತಿ ಪದಾಧಿಕಾರಿಗಳು ಆಸ್ಪತ್ರೆಗೆ ಧಾವಿಸಿ ವಿದ್ಯಾರ್ಥಿಯ ಶವವನ್ನು ಇಂದಿರಾ ಗಾಜಿನ ಮನೆ ಎದುರಿಗೆ ತೆಗೆದುಕೊಂಡು ಬಂದು ಮಿಂಚಿನ ಪ್ರತಿಭಟನೆ ನಡೆಸಿದರು. ಪುಟಾಣಿ ರೈಲು ನಿರ್ವಹಣೆಗೆ ಸರಿಯಾದ ಸಿಬ್ಬಂದಿ ಇಲ್ಲದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದೂ ಆರೋಪಿಸಿದರು. ಸಮಿತಿಯ ಮಾರುತಿ ದೊಡ್ಡಮನಿ, ಸಂತೋಷ ಅರಕೇರಿ, ಪರಶುರಾಮ ಅರಕೇರಿ, ಮಂಜುನಾಥ ಸೋನಾವನೆ, ಪ್ರಕಾಶ ಕಲ್ಲಕ್ಕನವರ, ರಾಜು ತಡಸ, ಸಂತೋಷ ಸಂಶಿ, ವಾಸೀಮ ಆಧೋನಿ, ಪರುಶುರಾಮ ನರಗುಂದ ಆಗ್ರಹಿಸಿದರು.
ಕೆಲದಿನಗಳ ಕಾಲ ಸ್ಥಗಿತ
ಇಂದಿರಾ ಗಾಜಿನ ಮನೆಯಲ್ಲಿ ಸಂಭವಿಸಿದ ಅವಘಡದಿಂದಾಗ ವಿದ್ಯಾರ್ಥಿ ಶುಭಂ ಪ್ರಾಣ ಕಳೆದುಕೊಂಡಿರುವುದರಿಂದ ಘಟನೆಯ ಸಮಗ್ರ ತನಿಖೆ ನಡೆಸುವವರೆಗೂ 'ಪುಟಾಣಿ ರೈಲು' ಪ್ರಯಾಣವನ್ನು ಕೆಲದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಸದ್ಯ ಬೆಂಗಳೂರಿನಲ್ಲಿದ್ದು, ನಗರಕ್ಕೆ ಆಗಮಿಸಿದ ನಂತರ ಘಟನೆ ಯಾವ ರೀತಿಯಾಗಿ ಸಂಭವಿಸಿತು? ಯಾರಿಂದ ಅಚಾತುರ್ಯ ನಡೆದಿದೆ ಎಂಬ ಮಾಹಿತಿ ಕಲೆ ಹಾಕಿದ ನಂತರವಷ್ಟೇ ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪುಟಾಣಿ ರೈಲು ಪ್ರಯಾಣವನ್ನು ಕೆಲದಿನಗಳ ಕಾಲ ಸ್ಥಗಿತಗೊಳಿಸುವಂತೆ ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ ಹಾಗೂ ತಹಸೀಲ್ದಾರ್ ಜಯಶ್ರೀ ಶಿಂತ್ರಿ ಅವರಿಗೂ ಸೂಚಿಸಲಾಗಿದೆ ಎಂದೂ ಶುಕ್ಲಾ ತಿಳಿಸಿದ್ದಾರೆ.
ರು. 1 ಲಕ್ಷ ಪರಿಹಾರ
ಘಟನೆಯನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಗಮನಕ್ಕೆ ತರಲಾಗಿದ್ದು, ಮೃತ ಬಾಲಕನ ಕುಟುಂಬಕ್ಕೆ ರು. 1 ಲಕ್ಷ ಪರಿಹಾರ ನೀಡುವುದಾಗಿ ಸಿಎಂ ತಮಗೆ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆಯೂ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಡಿಸಿ ಶುಕ್ಲಾ ಹಾಗೂ ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ ತಿಳಿಸಿದ್ದಾರೆ.