ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳುವಲ್ಲಿ ಬಿಜೆಪಿಗರು ಸಂಪೂರ್ಣ ಎಡವಿದ್ದಾರಲ್ಲದೆ, ಪ್ರತಿಯೊಂದರಲ್ಲಿಯೂ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ. ಇದರಿಂದಾಗಿ ಕೋಟ್ಯಂತರ ರು. ಹರಿದು ಬಂದರೂ ಮೂಲ ಸೌಕರ್ಯಕ್ಕಾಗಿ ಈಗಲೂ ಮಹಾನಗರದ ಜನತೆ ಹಾತೊರೆಯುವಂತಾಗಿದೆ.
ಕೋಟ್ಯಂತರ ರು. ಅನುದಾನ ಹರಿದು ಬಂದಿದ್ದರೂ ಎರಡನೇ ರಾಜಧಾನಿ ಎಂದೇ ಕರೆಯಿಸಿಕೊಳ್ಳುವ ಹು-ಧಾ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ. ಬಿಜೆಪಿಯಲ್ಲಿ ನಡೆದ ಕುರ್ಚಿ ಗುದ್ದಾಟ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅನೈತಿಕ ಚಟುವಟಿಕೆ ನೋಡಿ ಜನತೆ ಕಂಗಾಲಾಗಿದ್ದಾರೆ.
ಜನರ ಆರ್ಶೀವಾದ ದುರುಪಯೋಗಪಡಿಸಿಕೊಂಡರೆ ಸ್ಥಿತಿ ಏನಾಗುತ್ತದೆ ಎಂಬುದನ್ನು ಮತದಾರ ಪ್ರಭು ಸ್ಥಳೀಯ ಸಂಸ್ಥೆ ಚುನಾವಣೆ ಮೂಲಕವೇ ಬಿಜೆಪಿಗೆ ತೋರಿಸಿಕೊಡಲಿದ್ದಾನೆ ಎಂಬುದು ಕಾಂಗ್ರೆಸ್ ಮುಖಂಡ ನಾಗರಾಜ ಛಬ್ಬಿ ಅಭಿಪ್ರಾಯ. ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ 'ಕನ್ನಡಪ್ರಭ'ಕ್ಕೆ ವಿಶೇಷ ಸಂದರ್ಶನ ನೀಡಿದ ಅವರು, ಆಡಳಿತ ಪಕ್ಷದ ಕಾರ್ಯವೈಖರಿ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದರಲ್ಲದೆ, ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಿದ್ದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಳಕೆಯಾಗಿಲ್ಲ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಾಲಿಕೆಗೆ ನೀಡಿದ್ದ ಅನುದಾನವನ್ನು ಅವಳಿನಗರದ ಜನತೆಗೆ ಮೂಲ ಸೌಕರ್ಯ ಒದಗಿಸಿಕೊಡಲು ವ್ಯಯಿಸಿದ್ದರೆ ಈ ಹೊತ್ತಿಗೆ ಮಹಾನಗರ 'ಮಾದರಿ ನಗರ'ವಾಗಿ ಪರಿಣಮಿಸುತ್ತಿತ್ತು.
ಆದರೆ, ಆಡಳಿತ ಪಕ್ಷದವರಿಗೆ ಜನತೆ ಹಿತಕ್ಕಿಂತಲೂ ಸ್ವಾರ್ಥ ಸಾಧನೆಯೇ ಮುಖ್ಯವಾಗಿ ಪರಿಣಮಿಸಿದ್ದಕ್ಕೆ ಮಹಾನಗರದ ಅನೇಕ ಪ್ರದೇಶಗಳು ಈ ವರೆಗೂ ಡಾಂಬರೀಕರಣ ಆಗದೇ ಇರುವುದು ಸಾಕ್ಷಿಯಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಕೊಳಚೆ ಪ್ರದೇಶಗಳು ಹೆಚ್ಚಾಗಿವೆ. ಅಲ್ಲಿ ವಾಸವಾಗಿರುವ ಜನರು, ನಿತ್ಯಕರ್ಮಕ್ಕೆ ಬಯಲು ಪ್ರದೇಶ ಆಶ್ರಯಿಸಬೇಕಾದ ಸ್ಥಿತಿ ಇದೆ. ಒಳಚರಂಡಿ ಜಾಲ ಇನ್ನೂ ವಿಸ್ತರಣೆಯಾಗದೇ ಇರುವ ಹಿನ್ನೆಲೆಯಲ್ಲಿ ಅನೇಕ ಪ್ರದೇಶಗಳಲ್ಲಿ ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ.
