ಧಾರವಾಡ: ಹೆಣ್ಣೆಂಬ ಕಾರಣದಿಂದ ಜನ್ಮ ನೀಡಿದ ತಂದೆಯಿಂದಲೇ ಹಲ್ಲೆಗೊಳಗಾಗಿ 45 ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ವರ್ಷದ ಹೆಣ್ಣು ಮಗು ಮಂಗಳವಾರ ರಾತ್ರಿ ಇಹಲೋಕ ತ್ಯಜಿಸಿದೆ.
ತಾಲೂಕಿನ ಮುಗದ ರಮೇಶ ಸುಣಗಾರ ತನ್ನ ಮಗಳಾದ ರಾಮೇಶ್ವರಿ ಉರ್ಫ್ ಮೇರಿ ಮೇಲೆ ಡಿ.20ರಂದು ಪತ್ನಿ ಲಕ್ಷ್ಮೀ ಮನೆಯಲ್ಲಿ ಇಲ್ಲದಿದ್ದಾಗ ತೀವ್ರತರ ಹಲ್ಲೆ ನಡೆಸಿದ್ದ. ಮಗುವನ್ನು ಎರಡು ಬಾರಿ ನೆಲಕ್ಕೆ ಅಪ್ಪಳಿಸಿ ಗಾಯಗೊಳಿಸಿದ್ದ. ಮರದ ಕಟ್ಟಿಗೆ ಹಾಗೂ ಮೊಳೆಗಳಿಂದ ಎದೆ, ಹೊಟ್ಟೆ, ಬೆನ್ನು, ಕೈ ಮತ್ತು ಕಾಲಿಗೆ ಚುಚ್ಚಿ ಗಾಯಗೊಳಿಸಿ ತನ್ನ ವಿಕೃತಿ ಮೆರೆದಿದ್ದ. ತಾಯಿ ಲಕ್ಷ್ಮೀ ಮನೆಗೆ ಬಂದು ಮಗುವಿನ ಪರಿಸ್ಥಿತಿ ನೋಡಿ ಗ್ರಾಮದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಡಿ.21ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆರೋಪಿ ರಮೇಶನಿಗೆ ರವಿ ಎಂಬ ಮಗನಿದ್ದು, ಎರಡನೆ ಮಗುವೂ ಗಂಡಾಗಬೇಕೆನ್ನುವ ಆಸೆ ಇತ್ತು. ಆದರೆ, 2ನೇ ಮಗು ಹೆಣ್ಣಾಗಿದ್ದು ಈತನಿಗೆ ಬೇಸರ ತಂದಿತ್ತು. ಆಗಾಗ ರಾಮೇಶ್ವರಿ ಮೇಲೆ ಎಗರಾಡುತ್ತಿದ್ದ. ಡಿ.20ರಂದು ಮಗುವಿನ ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದಾಗ ಹಲ್ಲೆ ನಡೆಸಿ ಪರಾರಿಯಾಗಿದ್ದ. ಡಿ. 22ರಂದು ಆರೋಪಿ ರಮೇಶನನ್ನು ಪೊಲೀಸರು ಬಂಧಿಸಿದ್ದರು. ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.