ಕುಂದಗೋಳ: ವಿವಿಧ ಯೋಜನೆಗಳಡಿ ನಿವೇಶನ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಕೂಡಲೇ ಹಣ ಮಂಜೂರು ಮಾಡುವಂತೆ ಗುಡೇನಕಟ್ಟಿ ಗ್ರಾಮ ಪಂಚಾಯ್ತಿ ಸದಸ್ಯರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಕೆ. ಚಂದ್ರಶೇಖರ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ಗ್ರಾಪಂ ಸದಸ್ಯ ಶಿವಾನಂದ ಬೀಡನಾಳ, ಈಗಾಗಲೇ ಇಂದಿರಾ, ಅಂಬೇಡ್ಕರ್ ಮತ್ತು ವಿವಿಧ ವಸತಿ ಯೋಜನೆಗಳಡಿ ಮನೆ ನಿರ್ಮಿಸಿಕೊಂಡಿದ್ದಾರೆ. ಮನೆ ನಿರ್ಮಾಣವಾದರೂ ಹಣ ಬಿಡುಗಡೆಯಾಗದಿರುವುದರಿಂದ ತೊಂದರಗೀಡಾಗಿದ್ದಾರೆ. ಹೀಗಾಗಿ, ತಕ್ಷಣ ಹಣ ಬಿಡುಗಡೆ ಮಾಡುವಂತೆ ವಿನಂತಿಸಿದರು. ಮನವಿ ಸ್ವೀಕರಿಸಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಈ ಕುರಿತಂತೆ ಪಿಡಿಓ, ಕಾರ್ಯದರ್ಶಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಸೂಚಿಸುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ರಾಘವೇಂದ್ರ ಕುಸುಗಲ್, ಶಂಕ್ರಪ್ಪ ಬೂದಿಹಾಳ, ಮಲ್ಲಪ್ಪ ಕಾಳೆ, ಶೇಖಪ್ಪ ಸಿದ್ದೂನವರ, ಯಲ್ಲಪ್ಪ ಮಸನಾಳ, ನಾಗಪ್ಪ ಉಂಡಳ್ಳಿ ಉಪಸ್ಥಿತರಿದ್ದರು.