ವಿಶ್ವಾಸ ಕಳೆದುಕೊಂಡಿದೆ: ನಾಲ್ಕುವರೆ ವರ್ಷ ರಾಜ್ಯಭಾರ ಮಾಡಿರುವ ಬಿಜೆಪಿ ಮತದಾರರ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದೆ. ಬಡತನ ರೇಖೆಗಿಂತ ಕೆಳಗೆ ವಾಸವಾಗಿರುವ, ಅಲ್ಪಸಂಖ್ಯಾತರಿಗೆ ಹಾಗೂ ಹಿಂದುಳಿದ ವರ್ಗದ ಜನರ ಜೀವನ ಮಟ್ಟ ಸುಧಾರಿಸುವಂತಹ ಒಂದೇ ಒಂದು ಯೋಜನೆ ಸಮಗ್ರ ರೀತಿಯಲ್ಲಿ ಅನುಷ್ಠಾನಕ್ಕೆ ತಂದಿಲ್ಲ. ಇದರಿಂದಾಗಿ ಪ್ರತಿನಿತ್ಯವೂ ಬಡಜನರು ಒಪ್ಪತ್ತಿನ ಗಂಜಿಗಾಗಿ ಪರಿತಪಿಸುವಂತಾಗಿದೆ.
ನಿರ್ವಹಣಾ ಸಮಿತಿ: ಕಾಂಗ್ರೆಸ್ ಪಕ್ಷದ ಬ್ಯಾನರ್ನಲ್ಲಿ ಪಾಲಿಕೆಯ ಚುನಾವಣಾ ಕಣದಲ್ಲಿ ಧುಮುಕಿರುವ ಅಭ್ಯರ್ಥಿಗಳು ಆಯ್ಕೆಯಾದ ನಂತರ, ಆಯಾ ವಾರ್ಡ್ಗಳ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಅನುದಾನದ ಸದ್ಬಳಕೆ ಮಾಡಿಕೊಳ್ಳುವ ನಿರ್ವಹಣಾ ಸಮಿತಿ ರಚಿಸಿ ಪಾರದರ್ಶಕತೆ ಕಾಯ್ದುಕೊಳ್ಳಲು ಪ್ರಯತ್ನಿಸಲಾಗುವುದು. ಈ ಸಮಿತಿಯಲ್ಲಿ ಹಿರಿಯ ಮುಖಂಡರಾದ ವೀರಣ್ಣ ಮತ್ತಿಕಟ್ಟಿ, ಎ.ಎಂ. ಹಿಂಡಸಗೇರಿ ಮತ್ತಿತರ ನಾಯಕರು ಇರಲಿದ್ದಾರೆ.
ಕೇವಲ ರಾಜಕಾರಣಕ್ಕಾಗಿ: ಕೆಜೆಪಿ ಹಾಗೂ ಬಿಎಸ್ಆರ್ ಕಾಂಗ್ರೆಸ್ಗೆ ಕಾರ್ಯಕರ್ತರು ಹಾಗೂ ಮುಖಂಡರೇ ಇಲ್ಲ. ರಾಜಕಾರಣಕ್ಕಾಗಿ ಈ ಪಕ್ಷಗಳಿಂದ ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಸ್ಥಳೀಯ ಸಂಸ್ಥೆಯ ಈ ಚುನಾವಣೆ ಮುಂದೆ ನಡೆಯಲಿರುವ ವಿಧಾನಸಭೆ ಚುನಾವಣೆ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಲಿದೆ.
ಅಭ್ಯರ್ಥಿ ಗೆಲುವಿಗೆ ಶ್ರಮಿಸಿ: ಎಲ್ಲ ಪಕ್ಷಗಳಿಲ್ಲಿ ಟಿಕೆಟ್ ವಂಚಿತರು ಇರುವಂತೆಯೇ ಕಾಂಗ್ರೆಸ್ನಲ್ಲಿಯೂ ಇದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಳ್ಳದೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದೂ ಛಬ್ಬಿ ಕೋರಿದರು.